
ಬೆಂಗಳೂರು, ಡಿಸೆಂಬರ್ 03: ಕಳೆದ ನವೆಂಬರ್ 18 ರಂದು ಕೊಲ್ಕತ್ತಾದ ಟಿಟಾಗರ್ನಿಂದ ಹೊರಟಿದ್ದ ಆರನೇ ಡ್ರೈವರ್ ಲೆಸ್ ಮೆಟ್ರೋ ರೈಲು ಸೆಟ್ ಇಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಈ ಹೊಸ ರೈಲು ಸೇರ್ಪಡೆಯಿಂದ ರೈಲುಗಳ ನಡುವಿನ ಓಡಾಟದ ಸಮಯ ಮತ್ತಷ್ಟು ಇಳಿಕೆಯಾಗಲಿದೆ. ಆ ಮೂಲಕ ಯೆಲ್ಲೋ ಮಾರ್ಗದ ಮೆಟ್ರೋ (Metro Yellow Line) ಪ್ರಯಾಣಿಕರಿಗೆ ಬಿಎಂಆರ್ಸಿಎಲ್ (BMRCL) ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡಿದೆ.
ಸದ್ಯ ಆರನೇ ಡ್ರೈವರ್ ಲೆಸ್ ಮೆಟ್ರೋ ರೈಲು ಸೆಟ್ ಬೆಂಗಳೂರು ತಲುಪಿದೆ. ಈ ಹೊಸ ರೈಲು ಡಿಸೆಂಬರ್ ಅಂತ್ಯಕ್ಕೆ ವಾಣಿಜ್ಯ ಸೇವೆ ಆರಂಭಿಸಲಿದೆ. ಸದ್ಯ ಯೆಲ್ಲೋ ಮಾರ್ಗದಲ್ಲಿ 15 ರಿಂದ 18 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿವೆ. ರೈಲುಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಯಾಣಿಕರು ಆಗಾಗ ಟೀಕಿಸುತ್ತಿದ್ದರು. ಹೊಸ ರೈಲು ಓಡಾಟ ಆರಂಭವಾದರೆ ರೈಲುಗಳ ನಡುವಿನ ಓಡಾಟದ ಸಮಯ 10 ರಿಂದ 12 ನಿಮಿಷಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಆ ಮೂಲಕ ಪ್ರಯಾಣ ಸುಗುಮವಾಗಲಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್ಗೆ ಬಿಡ್ ಕರೆದ ಬಿಎಂಆರ್ ಸಿಎಲ್
ಇನ್ನು ಡಿಸೆಂಬರ್ ಮತ್ತು ಜನವರಿ ಆರಂಭದಲ್ಲಿ ಇನ್ನೆರಡು ಹೊಸ ರೈಲುಗಳು ಟಿಟಾಗರ್ನಿಂದ ಬೆಂಗಳೂರಿಗೆ ಆಗಮಿಸಲಿದ್ದು, 2026ರ ಆರಂಭದಲ್ಲಿ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಂತೆ ಹಳದಿ ಮಾರ್ಗದಲ್ಲೂ ಪ್ರತಿ 5 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ.
ಆರ್.ವಿ ರೋಡ್ನಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಯೆಲ್ಲೋ ಲೈನ್ನಲ್ಲಿ ಸದ್ಯ ಐದು ಮೆಟ್ರೋ ರೈಲುಗಳು ಮಾತ್ರ ಸಂಚಾರ ಮಾಡುತ್ತಿವೆ. 19.15 ಕಿಮೀ ವಿಸ್ತೀರ್ಣವಿರುವ ಯೆಲ್ಲೋ ಲೈನ್ ಮೆಟ್ರೋ ಮಾರ್ಗಕ್ಕೆ ಆಗಸ್ಟ್ 10 ರಂದು ಚಾಲನೆ ನೀಡಲಾಯಿತು. ಆಗಸ್ಟ್ 11ರಿಂದಲೇ ವಾಣಿಜ್ಯ ಸಂಚಾರ ಆರಂಭಿಸಲಾಗಿತ್ತು.
ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BMRCL? ಅಧಿಕಾರಿಗಳಿಗೆ ಗಣಿತ ಪಾಠದ ಅವಶ್ಯಕತೆ ಇದೆ ಎಂದ ತೇಜಸ್ವಿ ಸೂರ್ಯ
ಒಟ್ಟಿನಲ್ಲಿ ಯೆಲ್ಲೋ ಲೈನ್ನಲ್ಲಿ ಸಂಚಾರ ಮಾಡಲು ಆರನೇ ರೈಲು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದೆ. ಇದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ದೊಡ್ಡಮಟ್ಟದಲ್ಲಿ ಸಹಾಯ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.