ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್​: ಪ್ರಿಯಾಂಕ್​ ಖರ್ಗೆ ಆಪ್ತ 5 ದಿನ ಸಿಐಡಿ ಕಸ್ಟಡಿಗೆ

| Updated By: ವಿವೇಕ ಬಿರಾದಾರ

Updated on: Jan 11, 2025 | 10:12 AM

ಬೀದರ್‌ನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಸೇರಿದಂತೆ ಐವರನ್ನು ಬೀದರ್ ಜೆಎಂಎಫ್‌ಸಿ ನ್ಯಾಯಾಲಯ 5 ದಿನಗಳ ಸಿಐಡಿ ಕಸ್ಟಡಿಗೆ ನೀಡಿದೆ.ಸಿಐಡಿ ತನಿಖೆ ಭರದಿಂದ ಸಾಗಿದ್ದು, ಡೆತ್ ನೋಟ್‌ನಲ್ಲಿ ಹೆಸರಿಸಲಾದ ಎಂಟು ಜನರ ಪೈಕಿ ಐವರನ್ನು ಬಂಧಿಸಲಾಗಿದೆ. ಉಳಿದ ಮೂವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್​: ಪ್ರಿಯಾಂಕ್​ ಖರ್ಗೆ ಆಪ್ತ 5 ದಿನ ಸಿಐಡಿ ಕಸ್ಟಡಿಗೆ
ಆರೋಪಿಗಳು ಸಿಐಡಿ ಕಸ್ಟಡಿಗೆ, ಗುತ್ತಿಗೆದಾರ ಸಚಿನ್​
Follow us on

ಬೀದರ್​, ಜನವರಿ 11: ಯುವ ಗುತ್ತಿಗೆದಾರ ಸಚಿನ್ (Bidar Contractor Sachin) ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಪ್ತ ರಾಜು ಕಪನೂರ್​ ಸೇರಿದಂತೆ ಐವರು ಆರೋಪಿಗಳನ್ನು ಬೀದರ್​ನ ಜೆಎಂಎಫ್​ಸಿ ನ್ಯಾಯಾಲಯ 5 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಆರೋಪಿಗಳಾದ ರಾಜು ಕಪನೂರ್​​​, ಘೋರಕ್​ನಾಥ್​​, ಸತೀಶ್​, ನಂದಕುಮಾರ್​​ ನಾಗಭುಂಜಗೆ, ರಾಮಾಗೌಡ ಪಾಟೀಲ್​ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಎಂಟು ಜನರ ಪೈಕಿ ಐವರ ಬಂಧನವಾಗಿದ್ದು, ಇನ್ನೂ ಮೂವರಿಗಾಗಿ ಸಿಐಡಿಯಿಂದ ಶೋಧ ನಡೆಸುತ್ತಿದೆ.

2024 ಡಿಸೆಂಬರ್ 26 ರಂದು ಬೀದರ್ ನಗರದ ಬಸವೇಶ್ವರ ವೃತ್ತದ ಬಳಿಯ ರೈಲು ಹಳಿಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಮಾರು ಏಳು ಪುಟಗಳ ಡೆತ್​ನೋಟ್​ ಬರೆದಿಟ್ಟಿದ್ದರು. ಡೆತ್​ನೋಟ್​ನಲ್ಲಿ​ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಜ್ ಖರ್ಗೆ ಆಪ್ತ ರಾಜು ಕಪನೂರ್ ಆ್ಯಂಡ್ ಗ್ಯಾಂಗ್​ನ ಎಂಟು ಸದಸ್ಯರ ಹೆಸರು ಇತ್ತು. ಈ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಸರಕಾರ ಸಿಐಡಿ ತನಿಖೆಗೆ ಆದೇಶ ಮಾಡಿತ್ತು.
ಸಿಐಡಿ ಡಿವೈಸ್ ಎಸ್​ಪಿ ಸುಲೇಮಾನ್ ತಹಶಿಲ್ದಾರ್ ನೆತೃತ್ವದ ಅಧಿಕಾರಿಗಳ ತಂಡ ಬೀದರ್​ನಲ್ಲಿ ಬೀಡು ಬಿಟ್ಟು ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ. ಕಳೆದ ಐದು ದಿನದಿಂದ ಸಿಐಡಿ ಡಿಐಜಿ ಶಾಂತನು ಸಿನ್ಹಾ ಬೀದರ್​ನಲ್ಲಿ ಮುಕ್ಕಾಮು ಹೂಡಿ ತನಿಖೆಯ ಸತ್ಯಾಸತ್ಯೆತೆಯನ್ನು ಪರಿಶಿಲನೆ ನಡೆಸಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗಾಗಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ: ಸಚಿನ್ ಸಹೋದರಿ

ಡೆತ್​ನೋಟ್​ನಲ್ಲಿ ಬರೆಯಲಾಗಿದ್ದ ಎಂಟೂ ಜನರಿಗೆ ಸಿಐಡಿ ಜನವರಿ 6 ರಂದು ನೋಟಿಸ್​ ನೀಡಿತ್ತು. ಎಂಟು ಜನರ ಪೈಕಿ ಸಚಿವ ಪ್ರಿಯಂಕ್ ಖರ್ಗೆ ಆಪ್ತ ರಾಜು ಕಪನೂರು, ಗೋರಕನಾಥ್, ನಂದಕುಮಾರ್ ನಾಗಭುಂಜಗೆ, ರಾಮನಗೌಡಾ ಪಾಟೀಲ್, ಸತೀಶ್ ಐದು ಮಂದಿ ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾದರು. ಈ ವೇಳೆ ಸಿಐಡಿ ಐದೂ ಮಂದಿಯನ್ನು ಬಂಧಿಸಿದೆ.

ಆರೋಪಿಗಳನ್ನು ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ನಂತರ ಬೀದರ್ ಜೆಎಂಎಫ್​ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ವಾದ-ಪ್ರತಿವಾದ ಆಲಿಸಿದ ಬೀದರ್ ಜೆಎಂಎಫ್​ಸಿ ನ್ಯಾಯಾಲಯದ ನ್ಯಾ. ರಾಮಮೂರ್ತಿಯವರು ಐದೂ ಜನ ಆರೋಪಿಗಳನ್ನು 5 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಐದು ಜನ ಆರೋಪಿಗಳನ್ನು ಸಿಐಡಿ ತಂಡ ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದೆ.

ಸಿಐಡಿ ವಿಚಾರಣೆಗೆ ಹಾಜರಾಗುವ ಮುನ್ನ ಟಿವಿ9 ಜೊತೆ ಮಾತನಾಡಿದ ಆರೋಪಿಗಳು, ನಮ್ಮ ಬಗ್ಗೆ ಸಚಿನ್ ಸುಳ್ಳು ಆರೋಪ ಮಾಡಿದ್ದಾನೆ. ನಾವು ಆತನಿಗೆ ಹಣ ಕೊಒಟ್ಟಿದ್ದೇವೆ. ಆದರೆ ಆತ ನಮ್ಮ ಹೆಸರು ಬರೆದಿದ್ದು ಯಾಕೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:08 am, Sat, 11 January 25