
ಬೀದರ್, ಜನವರಿ 23: ಜಿಲ್ಲೆಯಲ್ಲಿರುವುದು ಮಾಂಜ್ರಾ ನದಿ (Manjra River) ಒಂದೇ. ಈಗ ಇದೇ ನದಿಯ ಒಡಲು ಬರಿದಾಗುತ್ತಿದೆ. ಅಕ್ರಮ ಮರಳು ದಂಧೆಕೋರರು (Sand Mining) ನದಿಯ ಒಡಲನ್ನ ಬಗೆಯುಯತ್ತಿದ್ದಾರೆ. ಇಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆ ಹಿಂದೆ ಅಧಿಕಾರಿಗಳೂ ಕೈಜೋಡಿಸಿದ್ದಾರೆ. ಹೀಗಾಗಿ ಯಾರ ಅಂಜಿಕೆ ಅಳುಕಿಲ್ಲದೆ ಮರಳು ದಂಧೆ ಜೋರಾಗಿ ನಡೆಯುತ್ತಿದೆ.
ಬೀದರ್ ಜಿಲ್ಲೆಯ ಏಕೈಕ ಜೀವನಾಡಿ ಮಾಂಜ್ರಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡಲಾಗುತ್ತಿದೆ. ಯಾವುದೇ ಪರವಾನಿಗೆ ಪಡೆಯದೆಯೇ ಅನಧಿಕೃತವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ನದಿಯಲ್ಲಿ ಟ್ಯಾಕ್ಟರ್ ಬಳಸಿಕೊಂಡು ಭಾರೀ ಪ್ರಮಾಣದಲ್ಲಿ ಮರಳನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಹಾಗೂ ಔರಾದ್ ತಾಲೂಕಿನ ಖಾನಾಪುರ ಗ್ರಾಮದ ಸುತ್ತಮುತ್ತ ಎಗ್ಗಿಲ್ಲದೆ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ.
ಇದನ್ನೂ ಓದಿ: ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್ನಲ್ಲಿ ನಿಲ್ಲದ ನೀರು: ರೈತರ ನೀರಾವರಿ ಕನಸು ನುಚ್ಚುನೂರು
ಹಗಲು ರಾತ್ರಿಯನ್ನದೇ ಕಪ್ಪು ಮರಳು ಸಾಗಾಟ ಮಾಡಲಾಗುತ್ತಿದ್ದು, ಅಧಿಕಾರಿಗಳು ಮಾತ್ರ ನಮಗೂ, ಅದಕ್ಕೂ ಸಂಬಂಧವೇ ಇಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ. ಟನ್ ಗಟ್ಟಲೇ ಮಾಂಜ್ರಾ ನದಿಯಿಂದ ಉತ್ತಮ ಗುಣಮಟ್ಟದ ಕಪ್ಪು ಮರಳನ್ನ ರಫ್ತು ಮಾಡಲಾಗುತ್ತಿದೆ. ಆದರೆ ಇದಕ್ಕೆ ಗಾಡ್ ಫಾದರ್ ಆಗಿ ನಿಂತಿರುವುದು ಅಧಿಕಾರಿ ವರ್ಗ ಎನ್ನುವುದು ಜನರ ಆರೋಪ.
ಇನ್ನು ತಿಂಗಳ ಹಿಂದೆ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಇಲ್ಲಿ ಔರಾದ್ ತಾಲೂಕಿನ ಖಾನಾಪುರ ಹಾಗೂ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮ ಬಳಿಯ ಮಾಂಜ್ರಾ ನದಿಯಿಂದ ಮರಳು ತೆಗೆಯಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ಈವರೆಗೆ ಮರಳು ತೆಗೆಯುವುದು ನಿಂತಿಲ್ಲ. ಮಾಂಜ್ರಾ ನದಿಯಲ್ಲಿ ಬರಪುರ ನೀರಿದೆ, ಎಲ್ಲಿ ನೀರನ ಹರಿವು ಕಡಿಮೆ ಇದೆಯೇ ಅದನ್ನೇ ಬಂಡಾವಾಳ ಮಾಡಿಕೊಂಡು ಕಾರ್ಮಿಕರ ಮೂಲಕ ಮರಳನ್ನ ತೆಗೆದು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಹಗಲು-ರಾತ್ರಿ ಎನ್ನದೇ ಮರಳು ಸಾಗಿಸಲಾಗುತ್ತಿದ್ದರು ಪೊಲೀಸರಾಗಲಿ, ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳಾಗಲಿ ಇತ್ತ ಕಡೆ ಕಣ್ಣೆತ್ತಿ ನೋಡುತ್ತಿಲ್ಲ.
ಇನ್ನು ಮರಳನ್ನ ಸಾಗಿಸುವ ವೇಳೆ ಕೆಲ ಟ್ರ್ಯಾಕ್ಟರ್ಗಳ ನಂಬರ್ ಪ್ಲೇಟ್ ಕೂಡ ಇರುವುದಿಲ್ಲ. ಹತ್ತಾರು ವಾಹನಗಳು ಹಗಲು ರಾತ್ರಿ ಎನ್ನದೇ ಮರಳು ಸಾಗಾಟ ಮಾಡುತ್ತಿರುವುದರಿಂದ ಹಲವು ಗ್ರಾಮಗಳಲ್ಲಿ ಜನರು ರಾತ್ರಿ ನಿದ್ದೆ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮರಳುಗಾರಿಕೆಯಿಂದ ನದಿಗಳ ಅಂತರ್ಜಲ ಬತ್ತಿ ಹೋಗುತ್ತಿದೆ. ಬೇಸಿಗೆ ಆರಂಭವಾದರೆ ನದಿಯಲ್ಲಿ ನೀರು ಕಡಿಮೆಯಾದರೆ ಕುಡಿಯಲು ನೀರು ಸಿಗದ ವಾತಾವರಣ ನಿರ್ಮಾಣವಾಗುವ ಸ್ಥಿತಿ ಕೂಡ ಇದ್ದು, ಕೂಡಲೇ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಅನ್ನೋದು ಹೋರಾಟಗಾರ ಅಂಬಾದಾಸ್ರ ಆಗ್ರಹ.
ಇದನ್ನೂ ಓದಿ: ಎರಡು ಕಿ.ಮೀ ದೂರದ ಜಮೀನಿಗೆ 20 ಕಿ.ಮೀ ಸುತ್ತಿಕೊಂಡು ಹೋಗ್ಬೇಕು: ರೈತರ ಗೋಳು ಕೇಳೋರ್‍ಯಾರು?
ನದಿ ದಡದಲ್ಲಿ ನಿತ್ಯವೂ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಇಷ್ಟಾಗಿಯೂ ಅಧಿಕಾರಿಗಳು ಮೌನ ವಹಿಸುತ್ತಿರುವುದನ್ನ ನೋಡಿದರೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಅನ್ನೋದು ರಹಸ್ಯಮಯವಾಗಿ ಉಳಿದಿಲ್ಲ. ಒಟ್ಟಾರೆ ಅಧಿಕಾರಿಗಳು ಮತ್ತು ಲೂಟಿಕೋರರ ಹಣದಾಸೆಗೆ ನದಿಪಾತ್ರ ಬರಿದಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.