ಬೀದರ್‌ನ ಐತಿಹಾಸಿಕ ಭಾತಂಬ್ರಾ ಕೋಟೆ ಜೀರ್ಣೋದ್ಧಾರ: ಶ್ಲಾಘನೆ
ಬೀದರ್‌ನ ಭಾತಂಬ್ರಾ ಕೋಟೆ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದರೂ, ಅವಸಾನದ ಸ್ಥಿತಿಯಲ್ಲಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಪುರಾತತ್ವ ಇಲಾಖೆ ಜೀರ್ಣೋದ್ಧಾರ ಕಾರ್ಯ ಆರಂಭಿಸಿದೆ. ಈಗ 90% ಕಾರ್ಯ ಪೂರ್ಣಗೊಂಡಿದ್ದು, ಕೋಟೆ ಮತ್ತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಐತಿಹಾಸಿಕ ಕೋಟೆಯ ಪುನರುಜ್ಜೀವನ, ಬೀದರ್‌ನ ಇತಿಹಾಸವನ್ನು ಉಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಬೀದರ್, ಮೇ 18: ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿನ ಭಾತಂಬ್ರಾ ಕೋಟೆ (Bhatambra Fort) ಅತ್ಯಂತ ಭದ್ರ ಹಾಗೂ ವಿಶಿಷ್ಠ ವಾಸ್ತು ಶಿಲ್ಪದ ಮೂಲಕ ಜನರ ಗಮನ ಸೇಳೆಯುತ್ತಿತ್ತು. ಆದರೆ, ಕೋಟೆ ಅವಸಾನದತ್ತ ಸಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತ್ತು. ಹೀಗಾಗಿ ಕೋಟೆಯನ್ನು ಜೀರ್ಣೋದ್ಧಾರ ಮಾಡುವಂತೆ ಗ್ರಾಮಸ್ಥರು ಒತ್ತಡ ಹೇರಿದ್ದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದು ಪುರಾತತ್ವ ಇಲಾಖೆ ಈಗ ಕೋಟೆಯ ಜೀರ್ಣೋದ್ಧಾರ ಕಾರ್ಯ ಆರಂಭಿಸಿದೆ. ಕೋಟೆ ಮತ್ತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಅತ್ಯಂತ ಭದ್ರ ಹಾಗೂ ವಿಶಿಷ್ಠ ವಾಸ್ತು ಶಿಲ್ಪದ ಮೂಲಕ ತನ್ನದೆಯಾದ ಐತಿಹ್ಯ ಹೊಂದಿರುವ ಈ ಕೋಟೆ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ಮೂರು ಶತಮಾನಗಳ ಹಿಂದೆ ಭವ್ಯತೆ ಮೇರೆದ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷಕ್ಕೆ ಒಳಗಾಗಿತ್ತು. ಕೋಟೆ ತುಂಬೆಲ್ಲ ಮುಳ್ಳು-ಕಂಟಿಗಳು ಬೆಳೆದಿದ್ದವು. ಜೂಜುಕೋರರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿತ್ತು.
ಈ ಕೋಟೆಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ಭಾತಂಬ್ರಾ ಗ್ರಾಮದ ವಕೀಲ ಮಹೇಶ್ ರಾಚೋಟೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧ್ಯಕ್ಷರು ಸೇರಿಕೊಂಡು ಕೋಟೆಯನ್ನು ಜೀರ್ಣೋದ್ಧಾರ ಮಾಡಿ ಎಂದು ಪುರಾತ್ವ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಗಮನಕ್ಕೆ ತಂದರು.
ಮುಖಂಡರ ಮನವಿ ಮೇರೆಗೆ ಕೋಟೆ ಜೀರ್ಣೋದ್ಧಾರವಾಗುತ್ತಿದ್ದು, ಶೇ 90 ರಷ್ಟು ಕೆಲಸ ಮುಗಿದಿದೆ. ಈ ಹಿನ್ನೆಲೆಯಲ್ಲಿ ಕೋಟೆ ನೋಡಲು ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಊರಿನವರು ಮತ್ತೆ ಬರುತ್ತಿದ್ದು, ನಮ್ಮ ಊರಿನ ಬಗ್ಗೆ ನಮ್ಮ ಕೋಟೆಯ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಭಾತಂಬ್ರಾ ಗ್ರಾಮದ ಕೋಟೆಯ ಇತಿಹಾಸ
ಭಾತಂಬ್ರಾ ಗ್ರಾಮದ ಕೋಟೆಯ ಇತಿಹಾಸವನ್ನ ನೋಡುವುದಾದರೆ. 1820 ರಿಂದ 1850 ರ ಮಧ್ಯದಲ್ಲಿ ರಾಮಚಂದ್ರ ಜಾಧವ್ ಮತ್ತು ಧನಾಜಿ ಜಾಧವ್ ಅವರಿಂದ ನಿರ್ಮಾಣಗೊಂಡಿದೆ. ಈ ಕೋಟೆ ಸುಮಾರು 13 ಎಕರೆ ವಿಸ್ತೀರ್ಣದಲ್ಲಿದೆ. ಕೋಟೆಯ ಪಕ್ಕದಲ್ಲಿ ಪುರಾತನವಾದ ಬಾವಿ ಇದೆ. ಚಂದ್ರಸೇನನ ಮಗ ರಾಮಚಂದ್ರ ಜಾಧವ್ ಕಾಲದಲ್ಲಿ ಈ ಬಾವಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ. ಎಂತಹ ಭೀಕರ ಜಲಕ್ಷಾಮ ಉಂಟಾದರೂ ನೀರು ಬತ್ತದಿರುವುದು ಈ ಬಾವಿಯ ವಿಶೇಷವಾಗಿದೆ.
ಭಾತಂಬ್ರಾ ಕೋಟೆಯನ್ನು 18ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ನಿರ್ಮಿಸಲಾಗಿದೆ. 13 ಎಕರೆ ಪ್ರದೇಶದಲ್ಲಿ ಕರಿ ಕಲ್ಲಿನಿಂದ ನಿರ್ಮಾಣವಾಗಿದೆ. ಮರಾಠರ ಸಾಮಂತ ರಾಮಚಂದ್ರ ಸೇನ್ ಜಾಧವರ ಕಾಲದಲ್ಲಿ ಇದನ್ನು ಪುನರ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕೋಟೆ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಚೌಕಾಕಾರದಲ್ಲಿ ನಿರ್ಮಿಸಲಾಗಿದೆ. ವಿಶಾಲ ಪ್ರವೇಶ ದ್ವಾರ, ಪ್ರಾಂಗಣ, ಅಂತರ ಗೋಪುರಗಳನ್ನು ಹೊಂದಿದೆ. ಗೋಡೆಗಳು 150 ಅಡಿಗಳಷ್ಟು ಎತ್ತರವಾಗಿವೆ.
ಇನ್ನು, ಪ್ರಾಚೀನ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಭವ್ಯ ಪರಂಪರೆಗೆ ಸಾಕ್ಷಿಯಾಗಿರುವ ಕೋಟೆ ಈಗ ಜೀರ್ಣೋದ್ಧಾರವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ಪೀಳಿಗೆಗೆ ನಮ್ಮ ಭವ್ಯ ಪರಂಪರೆಯನ್ನು ಪರಿಚಯಿಸುವ ಸ್ಥಳಗಳಾಗಬೇಕು ಎಂದು ವಕೀಲ ಮಹೇಶ್ ಹೇಳಿದರು.
ಇದನ್ನೂ ಓದಿ: ಬರದ ನಾಡು ಬೀದರ್ನಲ್ಲಿ ಶ್ರೀಗಂಧದ ಘಮ: ಹೇರಳವಾಗಿ ಬೆಳೆದು ನಿಂತ ಮರಗಳು
ಈ ಪುರಾತನ ಕೋಟೆಯನ್ನು ಒಂದು ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ. ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದನ್ನು ಕಂಡ ಕಲಾ ಪ್ರಿಯರಿಗೆ ನಿರಾಸೆ ಮೂಡಿಸುತ್ತಿತ್ತು. ಆದರೆ ಈಗ ಪುರಾತತ್ವ ಇಲಾಖೆ ಕೋಟೆ ಜೀರ್ಣೋದ್ಧಾರ ಮಾಡುತ್ತಿದ್ದು ಪ್ರವಾಸಿಗರ ಖುಷಿ ಹೆಚ್ಚಿಸಿದೆ.







