ಉತ್ತರಾಖಂಡದಲ್ಲಿ ದುರಂತ: ರಸ್ತೆ ಮಾರ್ಗವಾಗಿ ಮೃತದೇಹಗಳ ಸ್ಥಳಾಂತರ, ಗೂಗಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಶಿರಸಿ ಯುವತಿ ಸಾವು
ಉತ್ತರಾಖಂಡ್ ಟ್ರೆಕ್ಕಿಂಗ್ ದುರಂತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವತಿ ಪದ್ಮಿನಿ ಮೃತಪಟ್ಟಿದ್ದಾರೆ. ಇವರು ಬೆಂಗಳೂರಿನ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ರಸ್ತೆ ಮಾರ್ಗವಾಗಿ ಡೆಹ್ರಾಡೂನ್ ನಿಂದ ದೆಹಲಿಗೆ 9 ಮೃತದೇಹಗಳ ಸ್ಥಳಾಂತರ ಮಾಡಲಾಗುತ್ತೆ. ನಾಳೆ ಬೆಳಗ್ಗೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಮೃತದೇಹಗಳ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.
ಬೆಂಗಳೂರು, ಜೂನ್.06: ಉತ್ತರಾಖಂಡದಲ್ಲಿ (Uttarakhand) ರಾಜ್ಯದ ಚಾರಣಿಗರ ರಕ್ಷಣಾ ಕಾರ್ಯಾಚರಣೆ ವಿಚಾರಕ್ಕೆ ಸಂಬಂಧಿಸಿ ಉತ್ತರಕಾಶಿಯಿಂದ ರಕ್ಷಿಸಲ್ಪಟ್ಟ 5 ಚಾರಣಿಗರು ಮತ್ತು 9 ಮೃತದೇಹಗಳ ಏರ್ ಲಿಫ್ಟ್ ಕೊಂಚ ವಿಳಂಬವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿಂದೆ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅವರು ಇಂದು ಸಂಜೆ ವೇಳೆಗೆ ಬೆಂಗಳೂರಿಗೆ ಮೃತದೇಹಗಳು ತಲುಪಲಿವೆ ಎಂದು ತಿಳಿಸಿದ್ದರು. ಆದರೆ ಮಧ್ಯಾಹ್ನ 2.30ಕ್ಕೆ ಮೃತದೇಹಗಳ ಹೊತ್ತ ಹೆಲಿಕಾಫ್ಟರ್ ಡೆಹ್ರಾಡೂನ್ ತಲುಪಿದೆ. ಕಾನೂನಾತ್ಮಕ ಪ್ರಕ್ರಿಯೆಗಳ ಕಾರಣದಿಂದಾಗಿ ಏರ್ ಲಿಫ್ಟ್ ನಲ್ಲಿ ವಿಳಂಬವಾಗಲಿದೆ. ಅಲ್ಲದೆ ಚಾರ್ಟರ್ಡ್ ಫ್ಲೈಟ್ ಲಭ್ಯವಾಗದ ಕಾರಣ ಇಂದು ಡೆಹ್ರಾಡೂನ್ ನಿಂದ ಬೆಂಗಳೂರಿಗೆ ಏರ್ ಕ್ರಾಫ್ಟ್ ಮೂಲಕ ಮೃತದೇಹಗಳ ಸ್ಥಳಾಂತರ ಇಲ್ಲ ಎನ್ನಲಾಗುತ್ತಿದೆ.
ಇಂದು ರಸ್ತೆ ಮಾರ್ಗವಾಗಿ ಡೆಹ್ರಾಡೂನ್ ನಿಂದ ದೆಹಲಿಗೆ 9 ಮೃತದೇಹಗಳ ಸ್ಥಳಾಂತರ ಮಾಡಲಾಗುತ್ತೆ. ನಾಳೆ ಬೆಳಗ್ಗೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಮೃತದೇಹಗಳ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.
ಗೂಗಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಶಿರಸಿ ಯುವತಿ ಸಾವು
ಇನ್ನು ಉತ್ತರಾಖಂಡದ ಸಹಸ್ತ್ರತಲ್‌ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟ ಕರ್ನಾಟಕದ ಚಾರಣಿಗರ ಪೈಕಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವತಿ ಪದ್ಮಿನಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪದ್ಮಿನಿ ಸಾವಿನ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾಹಿತಿ ಸಿಕ್ಕಿದೆ. ಶಿರಸಿ ತಾಲೂಕಿನ ಜಾಗನಹಳ್ಳಿ ನಿವಾಸಿ ಪದ್ಮಿನಿ ಹೆಗಡೆ(35) ಮೃತ ದುರ್ದೈವಿ. ಬೆಂಗಳೂರಿನಲ್ಲಿ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪದ್ಮಿನಿ ಮೇ 9ರಿಂದ ಜೂನ್ 7ರವರೆಗೆ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದಿದ್ದರು. ಜೂ.4ರಂದು ಮುಂಬೈನಲ್ಲಿರುವ ತಾಯಿ ಜೊತೆ ಮಾತನಾಡಿದ್ದರು. ಕುಟುಂಬಕ್ಕೆ ಯುವತಿ ನಾಪತ್ತೆಯ ಮಾಹಿತಿಯಷ್ಟೇ ನೀಡಲಾಗಿದ್ದು ಇನ್ನೂ ಸಾವಿನ ವಿಚಾರ ತಿಳಿಸಿಲ್ಲ.
ಇದನ್ನೂ ಓದಿ: ಉತ್ತರಾಖಂಡ ಅಧಿಕಾರಿಗಳ ಜೊತೆ ಕೃಷ್ಣ ಭೈರೇಗೌಡರ ಸಭೆ ಮುಕ್ತಾಯ; ಕನ್ನಡಿಗರ ಮೃತದೇಹ ಇಂದು ಸಂಜೆ ಬೆಂಗಳೂರಿಗೆ
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ ತೆರಳಿದ್ದ 20 ಜನರ ಪೈಕಿ 9 ಮಂದಿ ಅಲ್ಲಿನ ಹಿಮಪಾತದಿಂದಾಗಿ ಮೃತಪಟ್ಟಿದ್ದಾರೆ. ಮೃತ ಚಾರಣಿಗರ ಮೃತದೇಹವನ್ನು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ ರವಾನಿಸುವ ಸಲುವಾಗಿ ಉತ್ತರಾಖಂಡ ಮುಖ್ಯಕಾರ್ಯದರ್ಶಿ ರಾಧಾ ರಾತುರಿ ಅವರ ಜೊತೆ ಕೃಷ್ಣಬೈರೇಗೌಡ ಮಾತುಕತೆ ನಡೆಸಿದ್ದರು. ಈ ವೇಳೆ ಉತ್ತರಾಖಂಡ ಮುಖ್ಯಕಾರ್ಯದರ್ಶಿ ಚಾರ್ಟರ್ ಫ್ಲೈಟ್ ಮೂಲಕ ಮೃತದೇಹವನ್ನು ಸಾಗಿಸಲು ಒಪ್ಪಿಕೊಂಡಿದ್ದರು. ಆದರೆ ಈಗ ಚಾರ್ಟರ್ಡ್ ಫ್ಲೈಟ್ ಲಭ್ಯವಾಗದ ಕಾರಣ ಇಂದು ಡೆಹ್ರಾಡೂನ್ ನಿಂದ ಬೆಂಗಳೂರಿಗೆ ಏರ್ ಕ್ರಾಫ್ಟ್ ಮೂಲಕ ಮೃತದೇಹಗಳ ಸ್ಥಳಾಂತರ ಇಲ್ಲ ಎನ್ನಲಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ