AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಪರ ಘೋಷಣೆ ಮಾತ್ರವಲ್ಲ, ವಿಧಾನಸೌಧದಲ್ಲಿ ಆಗಿತ್ತು ಭದ್ರತಾ ಲೋಪ: ತನಿಖೆ ವೇಳೆ ಬಯಲಿಗೆ

Vidhana Soudha Security Breach: ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆ ದಿನ ಭದ್ರತಾಲೋಪ ಕೂಡ ಉಂಟಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಾಕ್ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಂಧಿತರಾಗಿರುವವರ ವಿಚಾರಣೆ ವೇಳೆ ಈ ಮಾಹಿತಿ ಗೊತ್ತಾಗಿದೆ. ಹೀಗಾಗಿ ಪೊಲೀಸರು ಇದೀಗ ಭದ್ರತಾಲೋಪ ಆಯಾಮದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಪಾಕ್ ಪರ ಘೋಷಣೆ ಮಾತ್ರವಲ್ಲ, ವಿಧಾನಸೌಧದಲ್ಲಿ ಆಗಿತ್ತು ಭದ್ರತಾ ಲೋಪ: ತನಿಖೆ ವೇಳೆ ಬಯಲಿಗೆ
ವಿಧಾನಸೌಧ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: Ganapathi Sharma|

Updated on: Mar 05, 2024 | 7:00 AM

Share

ಬೆಂಗಳೂರು, ಮಾರ್ಚ್​​ 5: ರಾಜ್ಯಸಭೆ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogan) ಕೂಗಿದ ವಿಚಾರವಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಮಧ್ಯೆ, ತನಿಖೆಯೂ ಪ್ರಗತಿಯಲ್ಲಿದೆ. ಆದರೆ, ಈ ಪ್ರಕರಣದ ತನಿಖೆ ವೇಳೆ ಮತ್ತೊಂದು ಗಂಭೀರ ವಿಚಾರ ಬೆಳಕಿಗೆ ಬಂದಿದೆ. ಪಾಕ್ ಪರ ಘೋಷಣೆ ಕೂಗಿದ ಅದೇ ದಿನ ವಿಧಾನಸೌಧದಲ್ಲಿ (Vidhana Soudha) ಭದ್ರತಾ ಲೋಪವೂ (Vidhana Soudha Security Breach) ಆಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆ ದಿನ ವಿಧಾನ ಸೌಧಕ್ಕೆ ಪಾಸ್ ಇದ್ದವರು, ಸರ್ಕಾರಿ ನೌಕರರು ಮತ್ತು ಪತ್ರಕರ್ತರು ಮಾತ್ರ ಪ್ರವೇಶಿಸಲು ಅರ್ಹರಾಗಿದ್ದರು. ಆದರೆ, ಈ ಮೂರು ಮಾದರಿಯನ್ನು ಹೊರತುಪಡಿಸಿ ಪಾಕ್ ಪರ ಘೋಷಣೆ ಆರೋಪದಲ್ಲಿ ಬಂಧನಕ್ಕೊಳಗಾದವರು ಮತ್ತು ಇತರ ಹಲವಾರು ಜನರು ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದಾರೆ. ಕೆಲವರು ಪಾಸ್ ಇಲ್ಲದೇ ವಿಧಾನಸೌಧ ಪ್ರವೇಶಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಇವರೆಲ್ಲ ವಿಧಾನಸೌಧಕ್ಕೆ ಹೇಗೆ ಬಂದಿದ್ದರು, ಯಾರು ಮೂಲಕ ಬಂದಿದ್ದರು ಎಂಬುದು ಪರಿಶೀಲನೆ ನಡೆಯುತ್ತಿದೆ. ಯಾವುದೇ ಆಧಾರ ಇಲ್ಲದೆ ಬಂದ ವ್ಯಕ್ತಿಗಳು ಏನು ಬೇಕಾದರೂ ಮಾಡಬಹುದಿತ್ತು. ಬಹುತೇಕರನ್ನು ಕರೆತಂದಿರುವುದು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರೇ ಎಂಬುದು ಬೆಳಕಿಗೆ ಬಂದಿದೆ.

ಈ ಮಧ್ಯೆ, ಪಾಕಿಸ್ತಾನದ ಪರ ಘೋಷಣೆಯ ಹಿಂದಿನ ಕಾರಣ ತಿಳಿಯುವ ನಿಟ್ಟಿನಲ್ಲಿಯೂ ಪೊಲೀಸರ ತನಿಖೆ ಮುಂದುವರಿದಿದೆ. ಬಂಧಿತ ಮೂವರ ಮೊಬೈಲ್ ವಶಕ್ಕೆ ಪಡೆದಿರೋ ವಿಧಾನಸೌಧ ಪೊಲೀಸರು, ಅವುಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಿದ್ದಾರೆ. ಆರೋಪಿಗಳ ಮೊಬೈಲ್ ಡೇಟಾ ರಿಟ್ರಿವಲ್​​ಗೆ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ವಾಟ್ಸಾಫ್, ಟೆಲಿಗ್ರಾಂ ಸೇರಿ ಡೇಟಾ ರಿಟ್ರಿವಲ್ ಮಾಡಲಾಗುತ್ತದೆ. ಆರೋಪಿಗಳು ಯಾರಾದ್ದಾದರೂ ಪ್ರೇರಣೆಯಿಂದ ಕೃತ್ಯ ಎಸಗಿದ್ದಾರೆಯೇ? ರಾಷ್ಟ್ರ ವಿರೋಧಿ ಸಂಘಟನೆಯ ಲಿಂಕ್ ಇರಬಹುದೇ ಎಂಬ ಅನುಮಾನಗಳನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಮೂವರು ಆರೋಪಿಗಳ ತೀವ್ರ ವಿಚಾರಣೆ

ವಿಧಾನಸೌಧ ಇನ್ಸ್​​​ಪೆಕ್ಟರ್ ಕುಮಾರಸ್ವಾಮಿ, ಕಬ್ಬನ್ ಪಾರ್ಕ್ ಎಸಿಪಿ ಬಾಲಕೃಷ್ಣರಿಂದ ಮೂವರು ಆರೋಪಿಗಳಾದ ಮಹಮ್ಮದ್ ಶಫಿ ನಾಶಿಪುಡಿ, ಮುನ್ನಾವರ್ ಅಹಮದ್, ಹಾಗೂ ಮಹಮ್ಮದ್ ಇಲ್ತಾಜ್ ಅನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಬಂಧಿತ ಮೂವರ ಪೈಕಿ ಬ್ಯಾಡಗಿಯ ಶಫಿ ನಾಶಿಪುಡಿ ಹಾಗೂ ಆರ್.ಟಿ.ನಗರದ ಮುನಾವರ್ ಅಹಮದ್ ಕೆಲ ವರ್ಷಗಳ ಸ್ನೇಹಿತರು. ದೆಹಲಿ ಮೂಲದ ಮಹಮ್ಮದ್ ಇಲ್ತಾಜ್​​ಗೂ ಉಳಿದ ಇಬ್ಬರು ಆರೋಪಿಗಳಿಗೂ ಯಾವುದೇ ಪರಿಚಯವಿಲ್ಲ ಎನ್ನಲಾಗಿದೆ

ಕೋಟಿ ಕೋಟಿ ಕುಳ ಮಹಮ್ಮದ್ ಶಫಿ ನಾಶಿಪುಡಿ!

ಪೊಲೀಸರ ವಿಚಾರಣೆ ವೇಳೆ ತಾನೊಬ್ಬ ಉದ್ಯಮಿ ಎಂದು ಮಹಮ್ಮದ್ ಶಫಿ ನಾಶಿಪುಡಿ ಹೇಳಿಕೊಂಡಿದ್ದಾನೆ. ಮೆಣಸಿನಕಾಯಿ ಉದ್ಯಮ ಮಾಡುತ್ತಿರುವುದಾಗಿಯೂ ನೂರಾರು ಕೋಟಿ ವ್ಯವಹಾರ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ನಾಶಿಪುಡಿ ಮುಂದಿನ ಬಾರಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಈಗಿನಿಂದಲೇ ಸಿದ್ದತೆ ನಡೆಸಿದ್ದ ಎಂದೂ ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ