ಬೆಂಗಳೂರು: ಉಬರ್, ಓಲಾ ಕಂಪನಿಗೆ ನೀಡಿದ್ದ ಗಡುವು ಅಂತ್ಯ ಹಿನ್ನೆಲೆ ಆರ್ಟಿಒ ಅಧಿಕಾರಿಗಳಿಂದ ವಾಹನಗಳನ್ನು ಸೀಜ್ ಮಾಡಲಾಗಿದೆ. ಬೆಂಗಳೂರಿನ ಜಯನಗರ ವ್ಯಾಪ್ತಿಯಲ್ಲಿ ಆರ್ಟಿಒ ಕಾರ್ಯಾಚರಣೆ ಮಾಡಿದೆ. ಆರ್ಟಿಒ ಅಧಿಕಾರಿಗಳ ಕ್ರಮ ಖಂಡಿಸಿ ಆಟೋ ಚಾಲಕರು ಧರಣಿ ಮಾಡಿದ್ದು, ಜಯನಗರ ಆರ್ಟಿಒ ಕಚೇರಿಗೆ ಮುತ್ತಿಗೆ ಹಾಕಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರು ದೌಡಾಯಿಸಿದ್ದು, ಧರಣಿನಿರತ ಚಾಲಕರನ್ನು ಪೊಲೀಸರು ಮನವೊಲಿಸಲು ಯತ್ನಿಸಿದರು.
ಓಲಾ-ಉಬರ್ ಆಟೋ ಸೇವೆಯೇ ಅಕ್ರಮ: ನೋಟಿಸ್ ಕೊಟ್ಟು ಮೂರು ದಿನವಾದ್ರು ಪ್ರತಿಕ್ರಿಯೆ ನೀಡದ ಕಂಪನಿಗಳು
ಬೆಂಗಳೂರಿನಲ್ಲಿ ಆಟೋ ಸೇವೆಗೆ ಮೀಡಿಯೇಟರ್ ಆಗಿರುವ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್ಫಾರ್ಮ್ ಹೆಸ್ರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ನೋಟಿಸ್ ನೀಡಿದೆ. ಆದ್ರೆ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡೋಂಟ್ ಕೇರ್ ಅಂತಿವೆ.
ಓಲಾ, ಉಬರ್, ರಾಪಿಡೋ ವಿರುದ್ಧ ಸಾಲು ಸಾಲು ದೂರುಗಳು ಕೇಳಿ ಬರ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇಷ್ಟು ವರ್ಷ ಸುಮ್ಮನೆ ಕುಳಿತಿದ್ದ ಅಧಿಕಾರಿಗಳು ಈಗ, ನಾವು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಕೊಟ್ಟಿರೋದು. ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರ್ಯಾಪಿಡೋಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು. ಆದ್ರೆ ಕೊಟ್ಟ ಕಾಲಾವಕಾಶ ಮುಗಿದ್ರೂ ಅಧಿಕಾರಿಗಳು ಯಾವುದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡಿಲ್ಲ.
ಓಲಾ, ಉಬರ್ ಕಂಪನಿಗಳು ಕ್ಯಾಬ್ ಅಗ್ರಿಗೇಟರ್ ಪರವಾನಗಿ ಮಾತ್ರ ಹೊಂದಿವೆ. ಆದ್ರೆ ನಿಯಮ ಗಾಳಿಗೆ ತೂರಿ ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡ್ತಿದೆ. ಸರ್ಕಾರ ಆಟೋ ಪ್ರಯಾಣಕ್ಕೆ ದರ ನಿಗದಿ ಮಾಡಿದೆ. ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂಪಾಯಿ, 2 ಕಿಲೋ ಮೀಟರ್ ಬಳಿಕ ಪ್ರತಿ ಕಿಲೋ ಮೀಟರ್ಗೆ 15 ರೂಪಾಯಿ ನಿಗದಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 5 ಗಂಟೆವರೆಗೂ ಬಾಡಿಗೆ ಶೇ.50ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಆದ್ರೆ ಈ ನಿಯಮ ಅಗ್ರಿಗೇಟರ್ ಟ್ಯಾಕ್ಸಿ ಕಂಪನಿಗಳಿಗೆ ಅನ್ವಯಿಸಲ್ಲ. ಯಾಕಂದ್ರೆ ಓಲಾ, ಉಬರ್ ಬಳಿ ಇರೋದು ಟ್ಯಾಕ್ಸಿ ಸೇವೆಯ ಲೈಸನ್ಸ್. ಹೀಗಾಗಿ ಗ್ರಾಹಕರ ಬಳಿ ಓಲಾ, ಉಬರ್, ರಾಪಿಡೋ ಸುಲಿಗೆ ಮಾಡ್ತಿವೆ. 2 ಕಿ.ಮೀಟರ್ಗೆ 100 ರೂಪಾಯಿ ಪಡೆದು, ಆಟೋ ಚಾಲಕರಿಗೆ 60 ರೂಪಾಯಿ ನೀಡಿ 40 ರೂಪಾಯಿ ಜೇಬಿಗೆ ಇಳಿಸ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:22 pm, Mon, 10 October 22