ಮಹಿಳೆ ಮೇಲೆ ಹಲ್ಲೆ ನಡೆಸಿ ನಡು ರಸ್ತೆಯಲ್ಲಿ ಬಿಟ್ಟು ಹೋದ ಊಬರ್ ಚಾಲಕ ಅರೆಸ್ಟ್, ಬಯಲಾಯ್ತು ಮತ್ತೊಂದು ಅಕ್ರಮ
ಊಬರ್ ಕ್ಯಾಬ್ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿ ನಡು ರಸ್ತೆಯಲ್ಲಿ ಇಳಿಸಿ ಹೋಗಿದ್ದವನನ್ನು ಹೈಗ್ರೌಂಡ್ಸ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಕೋಟ್ಯಾಂತರ ಹೆಣ್ಣು ಮಕ್ಕಳು ಜೀವನ ಕಟ್ಟಿಕೊಂಡಿರುವ ಐಟಿ ಬಿಟಿ ಸಿಟಿ ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್ ಇಲ್ಲ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮಹಿಳೆಯರ ಮೇಲಿನ ಪುರುಷರ ದಬ್ಬಾಳಿಕೆ ಕಡಿಮೆಯಾಗಿಲ್ಲ. ಇತ್ತೀಚೆಗೆ ನಗರದಲ್ಲಿ ಊಬರ್ ಡ್ರೈವರ್ನಿಂದ ಮಹಿಳೆಯ ಮೇಲೆ ದೌಜನ್ಯ ನಡೆದಿದೆ. ಊಬರ್ ಕ್ಯಾಬ್ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿ ನಡು ರಸ್ತೆಯಲ್ಲಿ ಇಳಿಸಿ ಹೋಗಿದ್ದವನನ್ನು ಹೈಗ್ರೌಂಡ್ಸ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಮಿತ್ ಕುಮಾರ್ ಬಂಧಿತ ಆರೋಪಿ.
ಇಂದಿರಾನಗರದಿಂದ ಏರ್ಪೋರ್ಟ್ ಗೆ ಕ್ಯಾಬ್ ಬುಕ್ ಮಾಡಿದ್ದ ಮಹಿಳೆಯನ್ನು ಪಿಕ್ ಮಾಡಿದ್ದ ಊಬರ್ ಡ್ರೈವರ್ ಅಜಾಗರೂಕತೆಯಿಂದ ಹಾಗೂ ಅತೀ ವೇಗವಾಗಿ ಕಾರು ಡ್ರೈವ್ ಮಾಡಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿ ಸ್ಯಾಂಕಿ ರಸ್ತೆಯಲ್ಲಿ ಬಿಟ್ಟು ತೆರಳಿದ್ದ. ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ವಿಚಾರಣೆ ವೇಳೆ ಆರೋಪಿಯ ಜಾತಕ ಬಯಲಾಗಿದೆ. ಆರೋಪಿ ಅಮಿತ್ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹಣೆಗೆ ಬಂದೂಕಿಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಪೊಲೀಸ್ ಹಾಗೂ ಅವರ ಸಹೋದರನ ವಿರುದ್ಧ ಪ್ರಕರಣ ದಾಖಲು
ಚಂದ್ರಶೇಖರ್ ಎಂಬ ಹೆಸರಿನಲ್ಲಿ ಡಿಎಲ್ ಹಾಗು ಕಾರಿನ ನಂಬರ್ ಪ್ಲೇಟ್ ಮತ್ತು ದಾಖಲಾತಿ ಸಹ ನಕಲಿ ಮಾಡಿಕೊಂಡಿದ್ದ ಆರೋಪಿ ಅಮಿತ್ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ಹಿಂದೆ ಊಬೆರ್ ನಲ್ಲಿ ಬ್ಲಾಕ್ ಲಿಸ್ಟ್ ಆಗಿದ್ದ ಎಂಬುವುದು ತಿಳಿದು ಬಂದಿದೆ. ಬ್ಲಾಕ್ ಲಿಸ್ಟ್ ಆಗಿದ್ದ ಕಾರಣ ಮತ್ತೆ ಊಬರ್ ಈತನನ್ನು ಅಟ್ಯಾಚ್ ಮಾಡಿಕೊಂಡಿರಲಿಲ್ಲ. ಹೀಗಾಗಿ ನಕಲಿ ದಾಖಲಾತಿ ನೀಡಿ ಕೆಲಸಕ್ಕೆ ಸೇರಿದ್ದ. ಈಗ ಇಂತಹ ಕೃತ್ಯ ಎಸಗಿ ಸಿಕ್ಕಿ ಬಿದ್ದಿದ್ದಾನೆ.
ಪಾಲಾಕ್ಷಾ ಮತ್ತು ಮಂಜುನಾಥ್ ಎಂಬುವವರು ಆರೋಪಿಗೆ ನಕಲಿ ದಾಖಲೆಗಳನ್ನು ನೀಡಿದ್ದು ಚಂದ್ರಶೇಖರ್ ಎಂಬಾತನ ಹೆಸರಿನಲ್ಲಿ ಒಂದು ಡಿಎಲ್ ಹಾಗು ಕಾರಿನ ನಕಲಿ ಆರ್ಸಿ ತಯಾರು ಮಾಡಿ ಕೊಟ್ಟಿದ್ರು. ಇದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸಿಮ್ ಕಾರ್ಡ್ ಖರೀದಿ ಮಾಡಿ ಅಮಿತ್ ಊಬರ್ ಓಡಿಸುತ್ತಿದ್ದ. ಸದ್ಯ ಹೈಗ್ರೌಂಡ್ಸ್ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಹಲವಾರು ಚಾಲಕರಿಗೆ ನಕಲಿ ದಾಖಲೆಗಳನ್ನು ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಅನ್ವಯ ಊಬರ್ ಕಂಪನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಚಾಲಕರ ಮಾಹಿತಿ ಕ್ರಾಸ್ ಚೆಕ್ ಮಾಡುವಂತೆ ಸೂಚಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ