ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಆಗಿದ್ದು 167 ಮನೆ, ಫ್ಲಾಟ್ಗಾಗಿ ಸಲ್ಲಿಕೆಯಾದ ಅರ್ಜಿ 250ಕ್ಕೂ ಹೆಚ್ಚು!
ಬೆಂಗಳೂರು ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್ ತೆರವು ಬಳಿಕ ನಿರಾಶ್ರಿತರಿಗೆ ಮನೆ ನೀಡುವ ಸರ್ಕಾರದ ನಿರ್ಧಾರ ವಿವಾದಕ್ಕೀಡಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸಿಎಂ ಸಿದ್ದರಾಮಯ್ಯ 167 ಫ್ಲಾಟ್‌ಗಳಿಗೆ ಸೂಚಿಸಿದ್ದು, 250ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಒಂದೇ ಮನೆ ವಿಳಾಸಕ್ಕೆ ಹಲವು ಅರ್ಜಿಗಳು, ನಿವಾಸಿಗಳಲ್ಲದವರೂ ಅರ್ಜಿ ಸಲ್ಲಿಸಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ.

ಬೆಂಗಳೂರು, ಜನವರಿ 1: ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್, ಮನೆಗಳ ತೆರವು ವಿಚಾರ ವಿವಾದಕ್ಕೀಡಾಗಿತ್ತು. ನಂತರ ನಿರಾಶ್ರಿತರಿಗೆ ಮನೆ ನೀಡುವುದಾಗಿ ಕರ್ನಾಟಕ (Karnataka) ಕಾಂಗ್ರೆಸ್ (Congress) ಸರ್ಕಾರ ಘೋಷಣೆ ಮಾಡಿದ್ದೂ ಸಹ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಡೆಗೆ ವ್ಯಾಪಕ ಆಕ್ಷೇಪವೂ ವ್ಯಕ್ತವಾಗಿದೆ. ಏತನ್ಮಧ್ಯೆ ಇದೀಗ ಹೊಸ ಸಮಸ್ಯೆ ಎದುರಾಗಿದೆ. ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಮಾಡಲಾದ ಮನೆಗಳ ಲೆಕ್ಕಾಚಾರದ ಆಧಾರದಲ್ಲಿ, ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 167 ಫ್ಲಾಟ್ಗಳನ್ನು ನೀಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಇದೀಗ ಮನೆಗಳಿಗಾಗಿ 25ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ಪ್ರಕ್ರಿಯೆ ಇದೀಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಡೆಮಾಲಿಷನ್ ಆಗಿರುವ ಒಂದೇ ಮನೆಯ ವಿಳಾಸದಿಂದ ಇಬ್ಬರು, ಮೂವರು ಮನೆಗಾಗಿ ಅರ್ಜಿ ಸಲ್ಲಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಕೋಗಿಲು ಲೇಔಟ್‌ನ ನಿವಾಸಿಗಳೇ ಅಲ್ಲದವರೂ ಮನೆಗಾಗಿ ಅರ್ಜಿ ಹಾಕಿರುವುದಾಗಿ ತಿಳಿದುಬಂದಿದೆ.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಸೂಚನೆಯಂತೆ, ಇಲಾಖಾ ಅಧಿಕಾರಿಗಳ ತಂಡ ಅಲ್ಲಿನ ನಿವಾಸಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ವಸತಿ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ.
ನಿರಾಶ್ರಿತರಿಂದ ಬಂದಿರುವ ಎಲ್ಲ ಅರ್ಜಿಗಳ ನೈಜತೆ ಪರಿಶೀಲನೆ ಕಾರ್ಯ ಇಂದು ಹಾಗೂ ನಾಳೆ ನಡೆಸಲಾಗುತ್ತಿದೆ. ಪರಿಶೀಲನೆ ಬಳಿಕ ಅಂತಿಮ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಕನ್ನಡಿಗರು, ಪರಭಾಷಿಕರು ಎಂದು ಪಟ್ಟಿ
ಮನೆ ಹಂಚಿಕೆ ಸಂಬಂಧವಾಗಿ ಅಧಿಕಾರಿಗಳು ಈಗಾಗಲೇ ಕನ್ನಡಿಗರು ಹಾಗೂ ಪರಭಾಷಿಕರು ಎಂಬ ಎರಡು ಪ್ರತ್ಯೇಕ ಪಟ್ಟಿಗಳನ್ನು ಸಿದ್ಧಪಡಿಸಿದ್ದಾರೆ. ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿದ ನಂತರ ವಸತಿ ಇಲಾಖೆ ಮನೆ ಹಂಚಿಕೆ ಕುರಿತ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ.
ಇದನ್ನೂ ಓದಿ: ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?
ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್, ಮನೆಗಳನ್ನು ನಿರ್ಮಿಸಿದ್ದವರಿಗೆ ವಸತಿ ಒದಗಿಸಿಕೊಡುವ ಸರ್ಕಾರದ ತೀರ್ಮಾನಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ ವಿವಿಧ ಕಾರಣಗಳಿಂದ ಸಂತ್ರಸ್ತರಾಗಿರುವ ಅರ್ಹ ಫಲಾನುಭವಿಗಳಿಗೇ ದಶಕಗಳಿಂದ ಪರಿಹಾರ ನೀಡಿಲ್ಲ. ಅಂಥದ್ದರಲ್ಲಿ ಇದೀಗ ಏಕಾಏಕಿ ಎಲ್ಲಿಂದಲೋ ಬಂದ ವಲಸಿಗರಿಗೆ, ಅದೂ ಸಹ ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ಪರಿಹಾರ ಏಕೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.



