ಬೀದರ್: ಗಡಿ ಜಿಲ್ಲೆಯಲ್ಲಿ ಭಾಷೆ ಉಳಿಸಿ ಬೆಳೆಸುವುದಕ್ಕೆ ಕನ್ನಡ ಭವನ ನಿರ್ಮಾಣ; ಅನುದಾನವಿಲ್ಲದೆ ಅರ್ಧಕ್ಕೆ ನಿಂತ ಕಾಮಗಾರಿ
ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಗಾಂಧಿ ಭವನ, ಕನ್ನಡ ಭವನ, ಗೋದಾಮುಗಳನ್ನ ನಿರ್ಮಿಸಲಾಗುತ್ತಿತ್ತು. ಆದರೆ ಅನುದಾನ ಕೊರತೆಯ ನೆಪ ಹೇಳಿ ನಾಲ್ಕೈದು ವರ್ಷದಿಂದ ಕಟ್ಟಡಗಳನ್ನ ಅರ್ಧಕ್ಕೆ ನಿಲ್ಲಿಸಿದ್ದು, ಕಟ್ಟಡಗಳು ಹಾಳಾಗುತ್ತಿವೆ. ಕಟ್ಟಡಕ್ಕೆ ಬೇಕಾದ ಪೂರ್ಣ ಪ್ರಮಾಣದ ಹಣವನ್ನ ಬಿಡುಗಡೆ ಮಾಡದಿದ್ದರೆ ಮೊದಲ ಕಂತಿನ ಹಣವನ್ನ ಯಾಕೆ ಬಿಡುಗಡೆ ಮಾಡಬೆಕಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಬೀದರ್: ಅನುದಾನದ ಕೊರತೆಯಿಂದ ನಾಲ್ಕೈದು ವರ್ಷದಿಂದ ಅರ್ಧಕ್ಕೆ ನಿಂತಿರುವ ಕೋಟ್ಯಾಂತರ ರೂಪಾಯಿ ವೆಚ್ಚದ ಕಟ್ಟಡಗಳು, ಅನುದಾನ ಬಿಡುಗಡೆಗೆ ಮೀನಾಮೇಶ. ಹೌದು ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಬಹುಭಾಷೆ ಮಾತನಾಡುವ ಜನರಿದ್ದಾರೆ. ಅದರಲ್ಲಿ ಕನ್ನಡಕ್ಕಿಂತ ಬೇರೆ ಭಾಷೆ ಮಾತನಾಡೋ ಜನರೇ ಇಲ್ಲಿ ಜಾಸ್ತಿಯಿದ್ದಾರೆ. ವರ್ಷದಿಂದ ವರ್ಷಕ್ಕೆ ಕನ್ನಡ ಭಾಷೆ ಮಾತನಾಡುವ ಜನರು ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ಸರಕಾರ ಮೂರು ವರ್ಷದ ಹಿಂದೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿ, ಎರಡು ವರ್ಷದ ಹಿಂದೆ ಒಂದು ಕೋಟಿ ರೂಪಾಯಿ ಅನುದಾನವನ್ನ ಕನ್ನಡ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ. ಆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನ ಕಾಮಗಾರಿ ಆರಂಭವಾಗಿದೆ. ಆದರೆ ಇಲ್ಲಿಯವರೆಗೂ ಇನ್ನುಳಿದ ಅನುದಾನವನ್ನ ಕೊಡದೇ ಇದ್ದ ಕಾರಣ ಕನ್ನಡ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅನುದಾನ ಕೊಡಿ ಎಂದು ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷರು ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ವಿಶ್ವೇಶ್ವರ ಹೆಗಡೆ ಕಾಗೇರಿಗೆ ಗ್ರಾಮಸ್ಥರಿಂದ ತರಾಟೆ; ಕಾಮಗಾರಿ ಶಂಕುಸ್ಥಾಪನೆ ಮಾಡದೇ ತೆರಳಿದ ಸ್ಪೀಕರ್
ಇನ್ನು ಜಿಲ್ಲೆಯ ಔರಾದ್ ಪಟ್ಣದಲ್ಲಿ 2015-16 ನೇ ಸಾಲಿನಲ್ಲಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಉಗ್ರಾಣ ನಿಗಮದಿಂದ ಔರಾದ್ ಪಟ್ಟಣದ ರೈತ ಭವನದ ಹಿಂದೆ ಎರಡು ಬೃಹತ್ತಾದ ಗೋದಾಮು ನಿರ್ಮಾಣ ಕಾಮಗಾರಿ ಕೈಗೆತ್ತುಕೊಳ್ಳಲಾಗಿತ್ತು. ಇಲ್ಲಿನ ಗೋದಾಮು ನಿರ್ಮಾಣದ ಕಾಮಗಾರಿ ಅರ್ಧಕ್ಕೆ ನಿಂತು ಆರು ವರ್ಷಗಳು ಉರುಳಿದರೂ ಕೂಡ ನಿಂತಿರುವ ಕಾಮಗಾರಿಯನ್ನ ಆರಂಭಿಸಿಲ್ಲ. ಇದರಿಂದಾಗಿ ಅರ್ಧಂಬರ್ಧ ನಿಂತುಕೊಂಡಿರುವ ಕಾಮಗಾರಿಯೂ ಹಾಳಾಗುತ್ತಿದ್ದು, ಪುಂಡ ಪೋಕರಿಗಳ ಸ್ಥಳವಾಗಿ ಬದಲಾಗಿದೆ. ಔರಾದ್ ತಾಲೂಕಿನ ರೈತರು ತಾವು ಬೆಳೆಸಿದ ದವಸ ಧಾನ್ಯಗಳನ್ನ ಸಂಗ್ರಹಿಸಿಡುವ ಉದ್ದೇಶದಿಂದ ಈ ಗೋದಾಮು ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಕಳೆದ ಆರು ವರ್ಷದಿಂದ ಗೋದಾಮು ಕಾಮಗಾರಿ ಆರ್ಧಕ್ಕೆ ನಿಂತುಕೊಂಡಿದ್ದು ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಗೋದಾಮು ನಿರ್ಮಾಣ ಉದ್ದೇಶವಿಲ್ಲಿ ವಿಫಲವಾಗಿದ್ದು ರೈತರು ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಆರು ವರ್ಷದಿಂದ ಅರ್ಧಕ್ಕೆ ನಿಂತ ಗೋದಾಮು ಕಾಮಗಾರಿ
ಇನ್ನು ರೈತರು ತಾವು ಬೆಳೆದ ದವಸ ಧಾನ್ಯವನ್ನ ಖಾಸಗಿ ಗೋದಾಮಿನಲ್ಲಿ ಹೆಚ್ಚಿಗೆ ಹಣವನ್ನ ಕೊಟ್ಟು ತಮ್ಮ ದವಸ ಧಾನ್ಯವನ್ನ ಇಡುವಂತಹ ಸ್ಥಿತಿ ಎದುರಾಗಿದೆ. ಆರು ವರ್ಷದಿಂದ ಗೋದಾಮು ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿರುವ ಪರಿಣಾಮದಿಂದಾಗಿ ಮಳೆ, ಬಿಸಿಲಿಗೆ ಅರ್ಧಕ್ಕೆ ನಿಂತುಕೊಂಡಿರುವ ಕಟ್ಟಡ ಉಪಯೋಗಕ್ಕೆ ಬಾರದಂತಾಗಿದೆ. ಗೋದಾಮಿನ ಚಾವಣಿ ಕೆಲಸವನ್ನ ಮಾಡಲಾಗಿದೆ ಅದರೆ ಮಳೆಯಿಂದ ಚಾವಣಿಗೆ ಹಾಕಿದ ಕಬ್ಬಿಣದ ಸಲಾಕೆಗಳು ತುಕ್ಕು ಹಿಡಿದಿದ್ದು, ಮರು ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದಾಗಿ ಉಗ್ರಾಣ ನಿರ್ಮಾಣಕ್ಕೆ ಬಳಸಲಾಗಿರುವ ಸುಮಾರು 1139.86 ಲಕ್ಷ ರೂಪಾಯಿ ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದ್ದು ಸರಕಾರದ ಭೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿ ನಷ್ಟವಾಗಿದ್ದು ಈ ಹಣವನ್ನ ಗುತ್ತಿಗೆದಾರನಿಂದ ಮರಳಿ ಪಡೆದುಕೊಂಡು ಆತನ ಮೇಲೆ ಕ್ರಿಮಿನಲ್ ಪ್ರಕರಣ ಹಾಕಿ ಆತನನ್ನ ಜೈಲಿಗೆ ಕಳುಹಿಸಬೇಕೆಂದು ಇಲ್ಲಿನ ಜನರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳು ಅರ್ಧಕ್ಕೆ ನಿಂತುಕೊಂಡಿವೆ. ಅರ್ಧಕ್ಕೆ ನಿಂತಿರುವ ಕಟ್ಟಡಗಳಿಗೆ ಹಣ ಬಿಡುಗಡೆ ಮಾಡಿ ಕಟ್ಟಡಗಳನ್ನ ಪೂರ್ಣಗೊಳಿಸಿ ಎಂದು ಇಲ್ಲಿನ ಜನರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Fri, 17 March 23