ದಾಯಾದಿಗಳ ಜಗಳ: ಅಣ್ಣನ ಮನೆಗೆ ಬೆಂಕಿಯಿಟ್ಟ ತಮ್ಮ; ತಾನೂ ಸುಟ್ಟುಕೊಂಡು ಆಸ್ಪತ್ರೆ ಸೇರಿದ
ತಮ್ಮನಿಂದ ಅಣ್ಣನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೋವಿಂದಪುರದಲ್ಲಿ ನಡೆದಿದೆ. ದುರಾದೃಷ್ಟವೆಂದು ಅದೇ ಬೆಂಕಿಯ ಕೆನ್ನಾಲಿಗೆ ಸಿಲುಕಿ ತಮ್ಮ ಕೂಡ ಶೇ 25% ಭಾಗ ಸುಟ್ಟ ಗಾಯಗಳಿಂದ ನರಳಾಡುವಂತಾಗಿದೆ. ಹೊಸಕೋಟೆ ತಾಲೂಕಿನ ತಿರಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ದೇವನಹಳ್ಳಿ, ಜನವರಿ 08: ಅವರಿಬ್ಬರು ಒಂದೇ ತಂದೆ-ತಾಯಿ ಹೊಟ್ಟೆಯಲ್ಲಿ ಹುಟ್ಟಿದವರು. ಒಂದೇ ಮನೆ, ಒಂದೇ ತಟ್ಟೆಯಲ್ಲಿ ತಿಂದವರು. ಆದರೆ ಸಹೋದರರ (Brother) ನಡುವೆ ಆಸ್ತಿ ವಿಚಾರಕ್ಕೆ ಶುರುವಾದ ಕಲಹ ಬೆಂಕಿ (fire) ಹಚ್ಚಿ ಇಡೀ ಕುಟುಂಬವನ್ನೇ ಮುಗಿಸಲು ಹೋಗಿದ್ದ ತಮ್ಮ, ತನ್ನದೆ ಪ್ಲಾನ್ನಿಂದ ಆಸ್ಪತ್ರೆ ಸೇರುವಂತಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೋವಿಂದಪುರ ನಿವಾಸಿ ಮುನಿರಾಜು, ಕಳೆದ ಹಲವು ವರ್ಷಗಳಿಂದ ಪಟಾಕಿ ಚೀಟಿ ನಡೆಸಿ ಲಾಸ್ ಆಗಿದ್ದು, ಚೀಟಿ ಕಟ್ಟಿದವರಿಗೆ ಹಣ ಕೊಡುವುದಕ್ಕೆ ಜಮೀನು ಮಾರಾಟ ಮಾಡುವಂತೆ ತಂದೆ ಮತ್ತು ಸಹೋದರನಿಗೆ ಒತ್ತಡ ಹೇರಿದ್ದಾರೆ. ಆದರೆ ಈ ಹಿಂದೆ ಸ್ವಲ್ಪ ಜಮೀನು ಮಾರಾಟ ಮಾಡಿ ಸಾಲ ತೀರಿಸುವುದಕ್ಕೆ ಅಂತ ಹಣ ನೀಡಿದ್ದ ಕುಟುಂಬಸ್ಥರು ಇದೀಗ ಇರುವ ಜಮೀನು ಮಾರಾಟ ಮಾಡುವುದು ಬೇಡ ಅಂದಿದ್ದರಂತೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ, 16ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು
ಮನೆಯವರು ಜಮೀನು ಮಾರಾಟ ಬೇಡ ಎನ್ನುತ್ತಿದ್ದಂತೆ ಇತ್ತ ಸಾಲಗಾರರು ಮುನಿರಾಜು ಮೇಲೆ ಒತ್ತಡ ಹೇರಿದ್ದಾರೆ. ಸಾಲಗಾರರ ಕಾಟದಿಂದ ಬೆಸತ್ತ ತಮ್ಮ, ಅಣ್ಣನ ಕುಟುಂಬವನ್ನೇ ಮುಗಿಸುವ ಸಂಚು ಮಾಡಿದ್ದಾನೆ. ಬೆಂಕಿ ಹಚ್ಚುವುದಕ್ಕೆ ಅಂತ ಪಂಜು ಸಿದ್ದಪಡಿಸಿದ್ದು, ಪೆಟ್ರೋಲ್ ಕೂಡ ಖರೀದಿಸಿ ಮನೆಗೆ ಬಂದಿದ್ದ. ಸುತ್ತಿಗೆಯಿಂದ ಕಿಟಕಿ ಗ್ಲಾಸ್ ಒಡೆದು ಮನೆ ಒಳಗಡೆ ಪೆಟ್ರೋಲ್ ಸುರಿದಿದ್ದಾನೆ. ಇನ್ನೂ ಪೆಟ್ರೋಲ್ ಸುರಿಯುತ್ತಿದ್ದಂತೆ ರೂಮ್ನಲ್ಲಿ ಮಲಗಿದ್ದ ಅಣ್ಣ ರಾಮಕೃಷ್ಣ ಅತ್ತಿಗೆ ಮತ್ತು ಮಗು ಎಚ್ಚರಗೊಂಡು ಕಿರುಚಾಡಿದ್ದಾರೆ. ಮನೆಯವರು ಕಿರುಚಾಡುತ್ತಿದ್ದಂತೆ ಗಡಿಬಿಡಿಯಲ್ಲಿ ಸ್ವಲ್ಪ ಪೆಟ್ರೋಲ್ ಮನೆ ಒಳಗಡೆ ಸುರಿದು ಉಳಿದದ್ದು, ಕೈಯಲ್ಲಿ ಹಿಡಿದುಕೊಂಡು ಬೆಂಕಿ ಹಚ್ಚಿದ್ದಾನೆ. ಇನ್ನೂ ಪೆಟ್ರೋಲ್ ಕೈಯಲ್ಲಿದ್ದ ಕಾರಣ ಮನೆ ಒಳಗಡೆ ಹಾಗೂ ಹೊರಗಡೆ ಎರಡು ಕಡೆ ಬೆಂಕಿ ಶರವೇಗದಲ್ಲಿ ಆವರಿಸಿದ್ದು, ಬೆಂಕಿ ಹಚ್ಚಿದ ಮುನಿರಾಜು ಸಹ ಅದೇ ಬೆಂಕಿಗೆ ಸಿಲುಕಿ ಸುಟ್ಟುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಂಕಿ ತನಗೂ ಹೊತ್ತಿಕೊಳ್ಳುತ್ತಿದ್ದಂತೆ ಮುನಿರಾಜು ಹೊರಗಡೆ ಕಿರುಚಾಡಿದರೆ, ಒಳಗಡೆ ಪುಟ್ಟ ಮಗು ಜೊತೆ ಸಹೋದರ ರಾಮಕೃಷ್ಣ ಸಹ ಬೆಂಕಿಯ ಹೊಗೆಯಲ್ಲಿ ನರಳಾಡಿ ಅಕ್ಕಪಕ್ಕದವರನ್ನ ಸಹಾಯಕ್ಕೆ ಕೂಗಿದ್ದಾರೆ. ಜೊತೆಗೆ ಮನೆಯಿಂದ ಹೊರಗಡೆ ಬರಲು ಯತ್ನಿಸಿದರೆ ಬೆಂಕಿ ಹಚ್ಚುವ ಮೊದಲೇ ಮುನಿರಾಜು ಮನೆಯ ಬಾಗಿಲನ್ನು ಲಾಕ್ ಮಾಡಿದ್ದು, ಹೊರ ಬರಲಾಗದೆ ಪರದಾಡಿದ್ದಾರೆ. ಇನ್ನು ಅಕ್ಕ ಪಕ್ಕದ ಮನೆಯವರು ಕಿರುಚಾಟ ಕೇಳಿ ಅಣ್ಣ, ತಮ್ಮಂದಿರ ಸಹಾಯಕ್ಕೆ ಬಂದಿದ್ದು ರಾಮಕೃಷ್ಣ ಕುಟುಂಬವನ್ನ ರಕ್ಷಿಸಿದ್ದಾರೆ. ಜೊತೆಗೆ ಬೆಂಕಿಯಲ್ಲಿ ಬೆಂದು ನರಳಾಡುತ್ತಿದ್ದ ಮುನಿರಾಜು ನನ್ನು ಸಹ ರಕ್ಷಿಸಿದ್ದಾರೆ. ಬಳಿಕ ಹೊಸಕೋಟೆ ಆಸ್ವತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಲಾಗಿದೆ.
ಘಟನೆ ಸಂಬಂಧ ಅಣ್ಣ ರಾಮಕೃಷ್ಣ ನೀಡಿದ ದೂರಿನನ್ವಯ ತಿರಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಏಕೆ ಹೀಗೆ ಮಾಡಿದೆ ಅಂತ ಗಾಯಗೊಂಡ ಮುನಿರಾಜು ನನ್ನ ಕೇಳಿದರೆ ನನಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಮನೆಯವರು ನನ್ನ ಮುಂದೆ ಜಮೀನು ಮಾರಾಟ ಮಾಡುವುದಾಗಿ ಹೇಳಿ ಖರೀದಿದಾರರನ್ನ ಕರೆದುಕೊಂಡು ಹೋದರೆ ಮಾರುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗೆ ಅವರನ್ನು ಸಾಯಿಸಿ ನಾನು ಸಾಯಬೇಕು ಅಂತ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲು ಹೋಗಿದ್ದೆ ಅಂತ ಹೊಸ ಕಥೆ ಹೇಳಿದ್ದಾನೆ.
ಇದನ್ನೂ ಓದಿ: ಪೊಲೀಸರ ಕಿರುಕುಳಕ್ಕೆ ಹೊಸಕೋಟೆಯಲ್ಲಿ ವ್ಯಕ್ತಿ ಬಲಿ?: ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ಒಟ್ಟಾರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜಮೀನು ಮಾರಾಟ ಮಾಡಲ್ಲ ಅಂತ ಕುಟುಂಬವನ್ನು ಮುಗಿಸುವ ಸಂಚು ಮಾಡಿದ್ದವನು ಇದೀಗ ಆಸ್ವತ್ರೆ ಬೆಡ್ನಲ್ಲಿ ನರಳಾಡುತ್ತಿದ್ದಾನೆ. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿಗೆ ಈ ಸ್ಟೋರಿ ಸೂಕ್ತ ಉದಾಹರಣೆ ಅಂದರು ತಪ್ಪಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 pm, Thu, 8 January 26