ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (Bruhat Bengaluru Mahanagara Palike – BBMP) 2022-23ನೇ ಹಣಕಾಸು ವರ್ಷದ ಬಜೆಟ್ ರಾತ್ರೋರಾತ್ರಿ ಮಂಡನೆಯಾಗಿದೆ. ರಾತ್ರಿ 11.30ಕ್ಕೆ ಬಜೆಟ್ ಪ್ರತಿಯನ್ನು ಬಿಬಿಎಂಪಿ ವೆಬ್ಸೈಟ್ಗೆ ಅಪ್‌ಲೋಡ್ ಮಾಡಲಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ರಾತ್ರಿ 8.30ಕ್ಕೆ ವಿಧಾನಸೌಧದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ₹ 10,480 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡಿಸಿದರು. ವಿಶೇಷಚೇತನರ ಅಭಿವೃದ್ಧಿಗೆ ₹ 370 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹ 346 ಕೋಟಿ, ಕಲ್ಯಾಣ ಕಾರ್ಯಕ್ರಮಕ್ಕೆ ₹ 428 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ₹ 1,469 ಕೋಟಿ, ಆರೋಗ್ಯ ವಲಯಕ್ಕೆ ₹ 75 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ₹ 9,951 ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರ ₹ 529 ಕೋಟಿ ಹೆಚ್ಚಾಗಿದೆ. ಬಜೆಟ್ನ ಪೂರ್ಣ ಪಠ್ಯಕ್ಕಾಗಿ ಲಿಂಕ್: https://testudp.bbmpgov.in/ucc_file/2022-23-BBMP-BUDGET.pdf
ಮಹಾಪೌರರ ವಿವೇಚನೆಗೆ ₹ 83 ಕೋಟಿ
ಬಿಬಿಎಂಪಿಯ 2022-23ನೇ ಸಾಲಿನ ಬಜೆಟ್ನಲ್ಲಿ ಮಹಾಪೌರರ ವಿವೇಚನೆಗೆ ₹ 83 ಕೋಟಿ ಮೀಸಲಿಡಲಾಗಿದೆ. ಉಪ ಮಹಾಪೌರರ ವಿವೇಚನೆಗೆ ₹ 42 ಕೋಟಿ, ಮುಖ್ಯ ಆಯುಕ್ತರ ವಿವೇಚನೆಗೆ ₹ 63 ಕೋಟಿ, ಬೆಂಗಳೂರು ಉಸ್ತುವಾರಿ ಸಚಿವರ ವಿವೇಚನೆಗೆ ₹ 265 ಕೋಟಿ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಬಿಬಿಎಂಪಿ ಬಜೆಟ್ ವೆಬ್‌ಸೈಟ್‌ನಲ್ಲಿ ತಡವಾಗಿ ಬಜೆಟ್ ದಾಖಲೆ ಪ್ರಕಟಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಬೆಳಿಗ್ಗೆ ಬಿಬಿಎಂಪಿ ಬಜೆಟ್ ಮಂಡನೆ ಮಾಡಿದ್ದಾರೆ. ಸಂಜೆ ಅದನ್ನು ಅಪ್‌ಲೋಡ್ ಮಾಡಿದ್ದಾರೆ’ ಎಂದರು. ಬಜೆಟ್ ಕುರಿತು ಕೇಳಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.
ಬೆಂಗಳೂರಿನ ಎಲ್ಲ ವಿಚಾರ ಅವಲೋಕಿಸಿದ್ದೇವೆ: ಗೌರವ್ ಗುಪ್ತ
ಬಿಬಿಎಂಪಿ ತರಾತುರಿಯಲ್ಲಿ ಬಜೆಟ್ ಮಂಡಿಸಿದ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಸೆಷನ್ ಹಿನ್ನಲೆ ನಾವು ಬೇರೆ ಕೆಲಸದಲ್ಲಿ ತೊಡಗಿದ್ದೆವು. ನಾಳೆ ಯುಗಾದಿ ರಜೆ ಇದೆ. ಸತತ ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಎಲ್ಲಾ ವಿಚಾರ ಅವಲೋಕಿಸಲಾಗಿದೆ. ಫ್ಲಡ್ ಡ್ಯಾಮೇಜ್, ಒಳ ಚರಂಡಿ, ಕಸ ನಿರ್ವಹಣೆ, ರಸ್ತೆ ಗುಂಡಿ, ಸ್ಟ್ರೀಟ್ ಲೈಟ್ ಈ ವಿಚಾರಕ್ಕೆ ಆದ್ಯತೆ ನೀಡಲಾಗಿದೆ. ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೆರೆ ಅಭಿವೃದ್ಧಿ, ಪೌರಕಾರ್ಮಿಕರಿಗೆ ಅನುಕೂಲಗಳು, ಅಂಗನವಾಡಿ ಮತ್ತು ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಒತ್ತಡವಿತ್ತು. ಎಲ್ಲವನ್ನೂ ಸರಿದೂಗಿಸಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದರು. ಪಾಲಿಕೆಯ ಆದಾಯ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ. ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ ಮಾಡಲು ಅನುವು ನೀಡಲಾಗಿದೆ. ರಸ್ತೆಗಳು, ರಾಜಕಾಲುವೆ, ಬಿಬಿಎಂಪಿ ಕಟ್ಟಡಗಳು, ಕೆರೆ, ಫ್ಲೈಓವರ್ ಸೇರಿ ಎಲ್ಲಾ ಕ್ಷೇತ್ರಕ್ಕೆ ಅನುದಾನವನ್ನು ನೀಡಲಾಗಿದೆ. ವಾರ್ಡ್ ವರ್ಕ್ಸ್ಗಾಗಿ ಹಳೆಯ ವಾರ್ಡ್ಗಳಿಗೆ ₹ 4 ಕೋಟಿ ಹಾಗೂ ಹೊಸ ವಾರ್ಡ್ಗಳಿಗೆ 6 ಕೋಟಿ ಅನುದಾನ ಮೀಸಲಿಡಲಾಗಿದೆ. ಹೊಸದಾಗಿ ಎರಡು ಕ್ರಿಮೊಟೋರಿಯಂ ಘೋಷಿಸಲಾಗಿದೆ ಎಂದರು.
ಹಲವು ದಿನಗಳಿಂದ ಚರ್ಚೆ
ಬಿಬಿಎಂಪಿ ಬಜೆಟ್ ಎಂದು ಮಂಡನೆಯಾಗಲಿದೆ ಎಂಬುದು ಕಳೆದ ಕೆಲ ದಿನಗಳಿಂದ ಚರ್ಚೆಯ ವಿಷಯವಾಗಿತ್ತು. ಮಾರ್ಚ್ 30ರಂದು ಬಜೆಟ್ ಮಂಡನೆಯಾಗಬಹುದು ಎಂದು ಅಮದಾಜಿಸಲಾಗಿತ್ತು. ಆದರೆ ಕೊನೆಯ ಗಳಿಗೆಯವರೆಗೂ ದಿನಾಂಕ ಅಂತಿಮಗೊಂಡಿರಲಿಲ್ಲ. ಆರ್ಥಿಕ ವರ್ಷವು ಮಾರ್ಚ್ 31ಕ್ಕೆ ಮುಗಿಯಲಿದೆ. ಏಪ್ರಿಲ್ 1ರ ಒಳಗೆ ಬಜೆಟ್ ಮಂಡನೆಯಾಗದಿದ್ದರೆ ಸಮಸ್ಯೆಯಾಗಲಿದೆ ಎಂದು ಹೇಳಲಾಗಿತ್ತು. ಪ್ರತಿವರ್ಷವೂ ಬಜೆಟ್ಗಳನ್ನು ಮುಂದಿನ ಆರ್ಥಿಕ ವರ್ಷ ಆರಂಭವಾಗುವುದಕ್ಕೆ ಕನಿಷ್ಠ ಮೂರು ವಾರ ಮೊದಲು ಅಂಗೀಕರಿಸಬೇಕು ಎನ್ನುವ ನಿಯಮವಿದೆ. ಅದರಂತೆ ಮಾರ್ಚ್ 10ರ ಒಳಗೆ ಬಜೆಟ್ ಮಂಡನೆಯಾಗಬೇಕಿತ್ತು. ಆದರೆ ಬಜೆಟ್ ಮಂಡನೆ ತಡವಾದ ಕಾರಣ, ಬಿಬಿಎಂಪಿ ಕಾಯ್ದೆಯ 196ನೇ ವಿಧಿ ಉಲ್ಲಂಘನೆಯಾದಂತೆ ಆಗಿದೆ.
ಕರ್ನಾಟಕ ಸರ್ಕಾರವು ಬಿಬಿಎಂಪಿಗೂ ‘ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ-2003’ ಅನ್ವಯಗಳಿಸಿದೆ. ಹೀಗಾಗಿ ನಾಲ್ಕು ವರ್ಷಗಳ ಸಂಯುಕ್ತ ವಾರ್ಷಿಕ ಅಭಿವೃದ್ಧಿ ದರ (ಸಿಎಜಿಆರ್) ಅಧರಿಸಿಯೇ ಬಿಬಿಎಂಪಿ ಬಜೆಟ್ ಗಾತ್ರ ನಿರ್ಧರಿಸಬೇಕಾದ ಅನಿವಾರ್ಯತೆಯಲ್ಲಿತ್ತು. ಈ ಲೆಕ್ಕಾಚಾರದಲ್ಲಿ ಬಿಬಿಎಂಪಿ ಬಜೆಟ್ ಗಾತ್ರವು ₹ 7 ಸಾವಿರ ಕೋಟಿ ಮಿತಿಯ ಒಳಗೆ ಇರುತ್ತದೆ ಎಂದು ಪಾಲಿಕೆ ಮೂಲಗಳು ಹೇಳಿದ್ದವು. ಆದರೆ ಇದೀಗ ಬಿಬಿಎಂಪಿ ಬಜೆಟ್ ಗಾತ್ರವನ್ನು ₹ 10 ಸಾವಿರ ಕೋಟಿ ದಾಟಿಸಿದೆ.
‘ನಿಯಮಗಳ ಅನ್ವಯ ಬಜೆಟ್ ಮಂಡನೆಯಾಗಿದ್ದರೆ ಈ ವರ್ಷದ ಬಜೆಟ್ ಗಾತ್ರವು 9 ಸಾವಿರ ಕೋಟಿಯ ಒಳಗೆ ಇರಬೇಕಿತ್ತು. ಆದರೆ ಶಾಸಕರ ಒತ್ತಡ ಮತ್ತಿತರ ಕಾರಣಗಳಿಂದ ಬಜೆಟ್ ಗಾತ್ರ ಹೆಚ್ಚಾಗಿದೆ. ಕೊವಿಡ್ ಹೊಡೆತದಿಂದ ನಗರದ ವ್ಯಾಪಾರ-ವಹಿವಾಟು ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಕಂದಾಯದಿಂದ ಬರುವ ಸ್ವೀಕೃತಿ ಹೆಚ್ಚಾಗುತ್ತದೆ ಎನ್ನಲು ಹೇಳಲು ಆಗುವುದಿಲ್ಲ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.
ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಶಾಸಕರು
ಬಿಬಿಎಂಪಿ ಬಜೆಟ್ ರೂಪಿಸುವ ಸಂಬಂಧ ಮಾರ್ಚ್ 18ರಂದು ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕರು ಪಕ್ಷಾತೀತವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವಿರುದ್ಧ ಹಲವು ಆರೋಪಗಳನ್ನು ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಕಳೆದ 2 ವರ್ಷಗಳಿಂದ ಬಿಬಿಎಂಪಿ ಏನೂ ಮಾಡಿಲ್ಲ. ಕೊವಿಡ್ ನೆಪವಿಟ್ಟುಕೊಂಡು ಅನುದಾನವನ್ನು ನೀಡಿಲ್ಲ. ವಾರ್ಡ್‌ಗೆ ನೀಡಬೇಕಿದ್ದ 2 ಕೋಟಿ ರೂಪಾಯಿ ನೀಡಿಲ್ಲ. ಈಗ ಬಿಬಿಎಂಪಿಗೆ ಮೇಯರ್, ಕಾರ್ಪೊರೇಟರ್‌ಗಳಿಲ್ಲ. ಪಾಲಿಕೆಗೆ ಬಂದ ಆದಾಯವನ್ನ ಸರಿಯಾಗಿ ತೋರಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು. ರಾಜ್ಯ ಸರ್ಕಾರ ಪಾಲಿಕೆಗೆ ಹಣ ನೀಡಿದ್ದರೂ ಸರಿಯಾದ ವಿನಿಯೋಗವಾಗುತ್ತಿಲ್ಲ ಎಂದು ದೂರಿದ್ದರು.
ಇದನ್ನೂ ಓದಿ: BBMP: ಬಿಬಿಎಂಪಿ ಬಜೆಟ್ ವಿಚಾರವಾಗಿ ಅಧಿಕಾರಿಗಳನ್ನು ಪಕ್ಷಾತೀತವಾಗಿ ತರಾಟೆಗೆ ತೆಗೆದುಕೊಂಡ ಶಾಸಕರು
ಇದನ್ನೂ ಓದಿ: Karnataka Budget 2022: ಬೆಂಗಳೂರು ಮೆಟ್ರೋ 3ನೇ ಹಂತದ ಕಾಮಗಾರಿಗೆ 11,250 ಕೋಟಿ ರೂ. ಮೀಸಲು