ಕೇಸು ಹಳೆಯದ್ದೇ ಆದರೂ ಇಂಟರೆಸ್ಟಿಂಗ್! 50 ರೂ ಲಂಚಕ್ಕೆ ಕಡ್ಡಾಯ ನಿವೃತ್ತಿ ಶಿಕ್ಷೆ-ಮತ್ತೊಮ್ಮೆ ಪರಿಶೀಲಿಸಲು ಹೈಕೋರ್ಟ್ ಆದೇಶ
Karnataka High Court: ಈ ಕೇಸು ತುಸು ಹಳೆಯದ್ದೇ ಆದರೂ ಇಂಟರೆಸ್ಟಿಂಗ್ ಆಗಿದೆ! ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರ್ಕಾರಿ ಉದ್ಯೋಗಿಯನ್ನು 50 ರೂಪಾಯಿ ಲಂಚ ಸ್ವೀಕರಿಸಿದ ಕಾರಣಕ್ಕೆ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿರುವುದು ಸಮಂಜಸವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಕೇಸು ತುಸು ಹಳೆಯದ್ದೇ (WP 110912/2017) ಆದರೂ ಇಂಟರೆಸ್ಟಿಂಗ್ ಆಗಿದೆ! ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರ್ಕಾರಿ ಉದ್ಯೋಗಿಯನ್ನು 50 ರೂಪಾಯಿ ಲಂಚ (Bribe) ಸ್ವೀಕರಿಸಿದ ಕಾರಣಕ್ಕೆ ಕಡ್ಡಾಯ ನಿವೃತ್ತಿ ಶಿಕ್ಷೆ (compulsory retirement) ನೀಡಿರುವುದು ಸಮಂಜಸವಲ್ಲ ಎಂದು ಹೈಕೋರ್ಟ್ (karnataka high court) ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ಎಂ.ಎಸ್. ಕಡ್ಕೋಳ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಜಿ. ಪಂಡಿತ್ ಹಾಗೂ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ವಿಭಾಗೀಯ ಪೀಠ ಶಿಕ್ಷೆಯನ್ನು ರದ್ದುಪಡಿಸಿದೆ. ಅಲ್ಲದೇ, ಪ್ರಕರಣವನ್ನು ಮತ್ತೆ ಹೊಸದಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಶಿಸ್ತು ಪ್ರಾಧಿಕಾರಕ್ಕೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಚಂದ್ರಾಚಾರಿ (Chandrachari) ಎಂಬುವರನ್ನು 1998ರಲ್ಲಿ ಬ್ಯಾಡಗಿಯಿಂದ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಕಡತವನ್ನು ವಿಲೇವಾರಿ ಮಾಡಲು 150 ರೂಪಾಯಿ ಲಂಚ ಕೇಳಿದ್ದರೆಂದು ದೂರು ನೀಡಲಾಗಿತ್ತು. ಅದರಂತೆ 50 ರೂಪಾಯಿ ಲಂಚ ಪಡೆಯುವ ವೇಳೆ ಎಂ.ಎಸ್. ಕಡ್ಕೋಳ್ (MS Kadkol) ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 7, 13(1) ಹಾಗೂ 13(2) ಅಡಿ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಇಲಾಖಾ ತನಿಖೆ ಕೂಡ ನಡೆಸಲಾಗಿತ್ತು. ತನಿಖಾಧಿಕಾರಿ ದೋಷಾರೋಪಣೆ ಸಲ್ಲಿಸಿದ ಬಳಿಕ ಶಿಸ್ತುಪ್ರಾಧಿಕಾರ 2004ರ ಸೆಪ್ಟೆಂಬರ್ 7ರಂದು ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿತ್ತು.
ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2016ರ ಜೂನ್ 1ರಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಎಂ.ಎಸ್. ಕಡ್ಕೋಳ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 50 ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸೇವೆಯಿಂದ ಕಡ್ಡಾಯ ನಿವೃತ್ತಿ ನೀಡಿರುವ ಕ್ರಮ ಸೂಕ್ತವಲ್ಲ.
ದೂರುದಾರರ ಯಾವುದೇ ಕೆಲಸ ಅರ್ಜಿದಾರರ ಮುಂದೆ ಇರಲಿಲ್ಲ. ಅರ್ಜಿದಾರರ ವಿರುದ್ಧ ಲಂಚ ಕೇಳಿದ್ದಾರೆ ಎಂಬ ಯಾವುದೇ ದೂರು ಇರಲಿಲ್ಲ. ಹಾಗಿದ್ದೂ ಅವರ ಬಳಿ ಲಂಚ ನೀಡಿದ್ದಾರೆ ಎನ್ನಲಾದ 50 ರೂ ಸಿಕ್ಕಿತ್ತು ಎಂಬ ಕಾರಣಕ್ಕೆ ಕಡ್ಡಾಯ ನಿವೃತ್ತಿ ಸರಿಯಲ್ಲ ಎಂದು ವಾದಿಸಿದ್ದರು. ವಾದ ಪರಿಗಣಿಸಿದ ಹೈಕೋರ್ಟ್ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಇತ್ಯರ್ಥಪಡಿಸಲು ಆದೇಶಿಸಿದೆ.
ಕೇಸು ಸ್ವಾರಸ್ಯಕರವಾಗಿದೆ:
ಲೋಕೋಪಯೋಗಿ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದ ಕಡಕೋಳ್ ಅವರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿ ಮನೆಗೆ ಕಳುಹಿಸುವಾಗ 15 ವರ್ಷಗಳ ಸೇವೆ ಉಳಿದಿತ್ತು.
ಬ್ಯಾಡಗಿಯಿಂದ ಧಾರವಾಡಕ್ಕೆ ವರ್ಗಾವಣೆಗೊಂಡ ನಂತರ ದೂರುದಾರರ ಸೇವಾ ದಾಖಲೆಗಳನ್ನು ಕಳುಹಿಸಲು 150 ರೂ.ಗೆ ಬೇಡಿಕೆಯಿಟ್ಟಿದ್ದು ಕಡ್ಕೋಳ ಅವರ ಸಹೋದ್ಯೋಗಿ ನಾಯ್ಕರ್. ವಾಸ್ತವವಾಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಾಚಾರಿ ಅವರನ್ನು ಬಂಧಿಸಲು ಬಲೆ ಬೀಸಲಾಗಿತ್ತು.
ಅಂದು ನಾಯ್ಕರ್‌ಗೆ ಚಂದ್ರಾಚಾರಿಯು ತಲಾ 50 ರೂ.ಗಳ ಮೂರು ಕರೆನ್ಸಿ ನೋಟುಗಳನ್ನು ನೀಡಿದ್ದು, ಅದರಲ್ಲಿ ಒಂದನ್ನು ಕಡ್ಕೋಳಗೆ ನೀಡಿದ್ದಾರೆ. ವಿಚಾರಣೆಯ ನಂತರ ಇಬ್ಬರನ್ನೂ ತಪ್ಪಿತಸ್ಥರೆಂದು ಪರಿಗಣಿಸಿ ಕಡ್ಡಾಯ ನಿವೃತ್ತಿ ಆದೇಶ ಹೊರಡಿಸಲಾಯಿತು. 2004ರ ಸೆಪ್ಟೆಂಬರ್ 7ರ ಕಡ್ಡಾಯ ನಿವೃತ್ತಿ ಆದೇಶವನ್ನು ಪ್ರಶ್ನಿಸಿ ಧಾರವಾಡದ ನಿವಾಸಿ ಕಡ್ಕೋಳ್ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಮುಂದೆ ಅರ್ಜಿ ಸಲ್ಲಿಸಿದರು. ಟ್ರಿಬ್ಯೂನಲ್ ಜೂನ್ 1, 2016 ರಂದು ಅದನ್ನು ವಜಾಗೊಳಿಸಿತು.
ತಮ್ಮ ಮನವಿಯಲ್ಲಿ, ಕಡ್ಕೋಲ್ ಅವರು ನಾಯ್ಕರ್‌ರಿಂದ ಸಹಜವಾಗಿಯೇ 50 ರೂಪಾಯಿ ‘ಕೈ ಸಾಲ’ ಪಡೆದಿದ್ದಾರೆ (hand loan). ಆದರೆ ಅವರು ಚಂದ್ರಾಚಾರಿಯಿಂದ ಲಂಚವಾಗಿ ಹಣವನ್ನು ಕೇಳಲಿಲ್ಲ ಅಥವಾ ಸ್ವೀಕರಿಸಲಿಲ್ಲ ಎಂಬುದು ವಾದವಾಗಿತ್ತು. (ಮೂಲ: ಲಾ ಟೈಂ ಡಾಟ್ ಇನ್)
Published On - 2:20 pm, Mon, 10 October 22