ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ಗೆ ಇಬ್ಬರು ಬೈಕ್ ಸವಾರರು ಬಲಿ
ಬಿಎಂಡಬ್ಲೂ ಬೈಕ್ನಲ್ಲಿ ಡ್ರಂಕ್ ಅಂಡ್ ಡ್ರೈವ್ ಮಾಡಿ ಹೆಲ್ಮೆಟ್ ಧರಿಸದೆ, ಅತಿವೇಗದಿಂದ ಯಶವಂತಪುರದಿಂದ ಆರ್ಎಮ್ಸಿ ಯಾರ್ಡ್ ರೋಡ್ ಕಡೆಗೆ ಯುವಕರು ಬೈಕ್ ಚಲಾಯಿಸಿಕೊಂಡು ಬಂದಿದ್ದ ವೇಳೆ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು, ಸೆ.22: ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ(Bengaluru) ಯಶವಂತಪುರದ ಆರ್ಎಂಸಿ ಯಾರ್ಡ್ ಬಳಿ ಮುಂಜಾನೆ 3.30 ರ ಸಮಯದಲ್ಲಿ ನಡೆದಿದೆ. ಬೈಕ್(Bike) ಸವಾರರಾದ ಮನಮೋಹನ್(31), ನಿಖಿಲ್(25) ಮೃತ ರ್ದುದೈವಿಗಳು. ಬಿಎಂಡಬ್ಲೂ ಬೈಕ್ನಲ್ಲಿ ಡ್ರಂಕ್ ಅಂಡ್ ಡ್ರೈವ್ ಮಾಡಿ ಹೆಲ್ಮೆಟ್ ಧರಿಸದೆ, ಅತಿವೇಗದಿಂದ ಯಶವಂತಪುರದಿಂದ ಆರ್ಎಮ್ಸಿ ಯಾರ್ಡ್ ರೋಡ್ ಕಡೆಗೆ ಯುವಕರು ಬೈಕ್ ಚಲಾಯಿಸಿಕೊಂಡು ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಹೌದು, ವೇಗವಾಗಿ ಜೊತೆಗೆ ಮದ್ಯದ ಅಮಲಿನಲ್ಲಿದ್ದ ಯುವಕರಿಗೆ ಬೈಕ್ ನಿಯಂತ್ರಣ ಸಿಗದೆ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಇಬ್ಬರೂ ಬೈಕ್ನಿಂದ ಹಾರಿಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಮೃತ ಮನಮೋಹನ್ ಬನಶಂಕರಿ ನಿವಾಸಿ ಎಂಬ ಬಗ್ಗೆ ಮಾಹಿತಿ ಸಿಕ್ಕಿದ್ದು, ಇಬ್ಬರ ಮೃತದೇಹವನ್ನು ಎಮ್ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಟ್ಟು ಹಬ್ಬದ ದಿನ ಜಾಲಿ ರೈಡ್ ಬಂದಿದ್ದ ನಿಖಿಲ್
ಖಾಸಗಿ (ರೇವಾ) ಯುನಿವರ್ಸಿಟಿ ಉಪಕುಲಪತಿ ಮಗನಾಗಿದ್ದ ಮೃತ ನಿಖಿಲ್, ತಡ ರಾತ್ರಿ 12 ರ ವೇಳೆಗೆ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ಗೆಳೆಯ ಮನಮೋಹನ ಕರೆದುಕೊಂಡು ಜಾಲಿ ರೈಡ್ಗೆ ಬಂದಿದ್ದರು. ಈ ವೇಳೆ ಯಶವಂತಪುರ ಬಳಿ ಓವರ್ ಸ್ಪೀಡ್ ನಲ್ಲಿದ್ದ ನಿಖಿಲ್ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಅಪಘಾತಕ್ಕೀಡಾದ ಆಟೋ ಚಾಲಕ ಚಿಕಿತ್ಸೆ ಪಡೆದು ಸ್ಥಳಕ್ಕೆ ಬರುವಷ್ಟರಲ್ಲಿ ಆಟೋ ಮಾಯ, ಸಹಾಯ ಪಡೆದವರೇ ಕದ್ದರು
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ; ಚಾಲಕ ಅಪಾಯದಿಂದ ಪಾರು
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಡಿಕ್ಕಿಯಾದ ಘಟನೆ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ. ಅದೃಷ್ಟವಶಾತ್ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದ ಹಿನ್ನಲೆ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 am, Fri, 22 September 23