ಬೆಂಗಳೂರು: ಯುಗಾದಿ ಹಬ್ಬದ ಹಿನ್ನಲೆ ರಾಜಧಾನಿ ಬೆಂಗಳೂರಿನ ಕೆ.ಆರ್ ಮಾರ್ಕೆಟ್ನಲ್ಲಿ ಹಬ್ಬದ ಖರೀದಿ ಜೋರಾಗಿದೆ. ನಗರದ ಮಾರುಕಟ್ಟೆಗಳಲ್ಲಿ ಯುಗಾದಿ ಖರೀದಿ ಅಬ್ಬರ ಭರದಿಂದ ಸಾಗುತ್ತಿದೆ. ಹಬ್ಬದ ವಸ್ತುಗಳನ್ನು ಕೊಳ್ಳಲು ಜನ ಬ್ಯುಸಿಯಾಗಿದ್ದಾರೆ. ಈ ಬಾರಿ ಯುಗಾದಿ ಹಬ್ಬವನ್ನು ಜನತೆ ಸಡಗರದಿಂದ ಆಚರಿಸುತ್ತಿದೆ. ಕಳೆದ ಎರಡು- ಮೂರು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಹಬ್ಬ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಮತ್ತೆ ಯುಗಾದಿ ಸಂಭ್ರಮಾಚರಣೆ ಜೋರಾಗಿದೆ. ಈ ಮಧ್ಯೆ, ಕಳೆದ ಮೂರು ದಿನಕ್ಕೆ ಹೋಲಿಸಿದರೆ ಇಂದು ಕೊಂಚ ದರ ಏರಿಕೆ ಆಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಹೂವು, ಹಣ್ಣು ಬೆಲೆಗಳ ದರದಲ್ಲಿ ಏರಿಕೆಯಾಗಿದೆ. ಹಣ್ಣುಗಳಲ್ಲಿ 20 ರಿಂದ 30 ರೂಪಾಯಿ ಏರಿಕೆ ಆಗಿದ್ದರೆ ಹೂವುಗಳಲ್ಲಿ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ.
ಚಾಂದ್ರಮಾನ ಯುಗಾದಿ ಹಬ್ಬ ಇರುವ ಹಿನ್ನೆಲೆ ಹಬ್ಬವನ್ನು ಧಾರ್ಮಿಕ ಹಬ್ಬವನ್ನಾಗಿ ಆಚರಿಸಲು ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೂ ವಿಶೇಷ ಪೂಜೆ ಇರಲಿದೆ. ಭಕ್ತಾದಿಗಳಿಗೆ ಉಚಿತವಾಗಿ ಬೇವು ಬೆಲ್ಲ, ಪಾನಕ ಮಜ್ಜಿಗೆ ಜೊತೆ ತೀರ್ಥ ಪ್ರಸಾದವೂ ನೀಡುವ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಬನಶಂಕರಿ, ದೊಡ್ಡಗಣಪತಿ ಹಾಗೂ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಇರಲಿದೆ. ಜೊತೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ 1,200 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಈ ವ್ಯವಸ್ಥೆ ಇರಲಿದೆ. ಹೊಸ ವರ್ಷದ ಮೊದಲ ದಿನವನ್ನು ಆಚರಿಸಲು ಎಲ್ಲಾ ರೀತಿಯಲ್ಲಿ ಜಿಲ್ಲಾಡಳಿತ ಸಿದ್ದವಾಗಿರುವ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಯುಗಾದಿ ಅಗತ್ಯ ವಸ್ತುಗಳ ಬೆಲೆ ಹೀಗಿದೆ:
– ಮಾವಿನ ಎಲೆ 10 ರೂ./ ಕಟ್ಟು
– ಬೇವಿನ ಸೊಪ್ಪು 20 ರೂ./ ಕಟ್ಟು
– ತುಳಸಿ ತೋರಣ 50 ರೂ./ ಮಾರು
– ಬೆಲ್ಲ (ಅಚ್ಚು/ಉಂಡೆ) 50- 60 ರೂ./ kg
ಇಂದಿನ ಹೂವುಗಳ ಬೆಲೆ ಹೀಗಿದೆ:
– ಮಲ್ಲಿಗೆ ಮೊಗ್ಗು 200 ರೂ./ kg
– ಸೇವಂತಿಗೆ 140 ರೂ./ kg
– ಕನಕಾಂಬರ 300 ರೂ./ kg
– ಸುಗಂಧರಾಜ 60 ರೂ./ kg
– ಗುಲಾಬಿ 100 ರೂ./ kg
– ಚೆಂಡು ಹೂವು 40 ರೂ./ kg
ಇಂದಿನ ಹಣ್ಣುಗಳ ಬೆಲೆ ಹೀಗಿದೆ:
– ಸೇಬು 160 ರೂ./ kg
– ದಾಳಿಂಬೆ 250 ರೂ./ kg
– ಮೂಸಂಬಿ 100 ರೂ./ kg
– ಆರೆಂಜ್ 120 ರೂ./ kg
– ಸಪೋಟ 100 ರೂ./ kg
– ಸೀಬೆಹಣ್ಣು 120 ರೂ./ kg
– ಏಲಕ್ಕಿ ಬಾಳೆಹಣ್ಣು 70 ರೂ./ kg
– ದ್ರಾಕ್ಷಿ 100-120 ರೂ./ kg
ತರಕಾರಿ ಬೆಲೆ ಕೊಂಚ ಏರಿಕೆ:
– ಕ್ಯಾರೆಟ್ 40 ರೂ./ kg
– ಬೀನ್ಸ್ 40 ರೂ./ kg
– ಬಟಾಣಿ 80 ರೂ./ kg
– ಬಿಟ್ರೋಟ್ 40 ರೂ./ kg
– ಮುಲಂಗಿ 30 ರೂ./ kg
– ಬದನೆಯಕಾಯಿ 30 ರೂ./ kg
– ಕ್ಯಾಪ್ಸಿಕಮ್ 40 ರೂ./ kg
– ನವಿಲುಕೋಸು 20 ರೂ./ kg
– ಬೆಂಡೆಕಾಯಿ 40 ರೂ./ kg
– ಹೀರೆಕಾಯಿ 30 ರೂ./ kg
– ಪಡವಲಕಾಯಿ 60 ರೂ./ kg
– ಟೋಮಾಟೋ 20 ರೂ./ kg
– ಬೆಳ್ಳುಳ್ಳಿ 70 ರೂ./ kg
– ಈರುಳ್ಳಿ 30 ರೂ./ kg
– ಮೆಣಸಿನಕಾಯಿ 80 ರೂ./ kg
– ಆಲೂಗಡ್ಡೆ 20 ರೂ./ kg
ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; 1 ಹಾಗೂ 3 ದಿನದ ಪಾಸ್ ಪರಿಚಯಿಸ್ತಿರುವ ಬಿಎಂಆರ್ಸಿಎಲ್
Published On - 10:14 am, Fri, 1 April 22