ಬೆಂಗಳೂರು, ಮಾ.5: ವಿಧಾನಸೌಧದಲ್ಲಿ ಕಾರ್ಯಕರ್ತರು ಪಾಕ್ ಪರ ಘೋಷಣೆ (Pro-Pak Slogan) ಕೂಗಿದ ಪ್ರಕರಣದ ಸಂಬಂಧ ರಾಜ್ಯಸಭಾ ಕಾಂಗ್ರೆಸ್ (Congress) ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ (Dr Syed Nasir Hussain) ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದೆ. ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು ಅವರು ದೂರು ನೀಡಿದ್ದಾರೆ.
ಇನ್ನೊಂದೆಡೆ, ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ನಾಸೀರ್ ಹುಸೇನ್ ಪ್ರಮಾಣ ವಚನ ಸ್ವೀಕಾರ ಮಾಡಬಾರದು ಎಂದು ಒತ್ತಾಯಿಸುತ್ತಿರುವ ಬಿಜೆಪಿ, ಪ್ರಮಾಣವಚನ ಬೋಧಿಸದಂತೆ ಕೋರಿ ಉಪ ರಾಷ್ಟ್ರಪತಿಯವರಿಗೆ ಪತ್ರ ಬರೆಯಲು ಮುಂದಾಗಿದೆ. ಈ ಬಗ್ಗೆ ಬೆಳಗಾವಿ ನಗರದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪಾಕಿಸ್ತಾನದ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದ ಪ್ರಕರಣ ಪೂರ್ಣಗೊಳ್ಳದ ಹೊರತು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಾಸೀರ್ ಹುಸೇನ್ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಹೇಳಿದರು.
ಇದನ್ನೂ ಓದಿ: ಪಾಕ್ ಪರ ಘೋಷಣೆ ಮಾತ್ರವಲ್ಲ, ವಿಧಾನಸೌಧದಲ್ಲಿ ಆಗಿತ್ತು ಭದ್ರತಾ ಲೋಪ: ತನಿಖೆ ವೇಳೆ ಬಯಲಿಗೆ
ರಾಜ್ಯಸಭೆಗೆ ಆಯ್ಕೆಯಾಗುವ ಜನಪ್ರತಿನಿಧಿಯು ಸಂವಿಧಾನ ಮತ್ತು ದೇಶದ ಸಾರ್ವಭೌಮತೆಯ ಪ್ರಮಾಣ ವಚನ ಸ್ವೀಕರಿಸುತ್ತಾನೆ. ಆದರೆ ಹುಸ್ಸೇನ್ ಅವರ ಬೆಂಬಲಿಗರು ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರವಾಗಿ ಘೋಷಣೆ ಕೂಗಿದ್ದು ಸಾಬೀತಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೇಶಾಭಿಮಾನವಿದ್ದರೆ ಮತ್ತು ಅವರಲ್ಲಿ ರಾಷ್ಟ್ರದ ಸಮಗ್ರತೆ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಹುಸೇನ್ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಬೇಕು ಎಂದರು. ಅಲ್ಲದೆ, ಹುಸ್ಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದೆಂದು ಕೋರಿ ಉಪ ರಾಷ್ಟ್ರಪತಿಯವರಿಗೆ ಪತ್ರ ಬರೆಯುವುದಾಗಿ ಹೇಳಿದರು.
ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು, ಮಾಧ್ಯಮದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು. ಎಫ್ಎಸ್ಎಲ್ ವರದಿ ಕೈ ಸೆರಿದ್ದರೂ ಯಾವುದೇ ವಿಚಾರವನ್ನು ಬಹಿರಂಗಪಡಿಸದೇ ಮುಚ್ಚಿಡಲಾಗಿತ್ತು. ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿಯ ನಿರಂತ ಟೀಕಾಪ್ರಹಾರಗಳ ನಡುವೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈವರೆಗೆ ಎಫ್ಎಸ್ಎಲ್ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಿಲ್ಲ. ಈ ಬಗ್ಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ, ಎಫ್ಎಸ್ಎಲ್ ವರದಿ ಆಧಾರದ ಮೇಲೆ ಬಂಧಿಸಲಾಗಿದೆ ಎಂದರು. ಅಲ್ಲಿಗೆ, ಪಾಕ್ ಪರ ಘೋಷಣೆ ಕೂಗಲಾಗಿಲ್ಲ ಎನ್ನುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರ ಸಚಿವರು ಹಾಗೂ ಕೈ ಶಾಸಕರ ವಾದ ಸುಳ್ಳೆಂದು ಸಾಬೀತಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ