ಬೆಂಗಳೂರು: ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರದ ಅಮೃತಹಳ್ಳಿಯಲ್ಲಿ ನಡೆದಿದೆ. ವೀರಣ್ಣ ಪಾಳ್ಯದ ನಿವಾಸಿ ಸಂಗೀತಾ(26) ನೇಣಿಗೆ ಶರಣಾಗಿದ್ದಾರೆ. 4 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ(Love marriage) ಸಂಗೀತಾ ಮತ್ತು ಇಕೆಯ ಪತಿ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಂಗೀತಾ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ ಎಂಬ ಶಂಕೆ ಮೂಡಿದೆ. ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮಧ್ಯೆ ಬಿರುಕು ಮೂಡಿದ್ದು, ಪತಿಯ ಕಿರುಕುಳದಿಂದ ಬೇಸತ್ತ ಸಂಗಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ.
ಉಡುಪಿ: ಮಾನಸಿಕ ಖಿನ್ನತೆಗೆ ಬಾಲಕಿ ಬಲಿ
ಮಾನಸಿಕ ಖಿನ್ನತೆಗೆ ಒಳಗಾದ ಬಾಲಕಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ದೀಪಾ (15) ನೇಣಿಗೆ ಶರಣಾದ ಬಾಲಕಿ. ಬಾಗಲಕೋಟೆ ಮೂಲ ನಿವಾಸಿಯಾಗಿರುವ ದೀಪ, ನಗರದ ಬನ್ನಂಜೆಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲ ವರ್ಷಗಳಿಂದ ಬನ್ನಂಜೆಯ ಬಾಡಿಗೆ ಮನೆಯಲ್ಲಿ ದೀಪ ಕುಟುಂಬ ವಾಸವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪಿಡ್ಸ್ ಹಾಗೂ ಇನ್ನಿತರ ದೈಹಿಕ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಇದರಿಂದ ಓದಿಗೆ ಕೂಡ ತೊಡಕಾಗಿದೆ. ಹೀಗಾಗಿ ಮಾನಸಿಕವಾಗಿ ನೊಂದಿದ್ದ ದೀಪ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಅಜ್ಜರಕಾಡು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹಾಸನ: ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ತಂದೆ ನೇಣಿಗೆ ಶರಣು
ಮಗಳ ಸಾವಿನಿಂದ ಮನನೊಂದು ತಂದೆ ನೇಣಿಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಿನ್ನೆ (ಡಿಸೆಂಬರ್ 09) ನಡೆದಿದೆ. ಅಳಿಯನ ಮನೆ ಮುಂದೆ ತಂದೆ ನಾಗರಾಜ್(55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಇಷ್ಟಪಡುತ್ತಿದ್ದ ಅಹಾರ ಪದಾರ್ಥಗಳನ್ನು ಮನೆ ಬಾಗಿಲಲ್ಲಿ ಎಡೆಯಿಟ್ಟು ಬಾಗಿಲಿನಲ್ಲೇ ನೇಣುಬಿಗಿದುಕೊಂಡು ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಳಿಯ ಪ್ರವೀಣ್, ಬೀಗರಾದ ಭದ್ರಮ್ಮ ಅವರ ಸಂಬಂಧಿ ವಿರುದ್ದ ಮಾನಸಿಕ ಕಿರುಕುಳ ಆರೋಪ ಕೇಳಿ ಬಂದಿದೆ. ವರ್ಷದ ಹಿಂದೆ ನಾಗರಾಜ್ ಪುತ್ರಿ ಹೇಮಶ್ರಿಯನ್ನು ಮಾಳೆಗೆರೆಯ ಪ್ರವೀಣ್ಗೆ ವಿವಾಹ ಮಾಡಿಕೊಡಲಾಗಿತ್ತು. ಮಗಳು ಗರ್ಭಿಣಿಯಾದ ವೇಳೆ ಮಗಳ ಗರ್ಭಪಾತಕ್ಕೆ ಯತ್ನಿಸಲಾಗಿದೆ ಎಂದು ಮೃತ ನಾಗರಾಜ್ ಕುಟುಂಬ ಆರೋಪಿಸಿದೆ.
ಮಗಳಿಗೆ ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ವೇಳೆಯಲ್ಲಿ ಮೃತಪಟ್ಟಿದ್ದಾಳೆ ಎಂದು ದೂರು ನೀಡಲಾಗಿದೆ. ಸಾವಿನ ಬಳಿಕ ಮಗಳ ಕಾರ್ಯಗಳನ್ನು ಸರಿಯಾಗಿ ಮಾಡಿಲ್ಲ ಎಂದು ನಾಗರಾಜ್ ಮನನೊಂದಿದ್ದರು. ಜೊತೆಗೆ ಅಳಿಯ ಪಡೆದಿದ್ದ ಎರಡು ಲಕ್ಷ ಸಾಲ ಹಿಂದಿರುಗಿಸದೆ ಸತಾಯಿಸುತ್ತಿದ್ದರಿಂದ ಬೇಸತ್ತಿದ್ದರು.
ನಿನ್ನೆ ಹಾಡ ಹಗಲೇ ಅಳಿಯನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಅಳಿಯ, ಆತನ ತಾಯಿ ಹಾಗೂ ಸಂಬಂಧಿಕರ ಬಗ್ಗೆ ಆರೋಪ ಮಾಡಿದ್ದಾರೆ. ಮೂವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿ ಮಗಳಿಗೆ ಎಡೆ ಇಟ್ಟು ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ಗಂಗಾವತಿ: ಕಲ್ಲಿನ ಮೇಲಿಂದ ಕೆರೆಗೆ ಜಂಪ್ ಮಾಡಿದ್ದ ಇಬ್ಬರು ಪ್ರವಾಸಿ ಟೆಕ್ಕಿಗಳು ನೀರುಪಾಲು
Published On - 11:22 am, Fri, 10 December 21