ತಮಿಳುನಾಡು ದೋಸ್ತಿಯ ಮೆಚ್ಚಿಸಲು ಬೆಂಗಳೂರಿಗೆ ಜಲ ಸಂಕಷ್ಟ ತಂದಿಟ್ಟ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ವಾಗ್ದಾಳಿ
Bengaluru Water Crisis: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಹೊಣೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ, ಕೈಗಾರಿಕೆ ಪ್ರದೇಶಗಳಿಗೆ ನೀರು ಪೂರೈಕೆ ಕಡಿತಗೊಳಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಟ್ಯಾಂಕರ್ ಮಾಫಿಯಾಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು, ಫೆಬ್ರವರಿ 26: ತಮಿಳುನಾಡಿನ ರಾಜಕೀಯ ಮಿತ್ರರನ್ನು ಮೆಚ್ಚಿಸಲು ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನರ ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಉದ್ಭವಿಸಿರುವ ನೀರಿನ (Bengaluru Water Crisis) ಸಮಸ್ಯೆ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ನೀರಿನ ಬಿಕ್ಕಟ್ಟು ನಿಭಾಯಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ರಾಜಕೀಯಕ್ಕಾಗಿ ಜನಸೇವೆಯನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿಯ ಎದುರು ನಮ್ಮ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ಮಂಡಿಸುವಲ್ಲಿ ವಿಫಲವಾದ ಸರ್ಕಾರ, ಈಗಾಗಲೇ ಭೀಕರಗೊಂಡಿರುವ ಪರಿಸ್ಥಿತಿಯ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ. ಇವೆಲ್ಲದರ ಪರಿಣಾಮ ಬೆಂಗಳೂರಿನಲ್ಲಿ ಭಾರಿ ನೀರಿನ ಕೊರತೆಯಾಗಿದೆ. ಬಿಕ್ಕಟ್ಟಿನ ವಾಸ್ತವತೆಯ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಮತ್ತು ಬೆಂಗಳೂರಿನ ನಾಗರಿಕರಿಗೆ ಪರಿಹಾರ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾನು ಸಿಎಂ ಮತ್ತು ಸರ್ಕಾರವನ್ನು ಒತ್ತಾಯಿಸುತ್ತೇನೆ. ಜನರ ಜೀವಗಳು ಅಪಾಯದಲ್ಲಿವೆ. ಆ ಕುರಿತಾದ ನಿರ್ಲಕ್ಷ್ಯವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಿವೈ ವಿಜಯೇಂದ್ರ ಎಕ್ಸ್ ಸಂದೇಶ
Congress & CM @Siddaramaiah‘s catastrophic mishandling of Bengaluru’s water crisis is a testament to their ineptitude and disregard for the people they serve. By prioritizing their political alliances in Tamilnadu over the well-being of people of Karnataka, they’ve subjected…
— Vijayendra Yediyurappa (@BYVijayendra) February 26, 2024
ಟ್ಯಾಂಕರ್ ಮಾಫಿಯಾಗೆ ವ್ಯವಹಾರ ಕುದುರಿಸಲು ಮುಂದಾದ ಕಾಂಗ್ರೆಸ್: ಬಿಜೆಪಿ ಕಿಡಿ
‘ಬಡಾವಣೆಗಳಲ್ಲಷ್ಟೇ ಅಲ್ಲದೆ, ಕೈಗಾರಿಕಾ ಪ್ರದೇಶಗಳಲ್ಲೂ ಟ್ಯಾಂಕರ್ ಮಾಫಿಯಾಗೆ ವ್ಯವಹಾರ ಕುದುರಲಿ ಎಂಬ ಉದ್ದೇಶದಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸರಬರಾಜು ಮಾಡುತ್ತಿದ್ದ ನೀರಿನ ಪ್ರಮಾಣದಲ್ಲಿ ಕಾಂಗ್ರೆಸ್ ಸರ್ಕಾರ ದಿಢೀರನೆ ಶೇ 60ರಷ್ಟು ಕಡಿತ ಮಾಡಿದೆ’ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: ಬೆಂಗಳೂರಿಗೆ ಇನ್ನು ಒಂದು ತಿಂಗಳು ಮಾತ್ರ ನೀರು: ಆಘಾತಕಾರಿ ಮಾಹಿತಿ ನೀಡಿದ ಕಾವೇರಿ ನೀರಾವರಿ ತಾಂತ್ರಿಕ ಸಮಿತಿ
ಉತ್ಪಾದನೆಗೆ ನೀರು ಅಗತ್ಯವಿಲ್ಲದ ಗಾರ್ಮೆಂಟ್ಸ್‌ನಂಥಲ್ಲಿಯೂ ನೌಕರರಿಗೂ ನೀರಿಲ್ಲದೆ ಬೀಗ ಜಡಿಯುವ ಸ್ಥಿತಿ ನಿರ್ಮಾಣವಾಗಿ ಪೀಣ್ಯ ಕೈಗಾರಿಕಾ ಪ್ರದೇಶದ 12 ಲಕ್ಷ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಕಲೆಕ್ಷನ್ ದಾಹದಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ ಸುಮಾರು 4.5 ಲಕ್ಷ ಮಹಿಳೆಯರು ವೇತನ ಕಡಿತದ ತೂಗುಗತ್ತಿಯ ಅಡಿಯಲ್ಲಿ ದಿನದೂಡುವಂತಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ