
ಬೀದರ್, ಜುಲೈ 19: ಕಳೆದ ಕೆಲ ತಿಂಗಳಿಂದ ಕರ್ನಾಟಕದ (Karnataka) ಹಲವೆಡೆ ಕಿಡಿಗೇಡಿಗಳಿಂದ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ಗಳು (Bomb threat) ಬಂದಿವೆ. ನಿನ್ನೆ (ಶುಕ್ರವಾರ)ದಂದು ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ಇದೀಗ ಅದರ ಬೆನ್ನಲ್ಲೇ ನಗರದ ಗುರುದ್ವಾರ ಅಮೃತ ಕುಂಡ ಯಾತ್ರಿಕ ನಿವಾಸದಲ್ಲಿ ಸ್ಫೋಟ ಆಗುತ್ತೆಂದು ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ವಕೀಲ ಅಲೀಂ ಅಲ್ ಬುಕಾರಿ ಎಂಬ ವ್ಯಕ್ತಿಯಿಂದ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಮೇಲ್ ಬಂದಿರುವ ಕುರಿತು ಪೊಲೀಸ್ ಇಲಾಖೆಗೆ ಗುರುದ್ವಾರ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಬೆಂಗಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಮಕ್ಕಳನ್ನ ಹೊರ ಕಳುಹಿಸಿ ತಪಾಸಣೆ
ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ಗುರುದ್ವಾರದಲ್ಲಿ ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಸೇರಿ 30ಕ್ಕೂ ಹೆಚ್ಚು ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕಾಡ್ ಸೇರಿ ವಿಶೇಷ ತಂಡದಿಂದ ಪರಿಶೀಲನೆ ಮಾಡಲಾಗಿದ್ದು, ಯಾವುದೇ ರೀತಿ ಸ್ಫೋಟಕ ಪದಾರ್ಥಗಳು ಪತ್ತೆಯಾಗಿಲ್ಲ.
ತಮಿಳುನಾಡಿನ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್ ಕೃತಿಗಾ ಉದಯನಿಧಿ ಹೆಸರನ್ನು ಬಾಂಬ್ ಬೆದರಿಕೆ ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ. ನಿವೇತಾ ಪೇತುರಾಜ್- ಉದಯನಿಧಿ ಪ್ರಕರಣಗಳು ಬೇರೇಡೆ ಸೆಳೆಯಲು ಸ್ಫೋಟಿಸಲಾಗುತ್ತಿದೆ. ಪಾಕ್ನ ಐಎಸ್ಐ ಸೆಲ್ಸ್ಗಳು ಬಾಂಬ್ ಸ್ಫೋಟದ ಸಂಚು ರೂಪಿಸಿವೆ. ಭಕ್ತರ ಮೈಕ್ರೋ ಮೊಬೈಲ್ ಫೋನ್ ಸಿಗ್ನಲ್ ಬಳಸಿ ಸ್ಫೋಟಗೊಳಿಸಲಿದ್ದಾರೆಂದು ಉಲ್ಲೇಖಿಸಲಾಗಿದೆ.
ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. roadkill333@atomicmail.io ಐಡಿಯಿಂದ ಬಂದಿದ್ದ ಇಮೇಲ್ನಲ್ಲಿ, ಸ್ಫೋಟಕಗಳನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಿದ್ದೇನೆ. ಪೋಷಕರ ಗೋಳಾಟ, ಮಕ್ಕಳ ನರಳಾಟ ನೋಡ್ಬೇಕು. ಸ್ಫೋಟದ ಸಾವಿನ ದೃಶ್ಯ ನೋಡಿದ ಬಳಿಕ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಸಂದೇಶ ಬಂದಿತ್ತು.
ಇದನ್ನೂ ಓದಿ: ಬೆಂಗಳೂರು: ಕಾಲೇಜಿಗೆ ಬಾಂಬ್ ಬೆದರಿಕೆ, ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುತ್ತೇವೆ ಎಂದ ದುಷ್ಕರ್ಮಿಗಳು
ಇದನ್ನ ಓದಿ ಆತಂಕಕ್ಕೆ ಒಳಗಾಗಿದ್ದ ಶಾಲಾ ಸಿಬ್ಬಂದಿ ಪೊಲೀಸರಿಗೆ ಕರೆಮಾಡಿದ್ದರು. ಕೆಲ ನಿಮಿಷಗಳಲ್ಲೇ ಪೊಲೀಸರು, ಬಾಂಬ್ ಸ್ಕ್ವಾಡ್ ಶಾಲೆಗಳಿಗೆ ಬಂದಿತ್ತು. ಶಾಲೆಗಳ ಮೂಲೆ ಮೂಲೆಗಳನ್ನ ಜಾಲಾಡಿದರೂ ಎಲ್ಲಿಯೂ ಬಾಂಬ್ ಪತ್ತೆಯಾಗಿಲ್ಲ. ಕೊನೆಗೆ ಇದೊಂದು ಸುಳ್ಳು ಸಂದೇಶ ಅಂತ ನಿಟ್ಟುಸಿರು ಬಿಟ್ಟಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಹುಸಿಬಾಂಬ್ ಕರೆ ತಡೆಗಟ್ಟಲು ನೂತನ ಕಾನೂನು ಜಾರಿ ಮಾಡುತ್ತೇವೆ ಎಂದಿದ್ದರು. ಜೊತೆಗೆ ಸುಳ್ಳು ಹೇಳಿಕೆ, ಪ್ರಚೋದನಾ ಭಾಷಣ ತಡೆಗೂ ಕಾನೂನು ಜಾರಿ ತರೋದಾಗಿ ತಿಳಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:45 am, Sat, 19 July 25