ರಾಯಚೂರು: ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಯಾದಗಿರಿಗೆ ತೆರಳುತ್ತಿದ್ದ ಗೂಡ್ಸ್ ಪಿಕಪ್ ವಾಹನ ಹಳ್ಳದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವದುರ್ಗ ತಾಲೂಕಿನ ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು, ಏಪ್ರಿಲ್ 18: ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗೂಡ್ಸ್ ಪಿಕಪ್ ವಾಹನ ಡಿಕ್ಕಿ (accident) ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಬಳಿ ನಡೆದಿದೆ. ಅಪಘಾತದಲ್ಲಿ ನಾಗರಾಜ್(28), ಸೋಮು(38), ನಾಗಭೂಷಣ್(36) ಹಾಗೂ ಮುರಳಿ(38) ಮೃತಪಟ್ಟಿದ್ದಾರೆ. ಮೃತ ನಾಲ್ವರು ತೆಲಂಗಾಣದ ಹಿಂದೂಪುರ ನಿವಾಸಿಗಳು ಎಂದು ಗುರುತಿಸಲಾಗಿದೆ. ದೇವದುರ್ಗ ತಾಲೂಕಿನ ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತೆಲಂಗಾಣದ ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ನಡೆಯುವ ಕುರಿ ಸಂತೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ. ವೇಗವಾಗಿದ್ದ ಹಿನ್ನಲೆ ನಿಯಂತ್ರಣ ತಪ್ಪಿ ಹಳ್ಳದ ತಡೆಗೋಡೆಗೆ ಗೂಡ್ಸ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಆನಂದ್ಗೆ ಗಂಭೀರ ಗಾಯವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಗಾಯಾಳು ಆನಂದ್ ಹೇಳಿದ್ದಿಷ್ಟು
ಘಟನೆ ಬಗ್ಗೆ ಗಾಯಾಳು ಆನಂದ್ ಟಿವಿ9 ಗೆ ಪ್ರತಿಕ್ರಿಯಿಸಿದ್ದು, ತೆಲಂಗಾಣದ ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಪುರಕ್ಕೆ ಕುರಿ ಖರೀದಿಗೆ ಹೋಗಿದ್ದೆವು. ರಾತ್ರಿ 10 ಕ್ಕೆ ಊಟ ಮಾಡಿ ಮಲಗಿದ್ದೆವು. ವಾಹನ ಯಾರು ಓಡಿಸುತ್ತಿದ್ದರು ಗೊತ್ತಿಲ್ಲ. ತಡ ರಾತ್ರಿ ಪೊಲೀಸರು ಬಂದು ನೀರು ಕುಡಿಸಿದಾಗ ಎಚ್ಚರವಾಗಿದೆ. ಕಾಲಿಗೆ ಗಂಭೀರಗಾಯವಾಗಿದೆ ಅಂತ ಹೇಳಿದ್ದಾರೆ.
ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವಂತಹ ಘಟನೆ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿನವಂಡನಹಳ್ಳಿ ನಿವಾಸಿಗಳಾದ ಮುತ್ತುರಾಜು(23) ಹಾಗೂ ಮದನ್(20) ಮೃತ ವಿದ್ಯಾರ್ಥಿಗಳು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ಕಾಮಣ್ಣರ ಹಾವಳಿ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ಬಂಧನ
ದೇವನಹಳ್ಳಿಯ ಕಾಲೇಜ್ವೊಂದರಿಂದ ಟಿಟಿ ವಾಹನದಲ್ಲಿ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಮಂತ್ರಾಲಯ ಪ್ರವಾಸಕ್ಕೆ ಬಂದಿದ್ದರು. ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು ಎಲೆಬಿಚ್ಚಾಲಿಯ ರಾಯರ ಜಪದ ಕಟ್ಟೆ ವೀಕ್ಷಣೆ ಮಾಡಿದ ತಂಡ, ಬಳಿಕ ವಿದ್ಯಾರ್ಥಿಗಳು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಕೃತ್ಯ
ಈ ವೇಳೆ ನೀರಿನ ರಭಸಕ್ಕೆ ಇಬ್ಬರು ವಿದ್ಯಾರ್ಥಿಗಳು ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಇಬ್ಬರು ಮೃತದೇಹಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ. ಸದ್ಯ ಮೃತದೇಹಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:28 am, Fri, 18 April 25