ಉತ್ತರಾಖಂಡ ಅಧಿಕಾರಿಗಳ ಜೊತೆ ಕೃಷ್ಣ ಭೈರೇಗೌಡರ ಸಭೆ ಮುಕ್ತಾಯ; ಕನ್ನಡಿಗರ ಮೃತದೇಹ ಇಂದು ಸಂಜೆ ಬೆಂಗಳೂರಿಗೆ

ಉತ್ತರಾಖಂಡ್ ಚಾರಣಕ್ಕೆ ತೆರಳಿದ್ದ ಕನ್ನಡಿಗರ ಮೃತದೇಹಗಳು ಪತ್ತೆಯಾಗಿದ್ದು ಇಂದು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತೆ. ಮೃತದೇಹಗಳನ್ನು ಸ್ಥಳಾಂತರಿಸಲು ಏರ್ ಕ್ರಾಫ್ಟ್ ವ್ಯವಸ್ಥೆ ಮಾಡುವಂತೆ ಉತ್ತರಾಖಂಡ ಸರ್ಕಾರಕ್ಕೆ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ.

ಉತ್ತರಾಖಂಡ ಅಧಿಕಾರಿಗಳ ಜೊತೆ ಕೃಷ್ಣ ಭೈರೇಗೌಡರ ಸಭೆ ಮುಕ್ತಾಯ; ಕನ್ನಡಿಗರ ಮೃತದೇಹ ಇಂದು ಸಂಜೆ ಬೆಂಗಳೂರಿಗೆ
ಉತ್ತರಾಖಂಡ ಅಧಿಕಾರಿಗಳ ಜೊತೆ ಕೃಷ್ಣ ಭೈರೇಗೌಡರ ಸಭೆ ಮುಕ್ತಾಯ
Follow us
| Updated By: ಆಯೇಷಾ ಬಾನು

Updated on: Jun 06, 2024 | 11:39 AM

ಬೆಂಗಳೂರು, ಜೂನ್. 06: ಉತ್ತರಾಖಂಡದ (Uttarakhand) ಸಹಸ್ತ್ರತಲ್‌ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಚಾರಣಿಗರು ಅಪಾಯಕ್ಕೆ ಸಿಲುಕಿದ್ದು, ಈ ಪೈಕಿ 9 ಮಂದಿ ಮೃತಪಟ್ಟಿದ್ದಾರೆ. ಉಳಿದವರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆ ಮುಂದುವರೆದಿದೆ. ಇಂದು ಬೆಳಗಿನ ಜಾವ ಮತ್ತೆ ನಾಲ್ವರ ಶವ ಪತ್ತೆಯಾಗಿದೆ. ಮತ್ತೊಂದೆಡೆ ಬೆಂಗಳೂರಿಗೆ ಕನ್ನಡಿಗರ ಶವಗಳನ್ನು ತರುವ ಬಗ್ಗೆ ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ರಾಧಾ ರತೂರಿ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ರಂಜಿತ್ ಸಿನ್ಹಾ ಜೊತೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda)ಅವರು ಡೆಹ್ರಾಡೂನ್​ನಲ್ಲಿ ಸಭೆ ನಡೆಸಿದ್ದು ಸಭೆ ಯಶಸ್ವಿಯಾಗಿದೆ.

ಉತ್ತರಾಖಂಡ್​ಗೆ ಚಾರಣಕ್ಕೆ ತೆರಳಿದ್ದ 9 ಕನ್ನಡಿಗರು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಮತ್ತೆ ನಾಲ್ವರ ಶವ ಸಿಕ್ಕಿದ್ದು ಅವರನ್ನು ಪದ್ಮನಾಭ, ವೆಂಕಟೇಶ್ ಪ್ರಸಾದ್, ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ ಎಂದು ಗುರುತಿಸಲಾಗಿದೆ. ಉತ್ತರಕಾಶಿಯ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ತಯಾರಿ ನಡೆದಿದೆ. ಬೆಂಗಳೂರಿಗೆ ಕನ್ನಡಿಗರ ಮೃತದೇಹ ರವಾನೆ ಬಗ್ಗೆ ಉತ್ತರಖಂಡ ಅಧಿಕಾರಿಗಳ ಜೊತೆ ನಡೆದ ಮಾತುಕತೆ ಯಶಸ್ವಿಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಬೆಂಗಳೂರಿಗೆ ಮೃತದೇಹ ರವಾನೆ ಮಾಡುವೆ ಸಾಧ್ಯತೆ ಇದೆ ಎಂದು ಟ್ವಿಟರ್​ ಮೂಲಕ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ ಚಾರಣಕ್ಕೆ ತೆರಳಿದ್ದ 9 ಜನ ಸಾವು; 13 ಪ್ರವಾಸಿಗರ ರಕ್ಷಣೆ, ಹೆಲ್ಪ್​ಲೈನ್​ ನಂಬರ್ ಸ್ಥಾಪನೆ​

ಇಂದು ಮಧ್ಯಾಹ್ನ 12 ಗಂಟೆಗೆ ಉತ್ತರ ಕಾಶಿಯಿಂದ ಡೆಹ್ರಾಡೂನ್​ಗೆ ಎಲ್ಲಾ 9 ಮೃತದೇಹಗಳ ಏರ್ ಲಿಫ್ಟ್ ಮಾಡಲಾಗುತ್ತೆ. ಮೃತದೇಹಗಳನ್ನು ಸ್ಥಳಾಂತರಿಸಲು ಏರ್ ಕ್ರಾಫ್ಟ್ ವ್ಯವಸ್ಥೆ ಮಾಡುವಂತೆ ಉತ್ತರಾಖಂಡ ಸರ್ಕಾರಕ್ಕೆ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದು ಏರ್ ಕ್ರಾಫ್ಟ್ ವ್ಯವಸ್ಥೆ ಮಾಡಲು ಉತ್ತರಾಖಂಡ ಸರ್ಕಾರ ಒಪ್ಪಿದೆ. ಹೀಗಾಗಿ ಮಧ್ಯಾಹ್ನ ಡೆಹ್ರಾಡೂನ್​ಗೆ ಮೃತದೇಹಗಳು ತಲುಪಿದ ನಂತರ ಇಂದು ಸಂಜೆಯೇ ಡೆಹ್ರಾಡೂನ್ ನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. 5 ಚಾರಣಿಗರನ್ನು ಇಂದು ಬೆಳಗ್ಗೆ ಹೆಲಿಕಾಫ್ಟರ್ ಮೂಲಕ ಡೆಹ್ರಾಡೂನ್​ಗೆ ಸ್ಥಳಾಂತರ ಮಾಡಲಾಗಿದೆ.

ಇನ್ನು ಈ ಘಟನೆ ಸಂಬಂಧ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಉತ್ತರಾಖಂಡ್​​ನಲ್ಲಿ ಒಟ್ಟು 9 ಚಾರಣಿಗರು ಮೃತಪಟ್ಟಿದ್ದಾರೆ. 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 8 ಜನರನ್ನು ಡೆಹ್ರಾಡೂನ್​ಗೆ ಸ್ಥಳಾಂತರ ಮಾಡಲಾಗಿದೆ. ಐವರನ್ನು ಉತ್ತರ ಕಾಶಿಗೆ ಸ್ಥಳಾಂತರ ಮಾಡಲಾಗಿದೆ. ನಿನ್ನೆ ಐವರು ಚಾರಣಿಗರ ಮೃತದೇಹ ಸ್ಥಳಾಂತರಿಸಲಾಗಿತ್ತು. ಇಂದು ಬೆಳಗ್ಗೆ ನಾಲ್ವರ ಮೃತದೇಹ ಸ್ಥಳಾಂತರಿಸಲಾಗಿದೆ. 9 ಮೃತದೇಹಗಳನ್ನು ಡೆಹ್ರಾಡೂನ್​​​ಗೆ ಸ್ಥಳಾಂತರಿಸಲಾಗುತ್ತೆ. ಇಂದೇ 9 ಮೃತದೇಹ ಬೆಂಗಳೂರಿಗೆ ಏರ್​ಲಿಫ್ಟ್​​ ಮಾಡ್ತೀವಿ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ