ಒಂಟಿ ಕಾಡಾನೆ ದಾಂಧಲೆ: ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು, ಮೂರು ಹಸು ದಾರುಣ ಸಾವು
ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡಿನ ಅಣ್ಣಿಯಾಳ ಗ್ರಾಮದಲ್ಲಿ ನಿನ್ನೆ ಭಾನುವಾರ ಒಂಟಿ ಕಾಡಾನೆ ದಾಂಧಲೆ ನಡೆಸಿದೆ. ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು, ಮೂರು ಹಸುಗಳು ದಾರುಣ ಸಾವು ಕಂಡಿವೆ. ತಳಿ ಶಾಸಕ ರಾಮಚಂದ್ರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ಆತಂಕಕಾರಿಯಾಗಿ ಮುಂದುವರಿದಿದೆ. ಅದ್ರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾಗೂ ಮಾನವ ಸಂಘರ್ಷ ಮಿತಿಮೀರಿದೆ. ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವೊಂದು (Wild elephant attack) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂರು ಹಸುಗಳನ್ನ ಬಲಿ ಪಡೆದು ದಾಂಧಲೆ ನಡೆಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ನಲ್ಲಿ. ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಯೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನ ಬಲಿ ಪಡೆದ ದಾರುಣ ಘಟನೆ ರಾಜ್ಯ ಗಡಿಭಾಗ ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡಿನ ಅಣ್ಣಿಯಾಳ ಗ್ರಾಮದಲ್ಲಿ (In Anniala village of Tamil Nadu adjacent to Anekal) ನಡೆದಿದೆ. ಅಣ್ಣಿಯಾಳ ಗ್ರಾಮದ ಆಶಾ ಕಾರ್ಯಕರ್ತೆ (Asha worker) ವಸಂತ(37), ದಾಸರಪಲ್ಲಿ ವಾಸಿ ಅಶ್ವಥಮ್ಮ(40) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿಗಳಾಗಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಗುಮ್ಮಳಾಪುರ, ಅಣ್ಣಿಯಾಳು, ತಳಿ ಸುತ್ತಮುತ್ತ ಬೀಡುಬಿಟ್ಟಿದ್ದ ಕಾಡಾನೆಯು ನಿನ್ನೆ ಭಾನುವಾರ ಬೆಳಿಗ್ಗೆ ಅಣ್ಣಿಯಾಳು ಗ್ರಾಮಕ್ಕೆ ನುಗ್ಗಿದೆ. ಗ್ರಾಮಕ್ಕೆ ಬಂದ ಆನೆಯನ್ನು ಓಡಿಸಲು ಗ್ರಾಮಸ್ಥರು ಮುಂದಾಗಿದ್ದ ವೇಳೆ, ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಮೂರು ಹಸುಗಳ ಮೇಲೆ ಕಾಡಾನೆ ದಾಳಿ ಮಾಡಿದೆ.
ಇನ್ನು ಪದೇ ಪದೇ ಹಳ್ಳಿಗಳ ಸಮೀಪದ ರೈತರ ಹೊಲ ಗದ್ದೆಗಳಿಗೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸುತ್ತಿದೆ. ಕಾಡಾನೆಗಳಿಂದ ಬೆಳೆ ಹಾನಿ ಜೊತೆಗೆ ಪ್ರಾಣ ಹಾನಿಯಾಗುತ್ತಿದ್ದು, ನಿನ್ನೆಯೂ ಸಹ ಇಬ್ಬರು ಮಹಿಳೆಯರು ಮತ್ತು ಮೂರು ಹಸುಗಳನ್ನು ಕಾಡಾನೆ ಹಾವಳಿ ಬಲಿ ಪಡೆದಿದೆ. ಕಾಡಾನೆ ದಾಳಿಗೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಹಿನ್ನೆಲೆ ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ತಳಿ ಶಾಸಕ ರಾಮಚಂದ್ರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಮಹಿಳೆಯರ ಸಾವಿಗೆ ತಲಾ 20 ಲಕ್ಷ ಪರಿಹಾರದ ಜೊತೆಗೆ ಮೃತರ ಕುಟುಂಬದವರಿಗೆ ಸರ್ಕಾರಿ ಉದ್ಯೋಗಕ್ಕೆ ಒತ್ತಾಯಿಸಿದರು. ರಸ್ತೆ ತಡೆ ಹಿನ್ನೆಲೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರ ಮನವೊಲಿಕೆ ಬಳಿಕೆ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಒಟ್ಟಿನಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ಆಹಾರ ಅರಸಿಕೊಂಡು ಗ್ರಾಮದೆಡೆಗೆ ಲಗ್ಗೆ ಇಡುವ ಕಾಡಾನೆಗಳು ಬೆಳೆ ಹಾನಿ ಜೊತೆಗೆ ಪ್ರಾಣ ಹಾನಿ ನಡೆಸಿ ದಾಂಧಲೆ ನಡೆಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಕಾಡಾನೆಗಳು ನಾಡಿನತ್ತ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.