
ಬೀದರ್, ಡಿಸೆಂಬರ್ 10: ಮೂರು ತಿಂಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ (rain) ಬೀದರ್ ತಾಲೂಕಿನ ಚಿಮಕೋಡ್ ಹಾಗೂ ಅಲ್ಲಾಪುರ ಗ್ರಾಮವನ್ನು ಸಂಪರ್ಕಿಸುವ ಸೇತುವೆ (bridge) ಕಿತ್ತುಕೊಂಡು ಹೋಗಿದೆ. ಪರಿಣಾಮ ಸುಮಾರು 20 ಕಿ.ಮೀ ಸುತ್ತಿಕೊಂಡು ರೈತರು ತಮ್ಮ ಹೊಲಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಸದ್ಯ ಕಬ್ಬು ಮತ್ತು ತೊಗರೆ ಕಟಾವಿಗೆ ಬಂದಿದ್ದು, ಹೇಗೆ ಸಾಗಿಸುವುದು ಎಂದು ರೈತರು ಚಿಂತೆಗೀಡಾಗಿದ್ದಾರೆ. ಕೊಚ್ಚಿಹೋಗಿರುವ ಸೇತುವೆ ರಿಪೇರಿಗೆ ಗ್ರಾಮಸ್ಥರು ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ತಾಲೂಕಿನ ಚಿಮಕೋಡ್ ಹಾಗೂ ಅಲ್ಲಾಪುರ ಗ್ರಾಮವನ್ನು ಸಂಪರ್ಕಿಸುವ ಈ ಕೊಚ್ಚಿಹೋದ ಸೇತುವೆ ರಿಪೇರಿ ಮಾಡಿ ಎಂದು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಚಿವ ರಹೀಂ ಖಾನ್ ಹಾಗೂ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಮಾಡಿದರೂ ಈವರೆಗೂ ಸೇತುವೆ ರಿಪೇರಿ ಕಾರ್ಯ ಆರಂಭವಾಗಿಲ್ಲ.
ಇದನ್ನೂ ಓದಿ: ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು
ಇಲ್ಲಿ ಸೇತುವೆ ಕಿತ್ತುಕೊಂಡು ಹೋದ ಪರಿಣಾಮ ಜನರು ತಮ್ಮ ತಮ್ಮ ಹೊಲಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಮಕೋಡ್ ಗ್ರಾಮದ ಸುಮಾರು 500 ಹೆಚ್ಚು ಎಕರೆ ಜಮೀನು ಕೊಚ್ಚಿಹೋದ ಸೇತುವೆಯ ಭಾಗದಲ್ಲಿದೆ. ಹೀಗಾಗಿ ತಮ್ಮ ಹೊಲಗಳಿಗೆ ಜನರು ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗಬಿಟ್ಟರೆ, 20 ಕಿ.ಮೀ ಸುತ್ತಿಕೊಂಡು ಬಂದು ಹೊಲಗಳಿಗೆ ರೈತರು ತೆರಳುತ್ತಿದ್ದಾರೆ. ಬೇಗೆ ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮದ ರೈತ ರಾಜಕುಮಾರ್ ಮನವಿ ಮಾಡಿದ್ದಾರೆ.
ಈಗ ರೈತರು ಕಬ್ಬು ಕಟಾವು ಮಾಡುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಕಡಲೆ, ಕುಸುಬಿ, ತೊಗರಿ ಕಟಾವಿಗೆ ಬರುತ್ತದೆ, ಆದರೆ ಇಲ್ಲಿ ಕಟಾವು ಮಾಡಿದ ಬೆಳೆಯನ್ನ ತಮ್ಮೂರಿಗೆ ತೆಗೆದುಕೊಂಡು ಹೋಗಲು 20 ಕಿ.ಮೀ ಸುತ್ತಿಕೊಂಡು ಬೆಳೆಯನ್ನು ಮನೆಗೆ ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸೇತುವೆ ಬೇಗ ರಿಪೇರಿ ಮಾಡಿದರೆ ಒಂದೆರಡು ಕಿ.ಮೀನಲ್ಲಿ ತಮ್ಮೂರಿಗೆ ಕಟಾವು ಮಾಡಿದೆ ಬೆಳೆಯನ್ನ ಸಾಗಿಸಬಹುದು, ಆದರೆ ಸೇತುವೆ ರಿಪೇರಿ ಮಾಡಲು ಶಾಸಕ ಹಾಗೂ ಸಚಿವ ರಹೀಂ ಖಾನ್ ಮನಸ್ಸು ಮಾಡುತ್ತಿಲ್ಲ, ಫೋನ್ ಮಾಡಿದರೆ ರೀಸಿವ್ ಕೂಡ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಾಂಜ್ರಾ ನದಿಯಲ್ಲಿ ಕೂಡ ನೀರು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ಹಳ್ಳದಲ್ಲೂ ನೀರು ತುಂಬಿದೆ. ಮೂರು ವರ್ಷದಿಂದ ಹಳ್ಳದ ನೀರು ಖಾಲಿಯೇ ಆಗಿಲ್ಲ. ಇದರಿಂದಾಗಿ ಈಗ ರೈತರಿಗೆ ಸೇತುವೆಯ ಅನಿವಾರ್ಯತೆ ಎದುರಾಗಿದೆ. ಮಾಂಜ್ರಾ ನದಿಯ ಸುತ್ತಮುತ್ತ 500 ಎಕರೆಯಷ್ಟು ಫಲವತ್ತಾದ ಜಮೀನಿದ್ದು, ಇಲ್ಲಿ ರೈತರು ತರಹೇವಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಸೇತುವೆ ಇಲ್ಲದ ಪರಿಣಾಮ ಬೆಳೆಯನ್ನ ಸಾಗಿಸಲು ರೈತರಿಗೆ ತುಂಬಾ ಅನಾನುಕೂಲುಂಟಾಗಿದೆ.
ಇದನ್ನೂ ಓದಿ: ವನ್ಯ ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ‘ಸೀರೆ’ ಐಡಿಯಾ! ಬೀದರ್ ರೈತರ ವಿನೂತನ ಯತ್ನಕ್ಕೆ ಸಿಕ್ಕಿದೆ ಯಶಸ್ಸು
ಸರಕಾರ ರೈತರ ಅನೂಕುಲಕ್ಕಾಗಿ ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದೆ. ಆ ಮೂಲಕ ಲಕ್ಷಾಂತರ ರೂ. ಖರ್ಚುನ್ನು ಸಹ ಮಾಡುತ್ತಿದೆ. ಆದರೆ ರೈತರ ಉಪಯೋಗಕ್ಕೆ ಬರುವ ಕೆಲಸ ಮಾತ್ರ ಮಾಡುತ್ತಿಲ್ಲ. ಈ ಗ್ರಾಮದ ರೈತರಿಗೆ, ಜನರಿಗೆ ಅನಿವಾರ್ಯವಾಗಿರುವ ಸೇತುವೆ ರಿಪೇರಿ ಕಾರ್ಯ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:08 pm, Wed, 10 December 25