ಬೆಂಗಳೂರಿನಲ್ಲಿ ಬೀದಿ ಕಾಮಣ್ಣರ ಹಾವಳಿ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ಬಂಧನ
ಸುದ್ದಗುಂಟೆಪಾಳ್ಯದಲ್ಲಿ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿದ್ದ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಬಳಿಕ ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಓರ್ವ ಯುವಕ ಮಹಿಳೆಗೆ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದ. ಹೀಗಿರುವಾಗಲೇ ಪುಲಕೇಶಿನಗರದಲ್ಲೊಂದು ಘಟನೆ ಬೆಳಕಿಗೆ ಬಂದಿದ್ದು, ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆಟೋ ಚಾಲಕನನ್ನು ಬಂಧಿಸಲಾಗಿದೆ.

ಬೆಂಗಳೂರು, ಏಪ್ರಿಲ್ 18: ಇತ್ತೀಚೆಗೆ ನಗರದ ಸುದ್ದಗುಂಟೆ ಪಾಳ್ಯದಲ್ಲಿ ಯುವಕನೊಬ್ಬ ಯುವತಿಗೆ (girl) ಕಿರುಕುಳ ನೀಡಿ ಪರಾರಿಯಾಗಿದ್ದ ಘಟನೆ ಸಾಕಷ್ಟು ಚರ್ಚೆ ಆಗಿತ್ತು. 10 ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ನಗರದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದೊಂದು ವಾರದಲ್ಲಿ ಇಂತಹ ಕೆಲ ಘಟನೆಗಳು ಮರುಕಳಿಸಿವೆ. ಹೀಗಿರುವಾಗಲೇ ಇದೀಗ ಮತ್ತೊಂದು ಪ್ರಕರಣ ಬೆಂಗಳೂರಿನ ಪುಲಕೇಶಿನಗರ (Pulakeshinagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಪರಿಚಿತ ಯುವತಿಯ ಜತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ನಡೆದಿದ್ದೇನು?
ಅಪರಿಚಿತ ಯುವತಿ ತನ್ನ ಸ್ನೇಹಿತನ ಜತೆ ಅಂಗಡಿ ಮುಂದೆ ನಿಂತಿದ್ದಳು. ಈ ವೇಳೆ ಆಟೋ ಚಾಲಕ ಮಣಿ ಎಂಬಾತ ಫೋನ್ ನಂಬರ್ ಕೇಳಿದ್ದಲ್ಲದೇ, ಯುವತಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಘಟನೆಯಿಂದ ಬೇಸತ್ತ ಯುವತಿ ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿ ಮಣಿಯನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಯುವಕನ ಬಂಧನ
ಇನ್ನು ಇತ್ತೀಚೆಗೆ ನಗರದ ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಆರೋಪಿ ಕಾರ್ತಿಕ್ನನ್ನು ಶಿವಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಪ್ರಿಲ್ 13 ರಂದು ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲು ಓರ್ವ ಮಹಿಳೆ ತೆರಳುತ್ತಿದ್ದರು. ಈ ವೇಳೆ ಎದುರು ಮನೆಯಲ್ಲಿ ವಾಸವಾಗಿರುವ ಆರೋಪಿ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ.
ಇದನ್ನೂ ಓದಿ: ಸುದ್ದಗುಂಟೆಪಾಳ್ಯ ಯುವತಿಗೆ ಕಿರುಕುಳ ಪ್ರಕರಣ: 10 ದಿನಗಳ ಬಳಿಕ ಕೇರಳದಲ್ಲಿ ಸೆರೆಸಿಕ್ಕ ಆರೋಪಿ
ಇದನ್ನು ಪ್ರಶ್ನೆ ಮಾಡಿದ ಮಹಿಳೆ ಪತಿ ಮೇಲೆ ಮತ್ತು ಜಗಳ ಬಿಡಿಸಲು ಬಂದವರ ಮೇಲೂ ಆರೋಪಿ ಅಟ್ಯಾಕ್ ಮಾಡಿದ್ದ. ಎರಡನೇ ಮಹಡಿಯಿಂದ ಹಾಲೋ ಬ್ಲಾಕ್, ಹೂವಿನ ಪಾಟ್ ಕೆಳ ಮಹಡಿಯಲ್ಲಿದ್ದವರ ಮೇಲೆ ಎಸೆದಿದ್ದ. ಘಟನೆಯಲ್ಲಿ ಏಳು ಜನರಿಗೆ ಗಾಯವಾಗಿತ್ತು.
ವಿಚಾರಣೆ ವೇಳೆ ಉಲ್ಟಾ ಹೊಡೆದ ಆರೋಪಿ
ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಕಾರ್ತಿಕ್ನನ್ನು ಬಂಧಿಸಿದ್ದಾರೆ. ಇನ್ನು ವಿಚಾರಣೆ ವೇಳೆ ಆರೋಪಿ ಹೇಳಿದ್ದೇ ಬೇರೆ. ನಾನು ಮೂತ್ರವಿಸರ್ಜನೆ ಮಾಡುತ್ತಿದೆ. ಆ ಸಮಯದಲ್ಲಿ ಮಹಿಳೆ ಬಂದಿದ್ದಾರೆ. ಆಗ ಗಲಾಟೆ ಆಗಿದೆ ಎಂದಿದ್ದಾನೆ.
ಇದನ್ನೂ ಓದಿ: ಪೊಲೀಸರಿಗೆ ಸವಾಲಾದ ಸುದ್ದಗುಂಟೆಪಾಳ್ಯ ಲೈಂಗಿಕ ದೌರ್ಜನ್ಯ ಕೇಸ್: ಹಗಲು ರಾತ್ರಿ ತಡಕಾಡಿದ್ರು ಸಿಗದ ಆರೋಪಿ
ಸುದ್ದಗುಂಟೆಪಾಳ್ಯ ಘಟನೆಯ ಆರೋಪಿ ಕೊನೆಗೆ ಅರೆಸ್ಟ್ ಆಗಿದ್ದಾನೆ. ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ 10 ದಿನ ಪರಾರಿಯಲ್ಲಿದ್ದವನು ಕೇರಳದಲ್ಲಿ ಪತ್ತೆಯಾಗಿದ್ದ. ಸದ್ಯ ಈ ಆರೋಪಿಯನ್ನ ಐದು ದಿನ ಕಸ್ಟಡಿಗೆ ಪಡೆದಿರುವ ಸುದ್ದಗುಂಟೆಪಾಳ್ಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.