ಬಿಡದಿ ಟೌನ್​ಶಿಪ್​ ಯೋಜನೆ ವಿವಾದ: ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದ ಪ್ರಹ್ಲಾದ್​​ ಜೋಶಿ

ಬಿಡದಿ ಟೌನ್​ಶಿಪ್ ಯೋಜನೆಗಾಗಿ ಭೂಸ್ವಾಧೀನ ವಿರೋಧಿಸಿ ರೈತ ಮಹಿಳೆಯರು ನಡೆಸಿದ ಪ್ರತಿಭಟನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಆರ್. ಅಶೋಕ್ ಬೆಂಬಲ ಸೂಚಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಮುನ್ನುಗ್ಗುತ್ತಿರುವುದು ದುರಾಡಳಿತದ ಪರಮಾವಧಿ. ರೈತರ ಒಪ್ಪಿಗೆಯಿಲ್ಲದೆ ಅವರ ಜೀವನಾಧಾರವಾಗಿರುವ ಭೂಮಿಯನ್ನೇ ಕಿತ್ತುಕೊಂಡು ಮಾಡುವ ಟೌನ್‌ಶಿಪ್ ಅಭಿವೃದ್ಧಿ ಯಾರ ಉದ್ಧಾರಕ್ಕಾಗಿ? ಎಂದು ಬಿಜೆಪಿಗರು ಪ್ರಶ್ನಿಸಿದ್ದಾರೆ.

ಬಿಡದಿ ಟೌನ್​ಶಿಪ್​ ಯೋಜನೆ ವಿವಾದ: ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದ ಪ್ರಹ್ಲಾದ್​​ ಜೋಶಿ
ಪ್ರಹ್ಲಾದ್​​ ಜೋಶಿ
Image Credit source: PTI and Tv9 Kannada

Updated on: Jul 13, 2026 | 10:31 PM

ಬೆಂಗಳೂರು, ಜುಲೈ 13: ಟೌನ್​ಶಿಪ್​ ಯೋಜನೆ ಸಂಬಂಧ ಬಿಡದಿಗೆ ಸರ್ವೆಗೆಂದು ಹೋಗಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಏಟು ನೀಡಿರುವ ಸಂಬಂಧ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇದು ಭೂಮಿತಾಯಿ ಉಳಿಸಿಕೊಳ್ಳಲು ಅನ್ನದಾತರ ಒಡಲ ಆಕ್ರೋಶವಾಗಿದ್ದು, ಬಿಡದಿ ರೈತರ ಹೋರಾಟ ಕೇವಲ ಒಂದು ಸಾಮಾನ್ಯ ಪ್ರತಿಭಟನೆಯಲ್ಲ. ಟೌನ್‌ಶಿಪ್ ನೆಪದಲ್ಲಿ ಜಮೀನು ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಅತಿರೇಕದ್ದು ಎಂದವರು ಕಿಡಿ ಕಾರಿದ್ದಾರೆ.

‘ಸರ್ಕಾರದ ಧೋರಣೆ ಖಂಡನೀಯ’

ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಮುನ್ನುಗ್ಗುತ್ತಿರುವುದು ದುರಾಡಳಿತದ ಪರಮಾವಧಿ. ರೈತರ ಒಪ್ಪಿಗೆಯಿಲ್ಲದೆ ಅವರ ಜೀವನಾಧಾರವಾಗಿರುವ ಭೂಮಿಯನ್ನೇ ಕಿತ್ತುಕೊಂಡು ಮಾಡುವ ಟೌನ್‌ಶಿಪ್ ಅಭಿವೃದ್ಧಿ ಯಾರ ಉದ್ಧಾರಕ್ಕಾಗಿ? ರೈತರನ್ನು ಹೆದರಿಸಿ, ಬೆದರಿಸಿ ಜಮೀನು ವಶಪಡಿಸಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಪೊಲೀಸ್ ಬಲ ಬಳಸಿ ಜಮೀನು ಕಿತ್ತುಕೊಳ್ಳಬಹುದು ಎಂದುಕೊಂಡಿದ್ದರೆ ಅದು ಭ್ರಮೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಇನ್ನಾದರೂ ಕಣ್ತೆರೆದುಕೊಳ್ಳಬೇಕಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಭುಗಿಲೆದ್ದ ಟೌನ್​​ಶಿಪ್ ಕಿಚ್ಚು; ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ

ಎಕ್ಸ್​​​ ಪೋಸ್ಟ್​​ ಮೂಲಕ ಅಶೋಕ್​​ ಕಿಡಿ

ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಆರ್​.ಅಶೋಕ್ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಸಕರ್ಕರದ ಧೋರಣೆ ಖಂಡಿಸಿರುವ ಅವರು, ರೈತರ ಧ್ವನಿಯನ್ನು ಆಲಿಸುವ ಬದಲು ಪೊಲೀಸರ ಬಲಪ್ರಯೋಗ ಮತ್ತು ಅಧಿಕಾರಿಗಳ ದಬ್ಬಾಳಿಕೆಯ ಮೂಲಕ ಜೆಎಂಸಿ ಸರ್ವೆ ನಡೆಸಲು ಸರ್ಕಾರ ಮುಂದಾಗಿರೋದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು. ಅಭಿವೃದ್ಧಿ ಎಂದರೆ ರೈತರ ಬದುಕನ್ನು ಬಲಿ ಕೊಡುವುದಲ್ಲ. ಯಾವುದೇ ಯೋಜನೆಯೂ ರೈತರ ವಿಶ್ವಾಸ, ಒಪ್ಪಿಗೆ ಮತ್ತು ನ್ಯಾಯಯುತ ಪರಿಹಾರದ ಆಧಾರದ ಮೇಲೆಯೇ ಜಾರಿಯಾಗಬೇಕು. ರೈತರ ಹಕ್ಕುಗಳನ್ನು ಕಡೆಗಣಿಸುವ ಏಕಪಕ್ಷೀಯ ಧೋರಣೆ ಕೈಬಿಡಬೇಕು. ರಾಜ್ಯ ಸರ್ಕಾರ ಕೂಡಲೇ ರೈತರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ, ಟೌನ್‌ಶಿಪ್ ಯೋಜನೆ ಕುರಿತು ರೈತರೊಂದಿಗೆ ಮುಕ್ತ ಸಂವಾದ ನಡೆಸಬೇಕು. ಅನ್ನದಾತರ ಹಕ್ಕು ಮತ್ತು ಬದುಕಿನ ರಕ್ಷಣೆಗೆ ನಾವು ರೈತರೊಂದಿಗೆ ನಿಲ್ಲುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:27 pm, Mon, 13 July 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us