ಗುಂಡಿ ತಪ್ಪಿಸುವ ಯತ್ನದಲ್ಲಿ ಕೆಳಗೆ ಬಿದ್ದಿದ್ದ ಉಮಾದೇವಿ ನಿಧನ: ಕೆಎಸ್​ಆರ್​ಟಿಸಿ ಬಸ್ ಚಾಲಕನ ಬಂಧನ

ಕೆಳಗೆ ಬಿದ್ದಿದ್ದ ಉಮಾದೇವಿ ಅವರ ಮೇಲೆ ಕೆಎಸ್​ಆರ್​ಟಿಸಿ ಬಸ್ ಹರಿದಿತ್ತು. ತಕ್ಷಣ ಅವರನ್ನು ರಾಜಾಜಿನಗರ ಇಎಸ್​ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಗುಂಡಿ ತಪ್ಪಿಸುವ ಯತ್ನದಲ್ಲಿ ಕೆಳಗೆ ಬಿದ್ದಿದ್ದ ಉಮಾದೇವಿ ನಿಧನ: ಕೆಎಸ್​ಆರ್​ಟಿಸಿ ಬಸ್ ಚಾಲಕನ ಬಂಧನ
ಸಂಗ್ರಹ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 18, 2022 | 7:47 AM

ಬೆಂಗಳೂರು: ನಗರದ ಸುಜಾತಾ ಥಿಯೇಟರ್​ ಬಳಿ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದಿದ್ದ ಉಮೇದೇವಿ (50) ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಕೆಳಗೆ ಬಿದ್ದಿದ್ದ ಉಮಾದೇವಿ ಅವರ ಮೇಲೆ ಕೆಎಸ್​ಆರ್​ಟಿಸಿ ಬಸ್ ಹರಿದಿತ್ತು. ತಕ್ಷಣ ಅವರನ್ನು ರಾಜಾಜಿನಗರ ಇಎಸ್​ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ಕೆಎಸ್​ಆರ್​ಟಿಸಿ ಬಸ್ ಚಾಲಕ ಮಾರುತಿ ರಾವ್​​​ ಅವರನ್ನು ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತ ಉಮಾದೇವಿ ಪುತ್ರಿ ವನಿತಾ ನೀಡಿದ ದೂರಿನ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಅಧಿಕಾರಿಗಳು ಇನ್ನು ಮುಂದೆ ವಾರಕ್ಕೆ ಇಂತಿಷ್ಟು ದೂರ ನಡೆದು ಸಮಸ್ಯೆಗಳನ್ನು ಗಮನಿಸಬೇಕು, ಜನರ ಅಹವಾಲು ಆಲಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ನಡೆದು, ರಸ್ತೆ ದುರಸ್ತಿ, ಕಸದ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಹಿನ್ನೆಲೆ

ನಗರದ ಸುಜಾತ ಥಿಯೇಟರ್ ಬಳಿ ಹೋಂಡಾ ಆಕ್ಟೀವಾದಲ್ಲಿ ಇಬ್ಬರು ಮಹಿಳೆಯರು ಬರುತ್ತಿದ್ದರು. ಈ ವೇಳೆ ಗಾಡಿ ಓಡಿಸುತ್ತಿದ್ದ ಮಹಿಳೆ ಗುಂಡಿ ತಪ್ಪಿಸಲು ಯತ್ನಿಸಿ, ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಹಿಂದೆ ಕುಳಿತಿದ್ದ ಉಮಾದೇವಿ ಕೆಳಗೆ ಬಿದ್ದಿದ್ದರು. ಈ ವೇಳೆ ಹಿಂದೆ ಬರುತ್ತಿದ್ದ ಬಸ್ ಮಹಿಳೆಯ ಮೇಲೆ ಹರಿದಿತ್ತು. ಅವರನ್ನು ತಕ್ಷಣ ರಾಜಾಜಿನಗರ ಇಎಸ್​ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಈ ಘಟನೆಗೆ ರಸ್ತೆಯಲ್ಲಿದ್ದ ಗುಂಡಿಯೇ ಕಾರಣ. ಗುಂಡಿ ಇರಲಿಲ್ಲ ಎಂದಾದರೆ ಮಹಿಳೆಗೆ ಏನೂ ಆಗುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಜಮೀರ್ ಘಟನೆ ಬಗ್ಗೆ ಮಾಹಿತಿ ನೀಡಿದರು. ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಡಿಸಿಪಿ ಕುಲದೀಪ್ ಜೈನ್, ಅಪಘಾತದಲ್ಲಿ ತಾಯಿ-ಮಗಳು ಗಾಯಗೊಂಡಿದ್ದಾರೆ. ಬೈಕ್ ಹಿಂಬದಿ ಕುಳಿತಿದ್ದ ಉಮಾ ಅವರ ಸ್ಥಿತಿ ಗಂಭೀರವಾಗಿದೆ. ಕೆಎಸ್​ಆರ್​ಟಿಸಿ ಬಸ್​ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಮನೆಕೆಲಸ ಮಾಡುತ್ತಿದ್ದ ಉಮಾದೇವಿ

ಮೃತ ಉಮಾದೇವಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಉಮಾದೇವಿ ಗಂಡ ಐದು ವರ್ಷದ ಹಿಂದೆ ಮೃತಪಟ್ಟಿದ್ದರು. ಸದ್ಯ ಗಾಯತ್ರಿ ನಗರ ವಾಸವಿದ್ದ ಉಮಾದೇವಿ ನಿನ್ನೆ ಶ್ರೀನಗರದ ಮಗಳ ಮನೆಗೆ ತೆರಳಿದ್ದರು. ಇಂದು ಮಗಳು ಗಾಯತ್ರಿ ನಗರಕ್ಕೆಂದು ಕರೆದುಕೊಂಡು ಹೊಗುವಾಗ ಘಟನೆ ನಡೆದಿದೆ. ಮನೆಕೆಲಸ ಮಾಡಿ ಜೀವನ ಮಾಡುತಿದ್ದ ಉಮಾದೇವಿ ಮನೆಯೊಂದರ ಮಗುವಿನ ಕೇರ್ ಟೇಕರ್ ಆಗಿದ್ದರು. ಇವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಈಗಾಗಲೇ ಇಬ್ಬರಿಗೆ ಮದುವೆಯಾಗಿದೆ. ಕೊನೆ ಮಗಳ ಮದುವೆ ಇನ್ನು ಆಗಿಲ್ಲ.

ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳಿಗೆ ಕ್ಲಾಸ್

ಘಟನೆಯ ನಂತರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರದ ಪೂರ್ವ ವಲಯದಲ್ಲಿ ಕಾಲ್ನಡಿಗೆ ಮೂಲಕ ಜನರ ಸಮಸ್ಯೆ ಆಲಿಸಿದರು. ಹೆಣ್ಣೂರು ಮುಖ್ಯ ರಸ್ತೆ, ಬಾಣಸವಾಡಿ ಕಡೆಗಳಲ್ಲಿ ಓಡಾಡಿ ಜನರನ್ನು ಮಾತನಾಡಿಸಿದರು. ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಅವರು, ‘ಒಂದು ಅಮೂಲ್ಯ ಜೀವ ಹೋಗಿದೆ. ಈಗ ತನಿಖೆ ನಡೆಯುತ್ತಿದೆ, ಯಾರ‌ ತಪ್ಪು ಅಂತಾ ಗೊತ್ತಾಗುತ್ತದೆ. ಅಧಿಕಾರಿಗಳ ತಪ್ಪಾ, ಗುತ್ತಿಗೆದಾರರ ತಪ್ಪಾ ಎನ್ನುವುದು ಗೊತ್ತಾದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ಮಳೆ ಬರುತ್ತಿರುವ ಕಾರಣ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಅದಕ್ಕೆ ಜಲ್ಲಿ ಕಲ್ಲು ಹಾಕುತ್ತಿದ್ದೇವೆ’ ಎಂದು ಹೇಳಿದ್ದರು.

ಪ್ರತಿಭಟನೆ

ಅಪಘಾತದಿಂದ ಮಹಿಳೆಯೊಬ್ಬರು ಮೃತಪಟ್ಟ ನಂತರ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಆಮ್ ಆದ್ಮಿ ಪಾರ್ಟಿ, ಕೆಆರ್​ಎಸ್ ಪಾರ್ಟಿ ಕಾರ್ಯಕರ್ತರು ಗುಂಡಿಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸಿದರು. ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

Published On - 7:47 am, Tue, 18 October 22