ಬೀದರ್: ಮರಾಠಿಗರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ಗೆ ಮರಾಠ ಸಮುದಾಯ ಆಗ್ರಹ
ಒಂದೆರಡು ತಿಂಗಳಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ಘೊಷಣೆಯಾಗಲಿದೆ. ಈಗಿನಿಂದಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಗೆಲುವಿನ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿವೆ. ಮೂರು ಪಕ್ಷದಲ್ಲಿ ಡಜನ್ಗಟ್ಟಲೇ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಇದರಂತೆ ಜಿಲ್ಲೆಯಲ್ಲಿ ಮರಾಠ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮರಾಠಾ ಸಮುದಾಯಕ್ಕೆ ಒಂದು ಟಿಕೆಟ್ ಕೊಡಿ ಎಂದು ಬಿಜೆಪಿಗೆ ಒತ್ತಡ ಹಾಕುತ್ತಿದ್ದಾರೆ.
ಬೀದರ್: ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮರಾಠಾ ಸಮುದಾಯದ ಮತಗಳಿದ್ದು, ಬಿಜೆಪಿಯಿಂದ ಒಂದು ಕ್ಷೇತ್ರಕ್ಕೆ ಟಿಕೆಟ್ ಮರಾಠಿಗರಿಗೆ ನೀಡುವಂತೆ ಮರಾಠಾ ಸಮುದಾಯದವರು ಆಗ್ರಹಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮರಾಠಾ ಸಮುದಾಯವನ್ನ 2ಎ ಗೆ ಸೇರಿಸುವ ಮಾತು ಕೊಟ್ಟು ಕೈ ಕೊಟ್ಟಿದ್ದರು. ಹೀಗಾಗಿ ಮರಾಠ ಸಮುದಾಯಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾರೆ. ಇನ್ನು ಒಂದೆರಡು ತಿಂಗಳಲ್ಲಿ ರಾಜ್ಯ ವಿಧಾನ ಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಆ ಪಕ್ಷದ ಮೇಲೆ ಜಾತಿವಾರು ಟಿಕೆಟ್ ಕೊಡಬೇಕು ಅನ್ನೋ ಕೂಗು ಜೋರಾಗಿ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ನೋಡುವುದಾದರೆ ಲಿಂಗಾಯತ, ಮರಾಠಾ, ಮುಸ್ಲಿಂ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಎಲ್ಲಾ ಜಾತಿಯವರಿಗೆ ಎರಡು ರಾಷ್ಟ್ರೀಯ ಪಕ್ಷದವರು ಟಿಕೆಟ್ ಕೊಟ್ಟು ಶಾಸಕರು ಇದ್ದಾರೆ. ಆದರೆ ಔರಾದ್, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ ಅತಿ ಹೆಚ್ಚು ಮರಾಠ ಸಮುದಾಯದವರಿದ್ದು ಭಾಲ್ಕಿ ಅಥವಾ ಬಸವಕಲ್ಯಾಣ ಕ್ಷೇತ್ರದಲ್ಲಿ ಒಂದು ಸ್ಥಾನವನ್ನ ಮರಾಠ ಸಮುದಾಯಕ್ಕೆ ಕೊಡಬೇಕು ಎಂದು ಮರಾಠ ಸಮುದಾಯದ ಮುಖಂಡರು ಬಿಜೆಪಿ ಪಕ್ಷದ ವರಿಷ್ಠರಿಗೆ ಮನವಿ ಮಾಡುತ್ತಿದ್ದಾರೆ. ಮರಾಠಾ ಸಮುದಾಯ ಎಲ್ಲಾ ಚುನಾವಣೆಯಲ್ಲಿಯೂ ಬಿಜೆಗೆ ಮತಗಳನ್ನ ಕೊಟ್ಟಿದ್ದಾರೆ. ಮರಾಠಾ ಸಮುದಾಯ ಕಟ್ಟಾ ಬಿಜೆಪಿಯಾಗಿದ್ದು, ಹೀಗಾಗಿ ಮರಾಠಾ ಸಮುದಾಯಕ್ಕೆ ಟಿಕೆಟ್ ಕೊಡವೇಕು ಎಂದು ಮನವಿ ಮಾಡುತ್ತಿದ್ದಾರೆ.
ಇನ್ನು ಪಕ್ಷದ ನಿಷ್ಠಾವಂತ ಸಮುದಾಯ ಅಂದರೆ ಅದು ಮರಾಠಾ ಸಮುದಾಯ, ಈ ಮರಾಠಾ ಸಮುದಾಯದ ಜನಸಂಖ್ಯೆಯನ್ನ ವಿಧಾನ ಸಭಾ ಕ್ಷೇತ್ರವಾರು ನೋಡುವುದಾದರೆ ಬಸವಕಲ್ಯಾಣದಲ್ಲಿ 46 ಸಾವಿರ ಮರಾಠಾ ಸಮುದಾಯದವರಿದ್ದಾರೆ. ಭಾಲ್ಕಿಯಲ್ಲಿ 70 ಸಾವಿರಕ್ಕೂ ಹೆಚ್ಚು ಮರಾಠಾ ಸಮುದಾಯದವರಿದ್ದು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಈ ಸಮುದಾಯದ ಜನರಿದ್ದಾರೆ. ಬೀದರ್ನಲ್ಲಿ 18 ಸಾವಿರ, ಔರಾದ್ನಲ್ಲಿ 22 ಸಾವಿರ, ಹುಮ್ನಾಬಾದ್ ನಲ್ಲಿ 17 ಸಾವಿರ ಮರಾಠಾ ಸಮುದಾಯದವರಿದ್ದು, ಇದುವೆರೆಗೂ ಕೂಡಾ ಮರಾಠಾ ಸಮುದಾಯಕ್ಕೆ ಬಿಜೆಪಿಯಿಂದ ಟಿಕೆಟ್ ಕೊಟ್ಟಿಲ್ಲ.
ಹೀಗಾಗಿ ಭಾಲ್ಕಿ ಅಥವಾ ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಒಂದು ಟಿಕೇಟ್ ಮರಾಠಾ ಸಮುದಾಯಕ್ಕೆ ಕೊಡಲೇ ಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಬಿಜೆಪಿಯಿಂದ ಮರಾಠಾ ಸಮುದಾಯಕ್ಕೆ ಭಾಲ್ಕಿ ಕ್ಷೇತ್ರದಿಂದ ಟಿಕೆಟ್ ಕೊಟ್ಟಿದ್ದೆಯಾದರೆ ಅಲ್ಲಿ ಗೆಲ್ಲವೂ ಸುಲಭವಾಗಲಿದ್ದು ಇದರ ಪ್ರಭಾವ ಜಿಲ್ಲೆಯ ಎಲ್ಲಾ ಕಡೆಗಳಲ್ಲಿಯೂ ಆಗುತ್ತದೆ. ಹೀಗಾಗಿ ಬಿಜೆಪಿ ಜಿಲ್ಲೆಯಲ್ಲಿ ಅತಿಹೆಚ್ಚು ಸ್ಥಾನವನ್ನ ಗೆಲ್ಲಲ್ಲು ಸಾಧ್ಯವಾಗುತ್ತದೆ. ಇನ್ನೂ ಭಾಲ್ಕಿ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಟ್ಟರೆ ಅಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರು ಸೋಲು ಗ್ಯಾರಂಟಿ, ಇದರ ಜೊತೆಗೆ ಕಾಂಗ್ರೆಸ್ ಮುಕ್ತ ಭಾಲ್ಕಿ ಮಾಡುತ್ತೇವೆಂದು ಮರಾಠಾ ಸಮುದಾಯದ ಮುಂಖಡರು ಹೇಳುತ್ತಿದ್ದಾರೆ. ಇನ್ನು ಈ ವಿಧಾನ ಸಭಾ ಚುನಾವಣೆಯಲ್ಲಿ ಮರಾಠಾ ಸಮುದಾಯಕ್ಕೆ ಒಂದು ಸ್ಥಾನ ಕೊಡಲೇಬೇಕು ಇಲ್ಲವಾದರೆ ನಮ್ಮ ಸಮುದಾಯದ ಶಕ್ತಿ ಏನು ಎಂಬುವುದನ್ನ ತೋರಿಸುತ್ತೆವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ