ಕಡ್ಡಾಯ ಕನ್ನಡ ನಾಮಫಲಕ ಅಳವಡಿಸದಿದ್ರೆ ಕರ್ನಾಟಕ ಬಂದ್ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್

| Updated By: ಆಯೇಷಾ ಬಾನು

Updated on: Feb 26, 2024 | 2:54 PM

ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಸರ್ಕಾರ ಗಡುವು ನೀಡಿದೆ. ಸದ್ಯ ಈ ಡೆಡ್ ಲೈನ್ ಮುಗಿಯಲು ಎರಡು ದಿನ ಮಾತ್ರ ಬಾಕಿ ಇದೆ. ಒಂದಷ್ಟು ರಸ್ತೆಗಳ ಅಂಗಡಿ ಮುಂಗಟ್ಟುಗಳ ನಾಮಫಲಕ ಬದಲಾಗಿಲ್ಲ. ಹೀಗಾಗಿ ನಾಮಫಲಕ ಕಡ್ಡಾಯವಾಗದಿದ್ರೆ ಕರ್ನಾಟಕ ಬಂದ್ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಕಡ್ಡಾಯ ಕನ್ನಡ ನಾಮಫಲಕ ಅಳವಡಿಸದಿದ್ರೆ ಕರ್ನಾಟಕ ಬಂದ್ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್
ಹೋರಾಟಗಾರ ವಾಟಾಳ್ ನಾಗರಾಜ್
Follow us on

ಬೆಂಗಳೂರು, ಫೆ.26: ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಕನ್ನಡದ ರಣಕಹಳೆ ಮೊಳಗಲು ಸಜ್ಜಾಗ್ತಿದೆ. ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ನೀಡಿದ್ದ ಡೆಡ್ ಲೈನ್ ಮುಗಿಯುತ್ತ ಬಂದ್ರೂ ಬೆಂಗಳೂರಿನ ಅಂಗಡಿ-ಮುಂಗಟ್ಟುಗಳ ನಾಮಫಲಕ ಬದಲಾಗದಿರೋದು ಕನ್ನಡ ಹೋರಾಟಗಾರರನ್ನ ಕೆರಳಿಸಿದೆ. ಡೆಡ್ ಲೈನ್ ಮುಗಿಯೋಕೆ ಎರಡೇ ದಿನ ಬಾಕಿ ಇದ್ದು, ನಾಮಫಲಕ ಕಡ್ಡಾಯವಾಗದಿದ್ರೆ ಕರ್ನಾಟಕ ಬಂದ್ (Karnataka Bandh) ಮಾಡೋದಾಗಿ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ (Vatal Nagaraj) ಎಚ್ಚರಿಕೆ ಕೊಟ್ಟಿದ್ದಾರೆ

ರಾಜ್ಯ ರಾಜಧಾನಿಯಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗಾಗಿ ಕನ್ನಡ ಪರ ಸಂಘಟನೆಗಳು ರಣಕಹಳೆ ಮೊಳಗಿಸಿದ್ವು, ಸಿಕ್ಕ ಸಿಕ್ಕ ಅನ್ಯ ಭಾಷಾ ನಾಮಫಲಕ ಹೊಡೆದುಹಾಕಿದ್ದ ಹೋರಾಟಗಾರರ ಒತ್ತಡಕ್ಕೆ ಮಣಿದ ಸರ್ಕಾರ ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಿತ್ತು. ಆದರೆ ಡೆಡ್ ಲೈನ್ ಮುಗೀತಾ ಬಂದ್ರೂ ಒಂದಷ್ಟು ರಸ್ತೆಗಳ ಅಂಗಡಿ ಮುಂಗಟ್ಟುಗಳ ನಾಮಫಲಕ ಬದಲಾಗಿಲ್ಲ.

ಸದ್ಯ ಬೆಂಗಳೂರಿನ ಪ್ರಮುಖ ರಸ್ತೆಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯ ಕೆಲ ಅಂಗಡಿಗಳು ಇನ್ನೂ ನಾಮಫಲಕ ಬದಲಾಯಿಸಿಲ್ಲ. ಅತ್ತ ಅಧಿವೇಶನದಲ್ಲೂ ಕನ್ನಡ ನಾಮಫಲಕ ಪ್ರತಿಧ್ವನಿಸಿದ್ರೂ ಸರ್ಕಾರ ಕೂಡ ಸೈಲೆಂಟ್ ಆಗಿರೋದಕ್ಕೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ. ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಹಾಕದಿದ್ರೆ ಕರ್ನಾಟಕ ಬಂದ್ ಮಾಡೋ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕನ್ನಡ ನಾಮಫಲಕ: ರಾಜ್ಯ ಸರ್ಕಾರ ಮಾತು ತಪ್ಪಿದರೆ ಎಲ್ಲಾ ಜಿಲ್ಲೆ ಗುಡುಗುತ್ತದೆ: ಕರವೇ ಅಧ್ಯಕ್ಷ ನಾರಾಯಣಗೌಡ

ಇನ್ನು ಬೆಂಗಳೂರಿನಲ್ಲಿ ಶೇಕಡ 60 ರಷ್ಟು ಕನ್ನಡ ನಾಮಫಲಕ ಅಳವಡಿಸದವರ ವಿರುದ್ಧ ಮತ್ತೆ ಕನ್ನಡದ ಕಿಚ್ಚು ಹೊತ್ತುವ ಲಕ್ಷಣ ಕಾಣ್ತಿದೆ. ಡೆಡ್ ಲೈನ್ ಮುಗಿಯೋಕೆ ಕೇವಲ ಮೂರು ದಿನ ಬಾಕಿಯಿದ್ದು, ಡೆಡ್ ಲೈನ್ ಮುಗಿದ ಬಳಿಕ ಮತ್ತೊಮ್ಮೆ ಕನ್ನಡದ ರಣಕಹಳೆ ಮೊಳಗುತ್ತಾ,ಅಥವಾ ಈಗ ನೀಡಿರೋ ಗಡುವನ್ನ ಸರ್ಕಾರ ವಿಸ್ತರಣೆ ಮಾಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಇನ್ನು ಮತ್ತೊಂದೆಡೆ ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಈ ಬಗ್ಗೆ ಮಾತನಾಡಿದ್ದು ಫೇ.28ರ ಒಳಗೆ ಕನ್ನಡಮಯವಾಗುತ್ತದೆ ಅಂತಾ ಸರಕಾರ ಹೇಳಿ ಸಮಯ ತೆಗೆದುಕೊಂಡಿದೆ. ಸರಕಾರ ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಇನ್ನೊಂದು ಹೋರಾಟದಲ್ಲಿ ನಮ್ಮನ್ನ ಬಂಧಿಸಿ, ಆಗ ಗೊತ್ತಾಗುತ್ತದೆ. ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ