ಕೆಂಪುಕೋಟೆ, ಇಂಡಿಯಾ ಗೇಟ್, ಸಂಸತ್ ಭವನ ಸೇರಿದಂತೆ ದೇಶದೆಲ್ಲೆಡೆ ರಾರಾಜಿಸುವ ತ್ರಿವರ್ಣ ಧ್ವಜ ತಯಾರಾಗುವುದೇ ಕರ್ನಾಟಕದಲ್ಲಿ

ದೇಶದ ದಿಗ್ವಿಜಯದ ಸಂಕೇತ.. ಆತ್ಮಗೌರವದ ಪ್ರತೀಕ ಭಾರತೀಯರ ಪಾಲಿನ ಹೆಮ್ಮೆಯ ತ್ರಿವರ್ಣಧ್ವಜ. ಇಂತಹ ಪೀತಾಂಬರ ರಾಷ್ಟ್ರಧ್ವಜವನ್ನು ಇಡೀ ದೇಶಕ್ಕೆ ಪೂರೈಸುವ ಪುಣ್ಯಸ್ಥಳ ಇರೋದು ನಮ್ಮ ಕರುನಾಡ ಮಣ್ಣಿನಲ್ಲಿ ಅನ್ನೋದೇ ನಮ್ಮೆಲ್ಲರಿಗೂ ಹೆಮ್ಮೆ. ಹಾಗಾದ್ರೆ, ಭಾರತಾಂಬೆಯ ಧ್ವಜಾಲಯ ಇರುವುದೆಲ್ಲಿ ಎಂದು ತಿಳಿದುಕೊಳ್ಳಿ.

ಕೆಂಪುಕೋಟೆ, ಇಂಡಿಯಾ ಗೇಟ್, ಸಂಸತ್ ಭವನ ಸೇರಿದಂತೆ ದೇಶದೆಲ್ಲೆಡೆ ರಾರಾಜಿಸುವ ತ್ರಿವರ್ಣ ಧ್ವಜ ತಯಾರಾಗುವುದೇ ಕರ್ನಾಟಕದಲ್ಲಿ
ತ್ರಿವರ್ಣ ಧ್ವಜ
Edited By:

Updated on: Aug 15, 2023 | 8:21 AM

ಧಾರವಾಡ, (ಆಗಸ್ಟ್ 15): ಜನ್ಮದಿನ.. ಭಾರತಾಂಬೆಯ 77ನೇ ಜನ್ಮದಿನ.. ಜಾತಿ, ಮತ, ಪಂಗಡ, ಸಂಸ್ಕೃತಿಯ ಜನರನ್ನು ಒಂದೆಡೆ ಸೇರಿಸಿ ಇಡೀ ರಾಷ್ಟ್ರದ ಏಕತೆಯನ್ನು ಸಾರಿದ ದಿವ್ಯ ಸಂಕೇತವೇ ನಮ್ಮ ಭಾರತದ ರಾಷ್ಟ್ರ ಧ್ವಜ (Indian national flag). ಕೇಸರಿ, ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜಗಳನ್ನು(flag) ಇಡೀ ದೇಶಕ್ಕೆ ರಾಷ್ಟ್ರಧ್ವಜವನ್ನು ಪೂರೈಸುವ ಪುಣ್ಯನೆಲ ಇದು. ಈ ಪುಣ್ಯಸ್ಥಳ ಇರುವುದು ನಮ್ಮ ಕರುನಾಡಿನಲ್ಲೇ ಎನ್ನುವುದೇ ನಮ್ಮೆಲ್ಲರ ಹೆಮ್ಮೆ. ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯ(Hubballi) ಬೆಂಗೇರಿ ಖಾದಿ ಗ್ರಾಮೋದ್ಯೋಗದಲ್ಲಿ ರಾಷ್ಟ್ರಧ್ವಜವನ್ನು 1957ರಿಂದ ತಯಾರಿಸಲಾಗುತ್ತೆ. ಇಡೀ ದೇಶಕ್ಕೆ ತ್ರಿವರ್ಣ ಧ್ವಜವನ್ನು ಪೂರೈಸುವ ಪುಣ್ಯಭೂಮಿ ಇದು.

1957 ನ.1ಕ್ಕೆ ಗಂಡುಮೆಟ್ಟಿದ ನೆಲದಲ್ಲಿ ತ್ರಿವರ್ಣಧ್ವಜ ಚರಿತ್ರೆ

ಭಾರತ ಸರ್ಕಾರ ಬಾವುಟವನ್ನು ತಯಾರಿಸುವ ಈ ಕಾರ್ಯವನ್ನು ಪ್ರಪ್ರಥಮ ಬಾರಿಗೆ ಬೆಂಗೇರಿಯ ಖಾದಿ ಗ್ರಾಮಕ್ಕೆ ಮಾತ್ರ ನೀಡಿತ್ತು. ನೂಲುವುದು, ನೇಯುವುದು, ಸುಂದರ ಬಾವುಟಗಳಿಗೆ ಬಣ್ಣ ಕೊಡುವುದು ಇಲ್ಲಿನ ಜನರ ಕಾಯಕ. ಇಲ್ಲಿ ತಯಾರಾದ ಬಾವುಟಗಳು ವಿಶ್ವದ ಎಲ್ಲಾ ಕಡೆ ರಾರಾಜಿಸುತ್ತವೆ. 1957ರ ನವೆಂಬರ್ 1ರಂದು ಗಂಡುಮೆಟ್ಟಿದ ನೆಲದಲ್ಲಿ ದಿವಂಗತ ವೆಂಕಟೇಶ್ ಮಾಗಡಿ ಜೀ ಅವರು ಈ ಖಾದಿ ಗ್ರಾಮವನ್ನು ಸ್ಥಾಪನೆ ಮಾಡಿದ್ರು. ರಾಷ್ಟ್ರಧ್ವಜ ನಿರ್ಮಾಣಕ್ಕೆ ಭಾರತೀಯ ಮಾನಕ ಸಂಸ್ಥೆಯಿಂದ ಮಾನ್ಯತೆ ಪಡೆದ ದೇಶದ ಮೊದಲ ಏಕೈಕ ಸಂಸ್ಥೆ ಇದಾಗಿದೆ. ಒಂದು ದಿನಕ್ಕೆ ಒಬ್ಬರು ಸರಿಸುಮಾರು 15ರಿಂದ 20 ಧ್ವಜಗಳನ್ನು ತಯಾರಿಸುತ್ತಾರೆ.

ಇದನ್ನೂ ಓದಿ: ಬ್ರಿಟಿಷರ ಬಳುವಳಿ; ಇವತ್ತಿನ ಕರ್ನಾಟಕ ಬಜೆಟ್ ಗಾತ್ರಕ್ಕಿಂತಲೂ ಕಡಿಮೆ ಇತ್ತು 1947ರಲ್ಲಿ ಭಾರತದ ಜಿಡಿಪಿ

ರಾಷ್ಟ್ರಧ್ವಜದ ತಯಾರಿ ಅಂದ್ರೆ ಅದು ಅಷ್ಟು ಸುಲಭವಲ್ಲ ಧ್ವಜ ತಯಾರಿಕೆಗೆ ಹಲವು ನಿಯಮಗಳಿವೆ. ಧ್ವಜದ ಬಟ್ಟೆ, ಗಾತ್ರ, ಬಣ್ಣ, ಅಶೋಕ ಚಕ್ರ, ಹೊಲಿಗೆ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತೆ. ಒಟ್ಟು 9 ಸೈಜ್ ಧ್ವಜಕ್ಕೆ ಬಿಐಎಸ್​ನಿಂದ ಅನುಮತಿ ಪಡೆದ ಏಕೈಕ ಸಂಸ್ಥೆ ಬೆಂಗೇರಿ ಮಾತ್ರ..

ಧಾರವಾಡದ ಗರಗ ತಿರಂಗಾ.. ಜೂನ್ 3ಕ್ಕೆ ಒಲಿಯಿತು ಕಿರೀಟ

ಧಾರವಾಡ ತಾಲೂಕಿನ ಗರಗ ಗ್ರಾಮಲ್ಲಿರುವ ಗರಗ ಕ್ಷೇತ್ರಿಯ ಸೇವಾ ಸಂಘ ಇದು. ರಾಷ್ಟ್ರಧ್ವಜಕ್ಕೆ ಬೇಕಾಗಿರೋ ಬಟ್ಟೆಯನ್ನು ತಯಾರಿಸುವುದು ಇದೇ ಸಂಘದಲ್ಲಿ. ಗರಗ ಗ್ರಾಮದ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.. ಹೀಗಾಗಿ ಗರಗ ಗ್ರಾಮವನ್ನೂ ಜಿಲ್ಲೆಯ ಗಂಡು ಮೆಟ್ಟಿನ ನಾಡು ಅಂತಲೂ ಕರೆಯುತ್ತಾರೆ. 1956ರ ರಲ್ಲಿ ಗ್ರಾಮದ ಶಂಕರರಾವ್ ಕುರ್ತಕೋಟಿ ಹಾಗೂ ಶಂಕರ ಕರಡಿಗುಡ್ಡ ಎನ್ನುವ ಹೋರಾಟಗಾರರು ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಈ ಖಾದಿ ಸಂಘವನ್ನು ಆರಂಭಿಸಿದ್ದರು.

5 ಚರಕದಿಂದ ಶುರುವಾದ ಸಂಘ.. ನಂತರ ಆಗಿದ್ದು ಕ್ರಾಂತಿ

ಕೇವಲ 5 ಚರಕಗಳನ್ನಿಟ್ಟುಕೊಂಡು ಈ ಸಂಘ ಆರಂಭಿಸಲಾಯಿತು. ಬಳಿಕ ನಿಧಾನವಾಗಿ ಇಲ್ಲಿ ಕ್ರಾಂತಿಯೇ ಶುರುವಾಯ್ತು. ನಂತರ 1974 ರಲ್ಲಿ ಖಾದಿ ಮತ್ತು ಗ್ರಾಮೀಣ ಕೈಗಾರಿಕೋದ್ಯಮ ಆಯೋಗ ಈ ಇಲ್ಲಿ ತಯಾರಾಗುತ್ತಿದ್ದ ಖಾದಿ ಬಟ್ಟೆಯ ಗುಣಮಟ್ಟವನ್ನು ಗಮನಿಸಿತು. ನಂತರ ಆಯೋಗದ ಸಲಹೆ ಮೇರೆಗೆ ರಾಷ್ಟ್ರಧ್ವಜ ಬಟ್ಟೆ ತಯಾರಿಕೆಗೆ ಇಳಿದ ಸಂಘಕ್ಕೆ ಭಾರತೀಯ ಮಾನಕ ಸಂಸ್ಥೆಯಿಂದಲೂ ಮಾನ್ಯತೆ ಸಿಕ್ಕಿತ್ತು.

ಕರುನಾಡಲ್ಲೇ ಇರುವ ಬೆಂಗೇರಿ ಮತ್ತು ಗರಗ ಖಾದಿ ಗ್ರಾಮ ಇಡೀ ದೇಶಕ್ಕೆ ರಾಷ್ಟ್ರಧ್ವಜವನ್ನು ಪೂರೈಸುತ್ತಿದೆ. ಈ ಪುಣ್ಯಭೂಮಿ, ಭಾರತಾಂಬೆಯ ಧ್ವಜಾಲಯ ನಮ್ಮ ಕರುನಾಡಿನಲ್ಲೇ ಇರುವುದು ಕನ್ನಡಿಗರ ಹೆಮ್ಮೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:20 am, Tue, 15 August 23

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us