
ಬೀದರ್, ಮೇ 28: ಬಂಜಾರ ಸಮುದಾಯದ ಸಂಸ್ಕೃತಿ, ಪರಂಪರೆ ಸಾರುವ ಟ್ರೈಬಲ್ ಪಾರ್ಕ್ (Tribal Park) ಕಾಮಗಾರಿ ಮಂದಗತಿಯಿಂದ ಸಾಗಿದೆ. 200 ಕೋಟಿ ರೂ. ವೆಚ್ಚದ ಬಂಜಾರ ಸಮುದಾಯದ (Banjara community) ಆರ್ಥಿಕ, ಸಂಸ್ಕೃತಿ, ಉತ್ತೇಜಿಸುವ (ಟ್ರೈಬಲ್ ಪಾರ್ಕ್) ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಬಂಜಾರಾ ಸಮುದಾಯದ ವಿಶಿಷ್ಟ ಉಡುಗೆ, ತೊಡುಗೆ, ನೃತ್ಯ, ಕಲೆಗಳನ್ನು ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬೋರಂಪಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಟ್ರೈಬಲ್ ಪಾರ್ಕ್‌ನ ಕಾಮಗಾರಿಗೆ ಹತ್ತು ವರ್ಷಗಳಿಂದ ಗ್ರಹಣ ಹಿಡಿದಿದೆ.
ಇದನ್ನೂ ಓದಿ: ಬೀದರ್‌ನ ಐತಿಹಾಸಿಕ ಭಾತಂಬ್ರಾ ಕೋಟೆ ಜೀರ್ಣೋದ್ಧಾರ: ಶ್ಲಾಘನೆ
2015-16ನೇ ಸಾಲಿನಲ್ಲೇ ಗ್ರಾಮದ 34.06 ಎಕರೆ ಜಾಗದಲ್ಲಿ ನಿರ್ಮಿಸಲು ರಾಜ್ಯ ಸರಕಾರ ಮಂಜೂರಾತಿ ನೀಡಿ, ಒಂದೇ ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಹೊಂದಿತ್ತಾದರೂ, ಅದು ಇನ್ನು ಆಗಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಮೊದಲನೇ ಹಂತದಲ್ಲಿ ಕಾಂಪೌಂಡ್ ಗೋಡೆ, ರಸ್ತೆಗಳನ್ನು ನಿರ್ಮಿಸಿದೆ. ಇದೀಗ ಇಲ್ಲಿ ಸದ್ಯಕ್ಕೆ ಹಾಸ್ಟೆಲ್, ಕಟ್ಟಡ ಹಾಗೂ ಬೇರೆ ಬೇರೆ ಕಟ್ಟಡ ಗೆಸ್ಟ್ ಹೌಸ್ ಹಾಗೂ 10 ಕೋಟಿಗೂ ಅಧಿಕ ವೆಚ್ಚದ ಹಾಸ್ಟೆಲ್ ಕಾಮಗಾರಿಗಳನ್ನು ಲ್ಯಾಂಡ್ ಆರ್ಮಿಗೆ ನೀಡಿ ಹತ್ತು ವರ್ಷವಾದರೂ ಇಂದಿಗೂ ಮುಗಿದಿಲ್ಲ. ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಟ್ರೈಬಲ್ ಪಾರ್ಕ್‌ನ ಕಾಮಗಾರಿ ಅಂದುಕೊಂಡತೆ ಆಗುತ್ತಿಲ್ಲ. ಇದು ಸಹಜವಾಗಿಯೇ ಜನರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಉದ್ದೇಶಿತ ಪಾರ್ಕ್‌ನಲ್ಲಿ ಬಂಜಾರಾ ಉಡುಪು ತಯಾರಿಕೆ ಘಟಕ ಸ್ಥಾಪಿಸಿ, ಉಡುಪು ತಯಾರಿಕೆಗೆ ತಂತ್ರಜ್ಞಾನ ಬಳಸಿ, ಆಧುನಿಕ ಸ್ಪರ್ಶ ನೀಡುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿಯ ಜತೆಗೆ, ಉಡುಪು ಸಂಸ್ಕೃತಿಯನ್ನು ಉಳಿಸುವ ಆಶಯ ಹೊಂದಲಾಗಿದೆ. ಆಧುನಿಕತೆ ಹೆಚ್ಚಾದಂತೆ ಬಂಜಾರಾ ಕಸೂತಿ ಕಲೆ ಮಾಯವಾಗುತ್ತಿದೆ. ಆದರೆ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ತರಬೇತಿ ಘಟಕಗಳನ್ನು ಸ್ಥಾಪಿಸಿ ಕಸೂತಿ ಕಲೆಯ ತರಬೇತಿ ನೀಡುವ ಉದ್ದೇಶವನ್ನೂ ಸರಕಾರ ಹೊಂದಿದೆ. ಇಲ್ಲಿ ಉತ್ಪಾದನೆಯಾಗುವ ಉಡುಪುಗಳಿಗೆ ಮಾರುಕಟ್ಟೆ ಕಲ್ಪಿಸಲು, ಪ್ರಚಾರ ಮಾಡಲು ವಿಶೇಷ ಘಟಕವನ್ನು ಪಾರ್ಕ್‌ನಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಬಂಜಾರಾ ಸಮುದಾಯ ಬಳಸುವ ವಾದ್ಯ, ಸಾಂಪ್ರದಾಯಿಕ ನೃತ್ಯಕಲೆಯನ್ನು ಕಲಿಸುವ ಶಾಲೆ ಆರಂಭಿಸುವ ಉದ್ದೇಶವೂ ಇದೆ. ಸಿಮೆಂಟ್, ಇಟ್ಟಿಗೆ ತಯಾರಿಸುವ ಘಟಕವನ್ನೂ ಸಹ ಇಲ್ಲಿ ನಿರ್ಮಿಸಲಾಗುತ್ತಿದೆ.
ಈ ಸಮಾಜದವರು ಉದ್ಯೋಗವನ್ನು ಅರಸಿ ಗುಳೆ ಹೋಗುವುದು ವಾಡಿಕೆ. ಹೀಗಾಗಿ, ಇಂತಹವರ ಮಕ್ಕಳಿಗಾಗಿ ಪಾರ್ಕ್‌ನಲ್ಲಿ ಅರೆಕಾಲಿಕ ವಸತಿ ಶಾಲೆಗಳನ್ನೂ ಆರಂಭಿಸುವ ಉದ್ದೇಶವಿದೆ. ಮದ್ಯವ್ಯಸನಿಗಳಿಗೆ ಚಿಕಿತ್ಸಾ ಘಟಕ ಸ್ಥಾಪಿಸುವ ಉದ್ದೇಶವನ್ನೂ ನಿಗಮ ಹೊಂದಿದೆ. ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಬೇಕಾದ 200 ಕೋಟಿ ರೂ ಅನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ 50 ಕೋಟಿಯಷ್ಟು ಹಣ ಕೂಡಾ ಬಿಡುಗಡೆ ಮಾಡಲಾಗಿತ್ತು. ಆದರೆ ಇದ್ದನ್ನ ಗುತ್ತಿಗೆ ಪಡೆದ ಇಲಾಖೆ ಮಾತ್ರ ಕಾಮಗಾರಿಗೆ ವೇಗ ಕೊಡಲಿಲ್ಲ. ಹೀಗಾಗಿ ಈ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಅಧಿಕಾರಿಗಳ ಹಾಗೂ ಸ್ಥಳೀಯ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರೆತೆಯಿಂದಾಗಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿದ್ದು, ಸ್ಥಳೀಯ ಶಾಸಕರು ಇತ್ತಕಡೆ ಗಮನಕೊಡಿ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬರದ ನಾಡು ಬೀದರ್ನಲ್ಲಿ ಶ್ರೀಗಂಧದ ಘಮ: ಹೇರಳವಾಗಿ ಬೆಳೆದು ನಿಂತ ಮರಗಳು
ಲಂಬಾಣಿ ಸಮುದಾಯದ ಪಾರಂಪರಿಕ ಕಲೆ, ಸಂಸ್ಕೃತಿ ಪರಿಚಯಿಸುವ ಸರಕಾರ ಮಹತ್ವಾಕಾಂಕ್ಷಿ ಟ್ರೈಬಲ್ ಪಾರ್ಕ್ ಯೋಜನೆ ಬಂದ್ ಆಗಿರುವುದು ಲಂಬಾಣಿ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ. ಇತಿಹಾಸದ ಕಾಲಗರ್ಬದಲ್ಲಿ ಹುದುಗಿಹೋಗುತ್ತಿರುವ ಲಬಾಣಿ ಸಂಪ್ರದಾಯವನ್ನ ಉಳಿಸಿಕೊಂಡು ಹೋಗುವ ಉದ್ದೇಶದಿಂದ ಸರಕಾರ ಟ್ರೈಬಲ್ ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ಬೇಗ ಮುಗಿಸಿ ಲಂಬಾಣಿ ಪರಂಪರೆ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿ ಎಂದು ಜನರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.