
ಬೆಂಗಳೂರು, ಜನವರಿ 08: ಯಲಹಂಕ ಕೋಗಿಲು ಬಳಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಸಂಬಂಧ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಬಂಧಿತ ಆರೋಪಿಗಳಾದ ವಿಜಯ್ ಮತ್ತು ವಸೀಮ್ ಉಲ್ಲಾ ಅಲ್ಲಿಯ ಅಕ್ರಮ ನಿವಾಸಿಗಳಿಂದ ಹಣ ಪಡೆದು ನಕಲಿ ದಾಖಲೆ ಸೃಷ್ಟಿಮಾಡಿದ್ದಾರೆ. ಅಲ್ಲದೆ ಹಕ್ಕುಪತ್ರಗಳನ್ನು ಕೂಡ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಬಗ್ಗೆಯೂ ಯಲಹಂಕ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ಇದ್ದರೂ ಸಹ ಯಲಹಂಕ ತಹಶಿಲ್ದಾರ್ ಕ್ರಮ ಕೈಗೊಂಡಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿರೋ ಜಮೀನು ವಶಕ್ಕೆ ಪಡೆದಿಲ್ಲ. ನಕಲಿ ದಾಖಲೆಗಳ ಬಗ್ಗೆ ಕ್ರಮ ತೆಗದುಕೊಳ್ಳುವಂತೆ ಸ್ಥಳೀಯ ಯಲಹಂಕ ಪೊಲೀಸ್ ಠಾಣೆ ಗೆ ದೂರನ್ನು ನೀಡಿಲ್ಲ. ಹೀಗಾಗಿ 2022ರಿಂದ 2025ರ ಅವಧಿಯಲ್ಲಿ ಕೆಲಸ ಮಾಡಿರುವ ತಹಶಿಲ್ದಾರರ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಆಗಿದ್ದು 167 ಮನೆ, ಫ್ಲಾಟ್ಗಾಗಿ ಸಲ್ಲಿಕೆಯಾದ ಅರ್ಜಿ 250ಕ್ಕೂ ಹೆಚ್ಚು!
ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ. ಪರಿಶೀಲನೆ ವೇಳೆ ಜಾಗ ಕೊಡಿಸುತ್ತೇವೆಂದು ಆರೋಪಿಗಳು ಮೋಸ ಮಾಡಿದ್ದು ಬೆಳಕಿಗೆ ಬಂದಿದೆ. ಹೀಗಾಗಿ ಸರ್ಕಾರಿ ಭೂಮಿ ಒತ್ತುವರಿ, ವಂಚನೆ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ದಾಖಲೆ ನೀಡಿರುವುದರ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ಜನರಿಂದ ಹಣ ಪಡೆದಿದ್ದಾರೆ? ಯಾವ ದಾಖಲೆಗಳನ್ನು ನಕಲಿ ಮಾಡಲಾಗಿದೆ ಎಂದು ತನಿಖೆ ಮಾಡ್ತೇವೆ. ಯಾರೆಲ್ಲ ವಂಚನೆಗೊಳಗಾಗಿದ್ದಾರೆ ಅವರಿಗೆ ದೂರು ನೀಡಲು ಹೇಳಿದ್ದೇವೆ. ಅವರು ದೂರಿನ ಆಧಾರದಲ್ಲಿ ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಕೋಗಿಲು ಲೇಔಟ್ನಲ್ಲಿ ಮನೆ ತೆರವಾಗಿರುವವರ ಪೈಕಿ 26 ಜನರಿಗೆ ಮನೆ ಕೊಡಲು ಅವಕಾಶವಿದೆ. ಇಷ್ಟು ಕುಟುಂಬಗಳ ದಾಖಲೆಗಳು ಮಾತ್ರ ಸರಿಯಾಗಿವೆ. ಇನ್ನೂ ಹಲವರ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಷರತ್ತು ವಿಧಿಸಿ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಮನೆ ನೀಡುವುದಿಲ್ಲ. ಈಗಾಗಲೇ ಸಿಎಂ ಸಭೆ ನಡೆಸಿದ್ದು ಮನೆ ಹಂಚಿಕೆಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.