ಭಕ್ತರ ಅಭಿಲಾಷೆ: ಅಜ್ಜಂಪುರ ಶಿವಾನಂದ ಆಶ್ರಮದಲ್ಲಿ ಗೀತಾನಾದ ಮೊಳಗಲಿ, ಭಗವದ್ಗೀತೆ ಮುದ್ರಣವಾಗಲಿ

| Updated By: ಪೃಥ್ವಿಶಂಕರ

Updated on: Apr 01, 2021 | 7:53 AM

ಈ ಹಿಂದೆ ಸ್ವಾಮೀಜಿಯವರಿಂದ ಔಷಧಿ ಪಡೆಯುವುದಕ್ಕೆ ರಾಜ್ಯ-ಹೊರ ರಾಜ್ಯದಿಂದಲೂ ಜನ ಬರುತ್ತಿದ್ದರು. ಔಷಧಿ ಪಡೆಯುವುದರ ಜೊತೆಗೆ ಇದೇ ಸ್ಥಳದಲ್ಲಿ ಭಗವದ್ಗೀತೆಯನ್ನು ಪಠಿಸುತ್ತಿದ್ದರು. ಭಕ್ತರು ಬಂದಾಗ ಸ್ವಾಮೀಜಿ ಪ್ರವಚನಗಳೂ ಜನಪ್ರಿಯವಾಗಿದ್ದವು.

ಭಕ್ತರ ಅಭಿಲಾಷೆ: ಅಜ್ಜಂಪುರ ಶಿವಾನಂದ ಆಶ್ರಮದಲ್ಲಿ ಗೀತಾನಾದ ಮೊಳಗಲಿ, ಭಗವದ್ಗೀತೆ ಮುದ್ರಣವಾಗಲಿ
ಭಗವದ್ಗೀತೆ ಮುದ್ರಣಾಲಯದ ಚಿತ್ರಣ
Follow us on

ಚಿಕ್ಕಮಗಳೂರು: ದಕ್ಷಿಣ ಭಾರತದಲ್ಲಿ ಭಗವದ್ಗೀತೆ ಮುದ್ರಣವಾಗುವ ಪ್ರಮುಖ ಸ್ಥಳವೆಂದರೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿರುವ ಶಿವಾನಂದ ಆಶ್ರಮ. ಲಕ್ಷಾಂತರ ಪುಸ್ತಕಗಳನ್ನ ಪ್ರಿಂಟ್ ಮಾಡಿ ದೇಶದ ಉದ್ದಗಲಕ್ಕೂ ಹಂಚಿದ್ದ ಹೆಗ್ಗಳಿಕೆಗೆ ಈ ಸಂಸ್ಥೆ ಪಾತ್ರವಾಗಿದೆ. ಈ ಆಶ್ರಮಕ್ಕೆ ಇಂದಿಗೂ ಭಗವದ್ಗೀತೆ ಪಠಿಸುವುದಕ್ಕೆಂದೇ ಜನರು ಬರುತ್ತಾರೆ. ಶ್ರೀಕೃಷ್ಣ, ಶಿವನಿರುವ ಪುಣ್ಯಕ್ಷೇತ್ರ ಎನ್ನುವ ನಂಬಿಕೆ ಜನರಲ್ಲಿ ಈಗಲೂ ಇದೆ. ಆದರೆ ಈ ಆಶ್ರಮ ಇಂದು ಲೂಟಿ ಹೊಡೆದ ಕೋಟೆಯಂತಾಗಿ ಬಿಕೋ ಎನ್ನುತ್ತಿದೆ ಎನ್ನುವುದು ಬೇಸರದ ಸಂಗತಿ.

60 ವರ್ಷಗಳ ಹಿಂದೆ ಇಲ್ಲಿ ಪ್ರತಿದಿನ ಜನಜಾತ್ರೆಯೇ ಇರುತ್ತಿತ್ತು. ಈ ಆಶ್ರಮ ಆರಂಭವಾಗಿದ್ದು 1930ರಲ್ಲಿ. ಆಶ್ರಮದಲ್ಲಿದ್ದ ಶಂಕರಾನಂದ ಸ್ವಾಮೀಜಿ ಅವರನ್ನ ನೋಡುವುದಕ್ಕೆ ದಕ್ಷಿಣ ಭಾರತದ ಮೂಲೆ-ಮೂಲೆಗಳಿಂದಲೂ ಭಕ್ತರು ಬರುತ್ತಿದ್ದರು. ಉತ್ತರ ಹಾಗೂ ದಕ್ಷಿಣ ಭಾರತದ ಜನ ಇಂದಿಗೂ ಶಿವಾನಂದ ಆಶ್ರಮವನ್ನ ನೆನಪಿಸಿಕೊಳ್ಳೋದೇ ಇಲ್ಲಿನ ಭಗವದ್ಗೀತೆ ಮುದ್ರಣಾಲಯದಿಂದ. ಇನ್ನು ಇಲ್ಲಿ ತಯಾರಾಗುವ ಭಗವದ್ಗೀತೆ ಪುಸ್ತಕಗಳು ಬೆಂಕಿ ಪಟ್ಟಣದ ಆಕಾರದಿಂದ ದೊಡ್ಡ ಗಾತ್ರದ ಪುಕ್ತಕಗಳ ರೂಪದಲ್ಲೂ ಸಿಗುತ್ತಿದ್ದವು.

ಭಗವದ್ಗೀತೆ ಮುದ್ರಣದೊಂದಿಗೆ ಇಲ್ಲಿ ಭಗವದ್ಗೀತೆ ಪಠಿಸುವುದು ಹೇಗೆಂದು ಕಲಿಸಲಾಗುತ್ತಿತ್ತು. ಅದೇ ರೀತಿ ಸ್ವಾಮಿ ಶಂಕರಾನಂದರ ಪ್ರವಚನ ಕೇಳಲು ಭಕ್ತ ಸಾಗರವೇ ಹರಿದು ಬರುತ್ತಿತ್ತು. ಈ ಆಶ್ರದಮದಲ್ಲಿದ್ದ ಶಂಕರಾನಂದ ಸ್ವಾಮೀಜಿಯವರ ದೇಹತ್ಯಾಗದ ಬಳಿಕ ಅಜ್ಜಂಪುರದ ಶಿವಾನಂದ ಆಶ್ರಮದಲ್ಲಿದ್ದ ಮುದ್ರಣಾಲಯವೂ ನಿಂತು ಹೋಗಿದೆ ಎಂದು ಸ್ಥಳೀಯರಾದ ಶಿವಮೂರ್ತಿ ಹೇಳಿದ್ದಾರೆ.

ಭಗವದ್ಗೀತೆ ಪುಸ್ತಕಗಳು

ಸ್ವಾಮೀಜಿಯವರಿಂದ ಔಷಧಿ ಪಡೆಯುವುದಕ್ಕೆ ರಾಜ್ಯ-ಹೊರ ರಾಜ್ಯದಿಂದಲೂ ಜನ ಬರುತ್ತಿದ್ದರು. ಹೀಗೆ ಬಂದವರು ಸ್ವಾಮಿಜಿ ಆಶೀರ್ವಾದ ಪಡೆದು, ಔಷಧಿ ಪಡೆಯುವುದರ ಜೊತೆಗೆ ಇದೇ ಸ್ಥಳದಲ್ಲಿ ಭಗವದ್ಗೀತೆಯನ್ನು ಪಠಿಸುತ್ತಿದ್ದರು. ಭಕ್ತರು ಬಂದಾಗ ಸ್ವಾಮೀಜಿಯವರಿಂದಲೂ ಪ್ರವಚನ ನಡೆಯುತ್ತಿತ್ತು. ಆದರೆ ಈಗ ಇಲ್ಲಿಗೆ ಜನ ಬರುವುದು ತೀರಾ ವಿರಳ.

ಮುದ್ರಣಾಲಯವೂ ಸ್ಥಗಿತಗೊಂಡಿದೆ. ಹೀಗಾಗಿ ಸರ್ಕಾರ ದಕ್ಷಿಣ ಭಾರತದಲ್ಲಿಯೇ ಭಗವದ್ಗೀತೆ ಮುದ್ರಣವಾಗುತ್ತಿದ್ದ ಪ್ರಮುಖ ಸ್ಥಳವಾಗಿದ್ದ ಶಿವಾನಂದ ಆಶ್ರಮವನ್ನ ಪ್ರವಾಸೋದ್ಯಮ ಸ್ಥಳವನ್ನಾಗಿಸುವ ಜೊತೆಯಲ್ಲಿ ಮುದ್ರಣಾಲಯವನ್ನು ಮತ್ತೆ ಆರಂಭಿಸಬೇಕು ಎಂದು ಸ್ಥಳೀಯರಾದ ಅನುಸೂಯ ವಿನಂತಿಸುತ್ತಾರೆ.

ಶಂಕರಾನಂದ ಸ್ವಾಮೀಜಿ

ದಶಕಗಳ ಹಿಂದೆಯೇ 7 ಲಕ್ಷ ಭಗವದ್ಗೀತೆ ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ಹಂಚಿದ್ದರು ಅಜ್ಜಂಪುರದ ಶಂಕರಾನಂದ ಶ್ರೀಗಳು. ಚಿಕ್ಕ ಆಕಾರದ ಭಗವದ್ಗೀತೆಯಿಂದ ಹಿಡಿದು ಹಲವು ಆಕಾರ, ಗಾತ್ರದ ಭಗವದ್ಗೀತೆ ಪುಸ್ತಕಗಳು ಸಿದ್ಧವಾಗುತ್ತಿದ್ದ ಅಜ್ಜಂಪುರದ ಈ ಸ್ಥಳದಲ್ಲೀಗ ಮುದ್ರಣ ಕಾರ್ಯ ಸ್ಥಗಿತಗೊಂಡಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ. ಭಾರತೀಯರ ಪಾಲಿಗೆ ಇದೊಂದು ಅಪರೂಪದ ಸ್ಥಳ. ಸರ್ಕಾರ ಕೂಡಲೇ ಇದನ್ನು ಅಭಿವೃದ್ದಿಪಡಿಸಿ ಮತ್ತೆ ಇಲ್ಲಿ ಭಗವದ್ಗೀತೆ ಮುದ್ರಿಸಿ ಮತ್ತೆ ಮನೆ-ಮನೆಗೆ ಗೀತೆ ಹಂಚುವ ಕಾಲ ಬರಲಿ ಎಂಬುದು ಸ್ಥಳೀಯರ ಆಶಯ.

ಇದನ್ನೂ ಓದಿ: ರವಿಶಂಕರ ಆಶ್ರಮ ಕೊವಿಡ್​ ಸೆಂಟರ್ ಸಿಬ್ಬಂದಿ, ಸೋಂಕಿತರಿಂದ ಪ್ರತಿಭಟನೆ: ಕಾರಣವೇನು?

ಇದನ್ನೂ ಓದಿ: New Book; ಶೆಲ್ಫಿಗೇರುವ ಮುನ್ನ : ಎಷ್ಟೇ ನಷ್ಟ ಬಂದರೂ ಭರಿಸೋಣ ಯಾರೇ ವಿರೋಧಿಸಿದರೂ ಸರಿ ಪ್ರಜಾಧನ ಪೋಲಾಗಬಾರದು