AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂವಿನ ಮಾರ್ಕೆಟ್​ಗಾಗಿ 942 ಮರಗಳ ಮಾರಣ ಹೋಮ; ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಪರಿಸರ ಹೋರಾಟಗಾರರ ಆಕ್ರೋಶ!

ಬೆಂಗಳೂರಿನ ಯಲಹಂಕ ಬಳಿ ರಾಜ್ಯ ಸರ್ಕಾರವು ಅಂತರರಾಷ್ಟ್ರೀಯ ಹೂವಿನ ಮಾರುಕಟ್ಟೆ ನಿರ್ಮಿಸಲು ಮುಂದಾಗಿದೆ. ಯೋಜನೆಗಾಗಿ ರಾಜ್ಯ ಸರ್ಕಾರ ಐದು ಎಕರೆ ಪ್ರದೇಶದಲ್ಲಿ 942 ಮರಗಳನ್ನು ಕಡಿಯಲು ಮುಂದಾಗಿದ್ದು, ಈ ಯೋಜನೆಗೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆ ಯೋಜನೆ ಕೈಬಿಡುವಂತೆ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನವೂ ನಡೆದಿದೆ.

ಹೂವಿನ ಮಾರ್ಕೆಟ್​ಗಾಗಿ 942 ಮರಗಳ ಮಾರಣ ಹೋಮ; ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಪರಿಸರ ಹೋರಾಟಗಾರರ ಆಕ್ರೋಶ!
ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಪರಿಸರ ಹೋರಾಟಗಾರರ ಆಕ್ರೋಶ!
Kiran Surya
| Updated By: ಭಾವನಾ ಹೆಗಡೆ|

Updated on:Nov 10, 2025 | 12:40 PM

Share

ಬೆಂಗಳೂರು, ನವೆಂಬರ್ 10: ಯಲಹಂಕ ಬಳಿಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರ್ಕಾರ (State Government)  ಐದು ಎಕರೆ ವಿಸ್ತೀರ್ಣದಲ್ಲಿ ಅಂತರರಾಷ್ಟ್ರೀಯ ಹೂವಿನ ಮಾರ್ಕೆಟ್ (International Flower Market) ಮಾಡಲು ಮುಂದಾಗಿದೆ. ಆದರೆ ಇದಕ್ಕೆ ವಿದ್ಯಾರ್ಥಿಗಳು ಮತ್ತು ಪರಿಸರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು

ತೋಟಗಾರಿಕಾ ಇಲಾಖೆಯಿಂದ ಜಿಕೆವಿಕೆ ಕ್ಯಾಂಪಸ್ ನಲ್ಲಿ ಇಂಟರ್ನ್ಯಾಷನಲ್ ಫ್ಲವರ್ ಮಾರ್ಕೆಟ್ ಓಪನ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಇದಕ್ಕೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ಮತ್ತು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಹೂವಿನ ಮಾರುಕಟ್ಟೆಗಾಗಿ ಇಲಾಖೆ 942 ಮರಗಳ ಮಾರಣ ಹೋಮಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮರಗಳನ್ನು ಕಡಿಯಬಾರದೆಂದು ಪರಿಸರವಾದಿಗಳು ಹೋರಾಟ ನಡೆಸುತ್ತಿದ್ದಾರೆ. ಆದರೆ ನವೆಂಬರ್ 3 ರಂದು ಎಪಿಎಂಸಿಯ ಅಧಿಕಾರಿಗಳು, ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್) ಅಧಿಕಾರಿಗಳು ಕ್ಯಾಂಪಸ್ಗೆ ಭೇಟಿ ನೀಡಿ‌ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ವಿರೋಧಿಸಿರುವ ವಿದ್ಯಾರ್ಥಿಗಳು ಇಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಗಳನ್ನು ಕಡಿಯದಂತೆ ಆನ್ಲೈನ್ ಕ್ಯಾಂಪೇನ್

ಡಿಸೆಂಬರ್ ಒಳಗಾಗಿ ಹೊಸ ಮಾರುಕಟ್ಟೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು, ಮಾರುಕಟ್ಟೆ ಪ್ರಾಜೆಕ್ಟ್ ಕೈಬಿಡುವಂತೆ ವಿದ್ಯಾರ್ಥಿಗಳು ಮತ್ತು ಪರಿಸರ ಹೋರಾಟಗಾರರು ಪ್ರತಿಭಟನೆ ಮಾಡಿದ್ದಾರೆ. ಮರಗಳನ್ನು ಕಡಿಯದಂತೆ ಆನ್ಲೈನ್ ಕ್ಯಾಂಪೇನ್ ಮಾಡಿ 2 ಸಾವಿರಕ್ಕೂ ಅಧಿಕ ಸಹಿಗಳ ಸಂಗ್ರಹ ಮಾಡಲಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಬೆಳಸಲಾಗಿದ್ದ ಗೋಡಂಬಿ, ಮಾವು, ತೆಂಗು, ಹಲಸು ಸೇರಿ ವಿಶೇಷ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದ್ದು, ವಿದ್ಯಾರ್ಥಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪ್ರಾಜೆಕ್ಟ್ ಕೈ ಬಿಡುವಂತೆ ಪರಿಸರ ಪ್ರೇಮಿಗಳು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಜಿಕೆವಿಕೆ ಕ್ಯಾಂಪಸ್ನಲ್ಲಿ ಮಾರುಕಟ್ಟೆ ಬಂದರೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ನಿವೃತ್ತ ಪ್ರಾಧ್ಯಾಪಕರು ಮತ್ತು ಸ್ಥಳೀಯ ನಿವಾಸಿ ಜಗದೀಶ್ ಹೇಳಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:39 pm, Mon, 10 November 25