ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಬಿಎಂಆರ್‌ಸಿಎಲ್
ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. 6ನೇ ರೈಲು ಆಗಮಿಸುತ್ತಿದ್ದು, ಡಿಸೆಂಬರ್ ವೇಳೆಗೆ ಸೇವೆಯನ್ನು ಆರಂಭಿಸಲಿದೆ. ಇದರಿಂದ ಪ್ರಸ್ತುತ 15/19 ನಿಮಿಷಗಳಿದ್ದ ಮೆಟ್ರೋ ಸಂಚಾರ ಅವಧಿ 10/15 ನಿಮಿಷಗಳಿಗೆ ಇಳಿಯಲಿದೆ. ಆರ್‌ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಯಾಣಿಕರ ಕಾಯುವಿಕೆ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.

ಬೆಂಗಳೂರು, ನವೆಂಬರ್ 21: ಯೆಲ್ಲೋ ಲೈನ್ ಮೆಟ್ರೋ (Metro Yellow Line) ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಗಲಿದೆ. ಈ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬಿಎಂಆರ್ಸಿಎಲ್ಗೆ (bmrcl) ಆರನೇ ರೈಲು ಬರ್ತಿದ್ದು, ಇದರಿಂದ 10 ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡಲಿದೆ.
ಆರ್.ವಿ ರೋಡ್ ಬೊಮ್ಮಸಂದ್ರ ಯೆಲ್ಲೋ ಲೈನಲ್ಲಿ ಸಂಚಾರ ಮಾಡಲು ಆರನೇ ರೈಲು ಕಲ್ಕತ್ತಾದ ಟಿಟಾಘರ್‌ನಿಂದ ಹೊರಟ್ಟಿದ್ದು, ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಈ ರೈಲು ಬೆಂಗಳೂರಿಗೆ ಬರಲಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಸಹಾಯವಾಗಲಿದೆ.
ಇದನ್ನೂ ಓದಿ: Metro Yellow Line: ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ಸಂಚಾರ ವ್ಯತ್ಯಯ
ಸದ್ಯ ಯೆಲ್ಲೋ ಲೈನ್ನಲ್ಲಿ ಸಂಚಾರ ಮಾಡಲು ಐದು ರೈಲುಗಳು ಮಾತ್ರ ಇವೆ. ಪೀಕ್ ಅವರ್ನಲ್ಲಿ 15 ನಿಮಿಷಕ್ಕೊಂದರಂತೆ, ನಾನ್ ಪಿಕ್ ಅವರ್ನಲ್ಲಿ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡುತ್ತಿದ್ದು, 6ನೇ ರೈಲು ನಮ್ಮ ಮೆಟ್ರೋಗೆ ಬರ್ತಿದ್ದು, ಈ ಹಿನ್ನೆಲೆ ಪಿಕ್ ಅವರ್ನಲ್ಲಿ 15 ದಿಂದ 10 ನಿಮಿಷಕ್ಕೊಂದರಂತೆ ನಾನ್ ಪಿಕ್ ಅವರ್ನಲ್ಲಿ 19ರಿಂದ 15 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ.
ರಾತ್ರಿ ವೇಳೆ ಸಿಗ್ನಲಿಂಗ್, ಸುರಕ್ಷತೆ ಸೇರಿದಂತೆ ಇತರ ಪರೀಕ್ಷೆಗಳನ್ನು ಸಿಎಂಆರ್‌ಎಸ್ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ನಡೆಸಲಿದ್ದು, ಆ ಬಳಿಕ ರೈಲು ಸಂಚಾರ ಆರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ.
ಇನ್ನು ಹೊಸ ಮೆಟ್ರೋ ಬೋಗಿಗಳು ಒಂದು ವಾರದೊಳಗೆ ಅಥವಾ ಹತ್ತು ದಿನಗಳಲ್ಲಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ಸೇರಲಿದ್ದು, ಈ ರೈಲುಗಳು ಸೇವೆ ಆರಂಭಿಸಿದಲ್ಲಿ ಕಾಯುವಿಕೆ ಮತ್ತಷ್ಟು ಇಳಿಕೆಯಾಗುತ್ತದೆ. ಆರನೇ ರೈಲಿನ ಕಾರ್ಯಾಚರಣೆಯಿಂದ ರೈಲು ಸಂಚಾರ ಸಮಯ ಇಳಿಕೆ ಆಗಲಿದ್ದು, ಡಿಸೆಂಬರ್ ಮತ್ತು ಜನವರಿ ಆರಂಭದಲ್ಲಿ ಇನ್ನೆರಡು ಹೊಸ ರೈಲುಗಳು ಟಿಟಾಘರ್‌ನಿಂದ ಬೆಂಗಳೂರಿಗೆ ಬರಲಿದ್ದು, 2026ರ ಆರಂಭದಲ್ಲಿ ಗ್ರೀನ್, ಪರ್ಪಲ್ ಮೆಟ್ರೋ ಮಾರ್ಗಗಳಂತೆ ಹಳದಿ ಮಾರ್ಗದಲ್ಲೂ ಪ್ರತಿ 5 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ.
ಇದನ್ನೂ ಓದಿ: ಅಬ್ಬಾ! ನಮ್ಮ ಮೆಟ್ರೋ ರೈಲನ್ನೇ ತಡೆದು ನಿಲ್ಲಿಸಿದ ಪ್ರಯಾಣಿಕರು: ಕೇಸ್ ಬುಕ್
ಈ ಕುರಿತಾಗಿ ಮೆಟ್ರೋ ಪ್ರಯಾಣಿಕರಾದ ಮಂಜುನಾಥ್ ಎಂಬುವವರು ಮಾತನಾಡಿದ್ದು, ಆರನೇ ರೈಲು ಬರುವುದರಿಂದ ನಮಗೆ ತುಂಬಾ ಸಹಾಯ ಆಗುತ್ತದೆ. ವಾಹನದಲ್ಲಿ ಆರ್.ವಿ ರೋಡ್ ಟು ಬೊಮ್ಮಸಂದ್ರ ಹೋಗಬೇಕು ಅಂದರೆ ಸುಮಾರು ಎರಡೂವರೆ ಗಂಟೆ ಬೇಕಾಗುತ್ತದೆ. ಮೆಟ್ರೋದಲ್ಲಿ ಕೇವಲ ಅರ್ಧಗಂಟೆ ಸಾಕು. ಇದರಿಂದ ನಮಗೆ ತುಂಬಾ ಸಂತೋಷ ಆಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ ಯೆಲ್ಲೋ ಲೈನ್ನಲ್ಲಿ ಸಂಚಾರ ಮಾಡಲು ಆರನೇ ರೈಲು ಆಗಮಿಸುವುದರಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದೊಡ್ಡಮಟ್ಟದಲ್ಲಿ ಸಹಾಯ ಆಗುವುದರಲ್ಲಿ ನೋ ಡೌಟ್.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



