ಈರುಳ್ಳಿ ಬೀಜ ಮಾರಾಟ ಮಾಡಿ ಕೋಟ್ಯಂತರ ರೂ ಆದಾಯ ಗಳಿಸಿದ ಬೀದರ್‌ನ ರೈತ
ಬೀದರ್‌ನ ಹುಮ್ನಾಬಾದ್ ತಾಲೂಕಿನ ರೈತ 40 ಎಕರೆಯಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡಿ ಐದು ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಲಾಭ ಗಳಿಸಿದ್ದಾರೆ. ಕಿಂಟಾಲ್‌ಗೆ 50 ಸಾವಿರ ರೂ ಗೆ ಮಾರಾಟ ಮಾಡುವ ಮೂಲಕ ಅವರು ಭರ್ಜರಿ ಲಾಭ ಗಳಿಸುತ್ತಿದ್ದಾರೆ. ಅವರ ಉತ್ತಮ ಗುಣಮಟ್ಟದ ಬೀಜಕ್ಕೆ ರಾಜ್ಯದಾದ್ಯಂತ ಬೇಡಿಕೆಯಿದೆ.

ಬೀದರ್, ಮೇ 14: ಕೃಷಿ ಅಂದರೆ ಲಾಭಕ್ಕಿಂತ ನಷ್ಟ ಜಾಸ್ತಿ ಅಂತಾ ನಾವೆಲ್ಲಾ ಕೆಳಿದ್ದೇವೆ. ಆದರೆ ಬೀದರ್‌ನ ಈ ರೈತ (farmer) ಅದೇ ಕೃಷಿಯಿಂದ ಐದು ತಿಂಗಳಲ್ಲಿ ಭರ್ಜರಿ ಲಾಭ ಗಳಿಸಿದ್ದಾರೆ. ಈರುಳ್ಳಿ ಬೀಜ (onion seeds) ಮಾರಾಟ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ. ಈ ಪ್ರಗತಿಪರ ರೈತನ ಕೃಷಿಯ ಚಾಣಾಕ್ಷತನಕ್ಕೆ ಅಧಿಕಾರಿಗಳು ಮತ್ತು ರೈತರು ಕೂಡ ಫಿದಾ ಆಗಿದ್ದಾರೆ. ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ರೈತ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ ಅವರು ತಮ್ಮ 40 ಎಕರೆಯಷ್ಟು ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದು, 5 ತಿಂಗಳಿಗೆ ಒಂದು ಕೋಟಿ ರೂ ಅಧಿಕ ಲಾಭವನ್ನ ಗಳಿಸಿದ್ದಾರೆ. ಇಡೀ ಕರ್ನಾಟಕದಲ್ಲಿಯೇ 40 ಎಕರೆಯಷ್ಟು ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡುವ ಏಕೈಕ ರೈತರೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಪ್ರತಿ ವರ್ಷ ಕೂಡ ಈರುಳ್ಳಿ ಬೀಜ ತಯಾರಿಸಿ ಅದನ್ನ ನೇರವಾಗಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಬೀಜೋತ್ಪಾದನೆಯಿಂದಲೇ ಹೆಚ್ಚಿನ ಲಾಭ ಉಂಟಾಗುತ್ತಿದೆ. ಇನ್ನು ಇವರ ಈರುಳ್ಳಿ ಬೀಜ ಗುಣಮಟ್ಟದಿಂದ ಕೂಡಿದ್ದು, ರೈತರು ಇವರ ಬಳಿ ಬೀಜ ಖರೀದಿಸಿ, ಈರುಳ್ಳಿ ನಾಟಿ ಮಾಡಿದರೆ ಹೆಚ್ಚಿನ ಇಳುವರಿ ಬರುತ್ತದೆಂದು ರೈತರು ಕೂಡ ನಂಬಿಕೊಂಡಿದ್ದಾರೆ. ಇವರ ಬಳಿ ಬಂದು ಈರುಳ್ಳಿ ಬೀಜ ಖರೀದಿಸಿ ಬಿತ್ತನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಸಿಲು ನಾಡು ಬೀದರ್ನಲ್ಲಿ ಗೋಡಂಬಿ ಬಳೆದ ರೈತ: ಅಪಾರ ಆದಾಯ
ಇನ್ನು ಇವರು ಒಂದು ಕೆಜಿಯಷ್ಟು ಈರುಳ್ಳಿ ಬೀಜವನ್ನ ಪ್ಯಾಕ್ ಮಾಡಿ ರಾಜ್ಯದ ಮೂಲೆ ಮೂಲೆಗೂ ಮಾರಾಟ ಮಾಡುತ್ತಾರೆ. ಪಕ್ಕದ ಮಹಾರಾಷ್ಟ್ರ, ತೆಲಂಗಾಣಕ್ಕೂ ಕೂಡ ಬೀಜವನ್ನ ಮಾರಾಟ ಮಾಡುತ್ತಿದ್ದು, ಕೆಜಿಗೆ ಒಂದು ಸಾವಿರ ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮಗೆ ಲಾಭ ಜಾಸ್ತಿಯಿದೆ ಎಂದು ರೈತ ನೇಮಿನಾಥ್ ಕಿವುಡೆ ಹೇಳುತ್ತಾರೆ.
ಕಿಂಟಾಲ್‌ಗೆ 50 ಸಾವಿರ ರೂ ಲಾಭ
ರೈತ ನೇಮಿನಾಥ್ ಅವರು ಹದಿನೈದು ವರ್ಷದ ಹಿಂದೆ ತಮ್ಮ ಹೊಲದಲ್ಲಿ ಕಬ್ಬು, ಸೋಯಾ, ಉದ್ದು ಹೆಸರು ಬೆಳೆಗೆ ಮಾತ್ರ ಸಿಮೀತವಾಗಿದ್ದರು. ಆದರೆ, ಅದರಲ್ಲಿ ಅಷ್ಟೇನು ಲಾಭವಾಗಿಲ್ಲ. ಕಬ್ಬು ಬೆಳೆಯಿಂದಲೂ ಕೂಡ ಇವರಿಗೆ ಲಾಭ ಅಷ್ಟಕಷ್ಟೆ. ಹೀಗಾಗಿ ಈ ಬೆಳೆಗಳಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕು ಅಂದುಕೊಂಡು ಈರುಳ್ಳಿ ಬೀಜೋತ್ಪಾದನೆ ಮಾಡಿದರೆ ಹೇಗೆ ಎಂದು ಯೋಚನೆ ಮಾಡಿ, ಒಂದು ವರ್ಷ ಹತ್ತು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡಿ, ಕಿಂಟಾಲ್‌ಗೆ 50 ಸಾವಿರ ರೂ. ಅಂತೆ ಮಾರಾಟ ಮಾಡಿದ್ದಾರೆ. ಅದರಲ್ಲಿ ಭರ್ಜರಿ ಲಾಭ ಕಂಡುಕೊಂಡಿದ್ದಾರೆ.

ರೈತ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ
ಉತ್ತಮ ಗುಣಮಟ್ಟದ ಬೀಜವನ್ನ ನೋಡಿದ ರೈತರು ಇವರಿಂದ ಹೆಚ್ಚು ಹೆಚ್ಚಾಗಿ ಈರುಳ್ಳಿ ಬೀಜವನ್ನ ಖರೀದಿಸಲು ಶುರುಮಾಡಿದರೂ ಹತ್ತು ಎಕರೆಯಿಂದ ಆರಂಭಿಸಿ ಈಗ 40 ಎಕರೆಯಷ್ಟು ಈರುಳ್ಳಿ ಬೀಜವನ್ನ ಬೆಳೆಸುತ್ತಿದ್ದಾರೆ. ಇನ್ನು ವರ್ಷಕ್ಕೆ ಕನಿಷ್ಟವೆಂದರೂ ಇನ್ನೂರು ಕ್ಷಿಂಟಾಲ್ವರೆಗೆ ಈರುಳ್ಳಿ ಬೀಜವನ್ನ ಮಾರಾಟ ಮಾಡುತ್ತಿದ್ದಾರೆ.
ಇವರು ಯಾವುದೆ ಕಂನಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿಲ್ಲ. ತಾವೆ ಬೆಳೆಸಿದ ಈರುಳ್ಳಿ ಬೀಜವನ್ನ ತಾವೆ ಮಾರಾಟ ಮಾಡುವುದರಿಂದಾಗಿ ಮಾರುಕಟ್ಟೆಯಲ್ಲಿ ದರದಲ್ಲಿ ಬದಲಾವಣೆಯಾದರೂ ಕೂಡ ಇವರಿಗೆ ಏನೂ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಈರುಳ್ಳಿ ಬೀಜದಿಂದ ರೈತ ನೇಮಿನಾಥ್ ಕೋಟ್ಯಾಧಿಪತಿಯಾಗಿದ್ದು, 40 ಎಕರೆಯಲ್ಲಿ ಎಲ್ಲಾ ಖರ್ಚು ತೆಗೆದರು ಕೂಡ ಇವರಿಗೆ ಐದು ತಿಂಗಳಲ್ಲಿ 60 ರಿಂದ 70 ಲಕ್ಷ ರೂ. ಲಾಭವಾಗುತ್ತಿದೆ ಎಂದು ರೈತ ಹೇಳಿದ್ದಾರೆ.
ಇದನ್ನೂ ಓದಿ: ನಾನಾ ಕಾರಣಗಳಿಂದ ರಜೆಗೆ ಬಂದಿದ್ದ ಕರ್ನಾಟಕದ ಯೋಧರು ದೇಶ ಸೇವೆಗೆ ವಾಪಸ್
ಒಟ್ಟಿನಲ್ಲಿ ರೈತ ನೇಮಿನಾಥ್ ಈರುಳ್ಳಿ ಬೀಜೋತ್ಪಾದನೆ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸುವ ತೋಟಗಾರಿಕೆ ಬೆಳೆ ಬೆಳೆಯಲು ಎಲ್ಲ ರೈತರು ಯಶಸ್ಸು ಆಗಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Wed, 14 May 25



