ಡಿಕೆಶಿಗೆ ಮಹತ್ವದ ಹುದ್ದೆ ನೀಡಿದ ಹೈಕಮಾಂಡ್, ಇತ್ತ ಸಿದ್ದರಾಮ್ಯಯ ಕುರ್ಚಿ ಮತ್ತಷ್ಟು ಗಟ್ಟಿ
ಕರ್ನಾಟಕದಲ್ಲಿನ ಸಿಎಂ ಕುರ್ಚಿ ಚರ್ಚೆ ಹೊತ್ತಿನಲ್ಲಿಯೇ ಹೈಕಮಾಂಡ್ ನಿರ್ಧಾರವೊಂದನ್ನ ತೆಗೆದುಕೊಂಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಅಸ್ಸಾಂ ಚುನಾವಣೆಯ ಜವಾಬ್ದಾರಿ ಕೊಟ್ಟಿದೆ. ವರಿಷ್ಠರ ಈ ನಡೆ ರಾಜ್ಯದ ಕುರ್ಚಿ ಬದಲಾವಣೆಯ ಮುಹೂರ್ತವನ್ನ ಮುಂದೂಡಲಾಯ್ತ ಅನ್ನೋ ಚರ್ಚೆ ಹುಟ್ಟಿಕೊಂಡಿದೆ. ಹಾಗಿದ್ರೆ ಈ ತೀರ್ಮಾನದ ಹಿಂದಿನ ಉದ್ದೇಶವೇನು? ಏನೆಲ್ಲ ಚರ್ಚೆ ಆಗ್ತಿದೆ? ಈ ಕುರಿತ ರಿಪೋರ್ಟ್ ಇಲ್ಲಿದೆ.

ಬೆಂಗಳೂರು, (ಜನವರಿ 08): ಸಂಕ್ರಾಂತಿ. ಸೂರ್ಯ ಪಥ ಬದಲಿಸುವ ದಿನ. ಆದ್ರೆ ಕರ್ನಾಟಕ ಕಾಂಗ್ರೆಸ್ಸಿಗರು (Karnataka Congress), ನಾಯಕತ್ವ ಬದಲಾವಣೆಗೆ ಸಾಕ್ಷಿ ಆಗಲಿರುವ ಬೆಳವಣಿಗೆ ಅಂತ್ಲೇ ನಂಬಿದ್ರು. ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಕುರ್ಚಿ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯುತ್ತದೆ ಎಂದುಕೊಂಡಿದ್ರು. ಆದ್ರೆ ಲೆಕ್ಕಾಚಾರ ಯಾಕೋ ಬದಲಾದಂತೆ ಕಾಣ್ತಿದೆ. ದಿಲ್ಲಿ ದೊರೆಗಳು ಕುರ್ಚಿ ಚರ್ಚೆಯ ಕೇಂದ್ರ ಬಿಂದು ಡಿಕೆ ಶಿವಕುಮಾರ್ಗೆ (DK Shivakumar) ಅಸ್ಸಾಂ ಚುನಾವಣೆಯ ಜವಾಬ್ದಾರಿ ನೀಡಿದ್ದಾರೆ. ಹೌದು… ಡಿಸಿಎಂ ಡಿಕೆ ಶಿವಕುಮಾರ್‌ರನ್ನ ಅಸ್ಸಾಂ ಕಾಂಗ್ರೆಸ್ನ ಹಿರಿಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಸಿಎಂ ಕುರ್ಚಿ ಚರ್ಚೆ ನಡೀತಿರೋ ಹೊತ್ತಲ್ಲೇ ಹೈಕಮಾಂಡ್ ಇಂತಹದೊಂದು ನಿರ್ಧಾರ ತೆಗೆದುಕೊಂಡಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಬೆಳವಣಿಗೆ ಇನ್ಸೈಡ್ ಮಾಹಿತಿ
ಅಸ್ಸಾಂನ ಕಾಂಗ್ರೆಸ್ ವೀಕ್ಷಕರ ಪಟ್ಟಿಯಲ್ಲಿ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಜಾರ್ಖಂಡ್ನ ಬಿಂದು ತಿರ್ಕಿ ಅವ್ರು ಕೂಡ ಇದ್ದಾರೆ. ಇಲ್ಲಿ ನೀವ್ ಗಮನಸಬೇಕಾದ ಅಂಶವೊಂದಿದೆ. ಅದೇನಂದ್ರೆ, ಸಾಮಾನ್ಯವಾಗಿ ಚುನಾವಣಾ ವೀಕ್ಷಕರನ್ನಾಗಿ ಉಪ ಮುಖ್ಯಮಂತ್ರಿಗಳ ನೇಮಕ ಮಾಡೋದು ತೀರ ವಿರಳ.. ಹೀಗಿದ್ದರೂ ಡಿಕೆರನ್ನ ಎಐಸಿಸಿ ನಿಯೋಜಿಸಿರೋದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಅಂತಾ ವ್ಯಾಖ್ಯಾನ ಮಾಡಲಾಗುತ್ತಿದೆ.
ಇದನ್ನೂ ನೋಡಿ: ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಒಂದು ವೇಳೆ ಡಿಕೆ ಶಿವಕುಮಾರ್ ಬೆಂಬಲಿಗರು ಅಂದುಕೊಂಡಂತೆ ಡಿಕೆ ಸಂಕ್ರಾಂತಿ ಬಳಿಕ ಸಿಎಂ ಆದ್ರು, ಅಸ್ಸಾಂನಲ್ಲಿ ರಾಜಕೀಯದಲ್ಲಿರಲು ಸಾಧ್ಯವೇ? ಸಿಎಂ ಆಗಿ ವೀಕ್ಷಕರ ಕೆಲಸ ಮಾಡೋಕೆ ಸಾಧ್ಯವೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹೇಳಿ ಕೇಳಿ ಪಂಚ ರಾಜ್ಯ ಚುನಾವಣೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯೋ ಸಾಧ್ಯತೆ ಇದೆ. ಡಿಕೆ ಅಸ್ಸಾಂ ವೀಕ್ಷಕರಾಗಿರೋದ್ರಿಂದ ಆ ರಾಜ್ಯಕ್ಕೆ ಹೋಗಿ ಬಂದು ಮಾಡಬೇಕಾಗುತ್ತೆ.
ದೆಹಲಿಗೆ ತೆರಳಿ ವರದಿ ಕೊಡುವ ಕೆಲಸಗಳು ಇರುತ್ತೆ. ಒಂದು ವೇಳೆ ಅಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ನೇಮಕಾತಿ ಮಾಡೋ ಜವಬ್ದಾರಿ ಕೂಡ ನಿರ್ವಹಿಸಬೇಕು. ವೀಕ್ಷಕರ ಅಭಿಪ್ರಾಯ ಆಗ ಅತ್ಯಮೂಲ್ಯ. ಏನಿಲ್ಲ ಅಂದ್ರು ಚುನಾವಣೆಯಿಂದ ಸರ್ಕಾರ ರಚನೆ ಮಾಡೋವರೆಗೆ 40ರಿಂದ 45 ದಿನಗಳನ್ನ ತೆಗೆದುಕೊಳ್ಳಲಿದೆ. ಇದು ರಾಜ್ಯದ ಅಧಿಕಾರ ಹಂಚಿಕೆ ಮೇಲೂ ಪರಿಣಾಮ ಬೀರೋದಂತೂ ಖಚಿತ. ವಿಚಾರ ಇಷ್ಟೇ ವೀಕ್ಷಕರೇ ಹೈಕಮಾಂಡ್ ಈ ಮೂಲಕ ಮಾರ್ಚ್ ಹಾಗೂ ಏಪ್ರಿಲ್ ತಿಂಗಳವರೆಗೆ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ಕೊಟ್ಟಂತಿದೆ.
ಅಧಿಕಾರ ಹಂಚಿಕೆ ನಿರ್ಧಾರ ಸದ್ಯಕ್ಕಿಲ್ಲ
ರಾಜ್ಯದಲ್ಲಿ ಅಧಿಕಾರ ಹಂಚಿಕೆ ನಿರ್ಧಾರ ಸದ್ಯ ಮಾಡೋದಿಲ್ಲ. ಚುನಾವಣೆಗಳು ಮುಗಿಯುವವರೆಗೆ ಯಾವುದೇ ಚರ್ಚೆ ಆಗೋದಿಲ್ಲ. ದೆಹಲಿ ಹೈಕಮಾಂಡ್ ಚುನಾವಣೆಗೆ ಹೆಚ್ಚಿನ ಮಹತ್ವ ಕೊಡಲಿದೆ. ಕಾಂಗ್ರೆಸ್ ಗೆಲುವಿನ ಅಜೆಂಡದ ಬಗ್ಗೆ ವರಿಷ್ಠರು ಚಿಂತನೆ ನಡೆಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಸದ್ಯ ಹೆಚ್ಚಿನ ಸಮಯವೇ ಇಲ್ಲ. ಇನ್ನು ನಿರ್ಧಾರ ತೆಗೆದುಕೊಳ್ಳಬೇಕಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಬ್ಯುಸಿ ಇರಲಿದ್ದಾರೆ. ಇದೆಲ್ಲವನ್ನ ನೋಡ್ತಿದ್ರೆ, ಸಿಎಂ ಕುರ್ಚಿ ಕುರಿತ ನಿರ್ಧಾರ ಏಪ್ರಿಲ್ವರೆಗೆ ಬ್ರೇಕ್ ಬೀಳೋದು ಗ್ಯಾರಂಟಿ..
ಡಿಕೆ ಶಿವಕುಮಾರ್ ಕೊಟ್ಟ ಸಂದೇಶವೇನು?
ಇನ್ನು ಅಸ್ಸಾಂನ ಜವಾಬ್ದಾರಿ ನಿಭಾಯಿಸೋ ಮೂಲಕ ಡಿಕೆ ಸಂದೇಶವೊಂದನ್ನ ಕೊಡುವ ಸಾಧ್ಯತೆ ಇದೆ. ಅದೇನಂದ್ರೆ, ಕಾಂಗ್ರೆಸ್ ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ. ಕಷ್ಟಕಾಲದಲ್ಲಿ ಪಕ್ಷದ ಜೊತೆಗೆ ನಿಂತಿದ್ದೇನೆ ಅಂತಾ ಡಿಕೆ ಸಂದೇಶ ರವಾನಿಸಲಿದ್ದಾರೆ. ಪಕ್ಷವೇ ನನ್ನ ಗುಂಪು ಎನ್ನುವ ಮಾತನ್ನ ಸಾರಿಸಾರಿ ಹೇಳಲಿದ್ದಾರೆ. ಚುನಾವಣೆ ಸೇರಿದಂತೆ ಸವಾಲಿನ ಹೊಣೆ ಹೊರಲು ನಾನು ಸಿದ್ಧನಿದ್ದೇನೆ. ಹೊಣೆ ಹೊತ್ತ ಬಳಿಕ ಕೆಲಸದ ಕೂಲಿ ಕೊಡಲಿದೆ. ಹೈಕಮಾಂಡ್ ಕೈಬಿಡಲ್ಲ ಅನ್ನೋ ವಿಶ್ವಾಸ ಡಿಕೆಯಲ್ಲಿ ಮತ್ತಷ್ಟು ಬೆಳೆಯಲಿದೆ.
ನನಗೆ ಬೇರೆ ಆಯ್ಕೆಗಳಿಲ್ಲ. ನನ್ನ ಆಯ್ಕೆ ಇಷ್ಟೆ ಪಕ್ಷ ಏನು ಹೇಳುತ್ತೋ ಅದನ್ನ ಮಾಡೋದು. ಕಾಂಗ್ರೆಸ್ಸಿಗನಾಗಿ ನಾನು ಪಕ್ಷಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಎಐಸಿಸಿಯ ಮಾಧ್ಯಮ ಪ್ರಕಟಣೆಯನ್ನ ನೋಡಿದೆ. ಇನ್ನು ಅತ್ತ ಮುಖ್ಯಮಂತ್ರಿಗಳಾಗಲಿ, ಡಿಸಿಎಂ ಡಿಕೆ ಆಗಲಿ ಸದ್ಯಕ್ಕೆ ದೆಹಲಿಗೆ ಬಗ್ಗೆ ಮುನ್ಸೂಚನೆ ಕೊಡ್ತಿಲ್ಲ. ಸಿಎಂ ಟೀಮ್, ಸಂಕ್ರಾಂತಿ ಬಳಿಕ ಪುನರ್ ರಚನೆ ಅಂತಿದೆ, ಡಿಕೆ ಬಣ ಹೈಕಮಾಂಡ್ಗೆ ನಾವ್ ಹೋಗಲ್ಲ. ಫೋನ್, ಮೆಸೇಜ್ ಕೂಡ ಮಾಡಲ್ಲ ಅಂತಿದ್ದಾರೆ.
Published On - 7:50 pm, Thu, 8 January 26
