ರಾಜ್ಯದಲ್ಲಿ ಹೆಚ್ಚಾಯ್ತು ವಾಂತಿ ಭೇದಿ ಪ್ರಕರಣ: ಬೆಂಗಳೂರಿನಲ್ಲಿ ಡಯೇರಿಯಾ, ಅತಿಸಾರ ಆರ್ಭಟ
ಈ ಬಾರಿ ಬೇಸಿಗೆಯಲ್ಲಿ ಬಿರು ಬಿಸಿಲು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದ ಜನರನ್ನ ಬಿಡದೆ ಕಾಡ್ತಿದೆ. ಮನೆಯಲ್ಲಿದ್ರು ಬಿಸಿಲ ಧಗೆ, ಇನ್ನು ಹೊರಗೆ ಬಂದ್ರೆ ಅಂತೂ ಹೇಳೋ ಹಾಗೇ ಇಲ್ಲ. ತೀವ್ರ ಬಿಸಿಲಿನ ಧಗೆಗೆ ಹೀಟ್ ವೇವ್ಸ್ ಜೊತೆಗೆ ಈಗ ಅತಿಸಾರ ಪ್ರಕರಣಗಳು ಏರಿಕೆ ಕಂಡಿವೆ.
ಬೆಂಗಳೂರು, ಮೇ.09: ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು (Bengaluru) ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಾಖಲೆಯ ತಾಪಮಾನ ದಾಖಲಾಗುತ್ತಿದೆ. ರಾಜ್ಯದ ಜನರು ಎಂಥ ಶೆಕೆಯಪ್ಪ (Summer) ಅಂತ ಶಾಪ ಹಾಕೋಕ್ಕೆ ಶುರು ಮಾಡಿದ್ದಾರೆ. ಉರಿಯುವ ಬಿಸಿಲಿಗೆ ಹೀಟ್ ಸ್ಟ್ರೋಕ್ ಭೀತಿ ಒಂದು ಕಡೆಯಾದರೆ, ಆರೋಗ್ಯ ಸಮಸ್ಯೆಗಳ ಆತಂಕ ಮತ್ತೊಂಡೆ ಶುರವಾಗಿದೆ. ಈ ನಡುವೆ ತಾಪಮಾನ ಏರಿಕೆ ಬೆನ್ನಲ್ಲೇ ವಾಂತಿ, ಭೇದಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸದ್ಯ ಈಗ ಕಳೆದ ಎರಡು ದಿನದಿಂದ ಮಳೆ ಸುರಿಯುತ್ತಿದ್ದು ಸಡನ್ ಹವಾಮಾನ ಬದಲಾವಣೆಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ.
ಹಾಸನ ಜಿಲ್ಲೆಯಲ್ಲಿ ಎರಡು ಸಾವು ಹಿನ್ನಲೆ ಆರೋಗ್ಯ ಇಲಾಖೆ ಅಲರ್ಟ್
ರಾಜಧಾನಿ ಬೆಂಗಳೂರಿನಲ್ಲಿ ಡಯೇರಿಯಾ, ಅತಿಸಾರ ಆರ್ಭಟ ಹೆಚ್ಚಾಗಿದೆ. ಕಲುಷಿತ ನೀರು ಮತ್ತು ಅತಿಯಾದ ಆಹಾರ ಸೇವನೆ, ವ್ಯಾಪಕ ಬಿಸಿಲಿನ ಎಫೆಕ್ಟ್ ಗೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಅತಿಸಾರ ಪ್ರಕರಣಗಳು ದಾಖಲಾಗಿವೆ. ಕಳೆದೊಂದು ವಾರದಲ್ಲಿಯೇ ಬೆಂಗಳೂರಿನಲ್ಲಿ 4450 ಅತಿಸಾರ ಕೇಸ್ ದಾಖಲಾಗಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಅತಿಸಾರ ಸೋಂಕಿನ ಪ್ರಕರಣ ರಾಜ್ಯದಲ್ಲಿ 52 ಸಾವಿರದ ಗಡಿ ದಾಟಿದೆ. ಕಳೆದೊಂದು ವಾರದಿಂದ ಅತಿಸಾರ ಪ್ರಕರಣಗಳ ಸಂಖ್ಯೆ ವ್ಯಾಪಕ ಹೆಚ್ಚಳ ಕಂಡಿದೆ. ಹೆಚ್ಚುತ್ತಿರುವ ತಾಪಮಾನ ಹವಾಮಾನ ಬದಲಾವಣೆಯಿಂದ ಅತಿಸಾರ ಕಾಯಿಲೆಯ ಹರಡುವಿಕೆ ಹೆಚ್ಚಾಗುತ್ತಿದೆ. ಇನ್ನು ಹಾಸನ ಜಿಲ್ಲೆಯಲ್ಲಿ ಕ್ಲಸ್ಟರ್ ಪ್ರಮಾಣದಲ್ಲಿ ಅತಿಸಾರ ಕೇಸ್ ಹೆಚ್ಚಳವಾಗಿದ್ದು ಇಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಆ ಭಾಗದಲ್ಲಿ ನೀರು ಆಹಾರದ ಕುರಿತು ಅಧ್ಯಯನಕ್ಕೆ ಕೂಡಾ ಮುಂದಾಗಿದೆ. ಮತ್ತೊಂದಡೆ ಬೆಂಗಳೂರಿನಲ್ಲಿ ಅತಿಸಾರ ಕೇಸ್ ಏರಿಕೆಯ ಮೇಲೆಯೂ ನಿಗಾವಹಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಜೀವಜಲವಿಲ್ಲದೇ ಇಂಗಿ ಹೋದ 125ಕ್ಕೂ ಹೆಚ್ಚು ಕೆರೆಗಳು, ಇದಕ್ಕೆ ಯಾರು ಹೊಣೆ?
ಕಲುಷಿತ ನೀರು, ಅತಿಯಾದ ಆಹಾರ ಸೇವನೆ ಕೂಡಾ ರಾಜಧಾನಿಯಲ್ಲಿ ಅತಿಸಾರ ಪ್ರಕರಣ ಏರಿಕೆಯಾಗಲು ಕಾರಣವಾಗಿದೆ. ಬೇಸಿಗೆ ರಜೆ ಹಿನ್ನಲೆ ಮಕ್ಕಳು ಮನೆಯಲ್ಲಿದ್ದು ಕಲುಷಿತ ನೀರು ಹಾಗೂ ಆಹಾರದಿಂದ ಅತಿಸಾರ ಕಂಡು ಬರ್ತಿದೆ. ಮಕ್ಕಳಲ್ಲಿ ಅತಿಸಾರದಿಂದ ಮಗುವಿನ ಜೀರ್ಣಾಂಗಗಳಲ್ಲಿ ಸಮಸ್ಯೆ ಕೂಡಾ ಕಂಡು ಬರ್ತಿವೆ. ಹೀಗಾಗಿ ಅತಿಸಾರದ ಲಕ್ಷಣಗಳಾದ ವಾಂತಿ ಭೇದಿ, ಹೊಟ್ಟೆಯಲ್ಲಿ ಸೆಳೆತ ಅಥವಾ ಉಬ್ಬುವುದು ಕರುಳಿನ ನೋವು ಸುಸ್ತು ಮೈ ಕೈ ನೋವು ಜ್ವರ ವಾಕರಿಕೆ ಕಂಡು ಬಂದ್ರೆ ತಕ್ಷಣ ವೈದ್ಯರನ್ನ ಸಂಪರ್ಕ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಇನ್ನು ನಗರದಲ್ಲಿ ಕಾಲರಾ ಕೇಸ್ ಪತ್ತೆ ಹಿನ್ನಲೆ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಮಲದ ಸ್ಯಾಂಪಲ್ಸ್ ಪಡೆದು ಕಲ್ಚರ್ ಟೆಸ್ಟ್ ಗೆ ಕೂಡಾ ಕಳಿಸಲಾಗುತ್ತಿದೆ, ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯ ಸ್ಯಾಂಪಲ್ಸ್ ಪಡೆದು ಕಾಲರಾ ಟೆಸ್ಟ್ ಮಾಡಲು ಆಸ್ಪತ್ರೆಗಳು ಮುಂದಾಗಿವೆ. ವಾಂತಿ, ಭೇದಿ ಜೊತೆ ಕಾಲರಾ ಕೇಸ್ ಸಮರ್ಥ ನಿರ್ವಹಣೆ ಮಾಡಲಾಗುತ್ತಿದೆ.
ವೈದ್ಯರು ಆರೋಗ್ಯದ ದೃಷ್ಠಿಯಿಂದ ಬಿಸಿ ಮಾಡಿ ಆರಿಸಿದ ನೀರು, ಶುಚಿಯಾದ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಿದ್ದು ಜನ ಆದಷ್ಟು ಬೀದಿಬದಿಯ ಆಹಾರವನ್ನು ಸೇವಿಸದಂತೆ, ಆದಷ್ಟು ಬಿಸಿ ಮಾಡಿ ಆರಿಸಿದ ನೀರನ್ನು ಕುಡಿಯಲು ವೈದ್ಯರು ಮನವಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:41 am, Thu, 9 May 24