ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ : 2.20 ಕೋಟಿ ರೂ. ಮೌಲ್ಯದ ನಕಲಿ ಪಾನ್ ಮಸಾಲ ಜಪ್ತಿ, 8 ಮಂದಿಯ ಬಂಧನ
ಅಲ್ಲಿ ಹಲವಾರು ದಿನಗಳಿಂದಾ ಅಕ್ರಮವಾಗಿ ಗುಟ್ಕಾ ತಯಾರಿಸಿ ಮಾರಾಟ ಮಾಡುತ್ತಿದ್ದರು. ಹೊರಗಡೆ ‘ಟು ಲೆಟ್’ ಬೋರ್ಡ್ ಹಾಕಿ ಒಳಗಡೆಗೆ ಕಲಬೆರಿಕೆ ಪಾನ್ ಮಸಾಲಾ ತಯಾರಿಸಿ ಮಾರುತ್ತಿದ್ದರು. ವಿಷವನ್ನೇ ನಕಲಿ ಮಾಡಿ ಮಾರಾಟ ಮಾಡುತ್ತಿದ್ದವರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 2.20 ಕೋಟಿ ರೂ. ಮೌಲ್ಯದ ಪಾನ್ ಮಸಾಲ ಜಪ್ತಿ ಮಾಡಿದ್ದಾರೆ.

ಬೀದರ್, ಸೆಪ್ಟೆಂಬರ್ 1: ಗುಟ್ಕಾ, ಪಾನ್ ಮಸಾಲಾ (Pan Masala) ಅರೋಗ್ಯಕ್ಕೆ ಹಾನಿಕಾರಕ ಎಂದು ಜಾಗೃತಿ ಮೂಡಿಸುತ್ತಾರೆ. ಅದನ್ನು ತಿಂದರೆ ಕ್ಯಾನ್ಸರ್ ಬರುತ್ತದೆ ಎಂದೆಲ್ಲ ಎಚ್ಚರಿಸುತ್ತಿದ್ದಾರೆ. ಇದರ ನಡುವೆ ಈ ವಿಷವನ್ನೇ ಪಾಪಿಗಳು ನಕಲಿ ಮಾಡಿ ಮಾರುತ್ತಿದ್ದಾರೆ. ಬೀದರ್ (Bidar) ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಕಡೆ ದಾಳಿ ನಡೆಸಿ 2.20 ಕೋಟಿ ರೂ. ಮೌಲ್ಯದ ಪಾನ್ ಮಸಾಲಾ, ತಂಬಾಕು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ, ಮೂಟೆಗಟ್ಟಲೇ ಕಲಬೆರಕೆ ಗುಟ್ಕಾ ಸಾಮಗ್ರಿ ಸೀಜ್ ಮಾಡಿದ್ದಾರೆ. ಗಾಂಧಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯ ಚಿದ್ರಿಬುತ್ತಿ ಬಸವಣ್ಣ ಹತ್ತಿರದ ಮನೆಯಲ್ಲಿ ಅಕ್ರಮವಾಗಿ ಪಾನ್ ಮಸಾಲಾ, ಕಲಬೆರಕೆ ಮಾಡಿದ ಗುಟ್ಕಾ ಸಾಮಗ್ರಿಯನ್ನು ಸಂಗ್ರಹಿಸಿಡಲಾಗಿತ್ತು.
ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಶೇಡ್ ಮೇಲೂ ಪೊಲೀಸರು ದಾಳಿ ಮಾಡಿದ್ದಾರೆ. ಹೊರಗೆ ‘ಟು ಲೆಟ್’ ಬೋರ್ಡ್ ಹಾಕಿ, ಒಳಗಡೆ ಪರವಾನಗಿ ಇಲ್ಲದೆ, ಮಾನವನ ಆರೋಗ್ಯಕ್ಕೆ ಹಾನಿಕಾರಕವಾದಂಥ ರಾಸಾಯನಿಕ ಪದಾರ್ಥಗಳನ್ನ ಸಂಗ್ರಹಿಸಿಟ್ಟಿರುವುದು ಕಂಡುಬಂದಿತ್ತು. ಸದ್ಯ 43.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸೀಜ್ ಮಾಡಿದ್ದಾರೆ. 2 ಪ್ರಕರಣಗಳಲ್ಲಿ 8 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತರಲ್ಲಿ ಹೆಚ್ಚಿನವರು ಹೊರ ರಾಜ್ಯದವರು!
ಬಂಧಿತರು ಹೈದರಾಬಾದ್ ಮೂಲದ ತನ್ವೀರ್, ಬೀದರ್ ಮೂಲದ ರಿಜ್ವಾನ್, ಬೀದರ್ ಮೂಲದ ತನ್ವೀರ್ ಶೇರಿಕಾರ್, ಮಣಿಪುರ ಮೂಲದ ಯಾಸೀನ್, ಮಣಿಪುರ ಮೂಲದ ಎಂ.ಡಿ. ಸಿರಾಜ್, ಮಣಿಪುರ ಮೂಲದ ಎಂಡಿ ಶರೀಫ್, ಮಣಿಪುರ ಮೂಲದ ಎಂಡಿ. ಅನಾಸ್, ಮಣಿಪುರ ಮೂಲದ ಎಂಡಿ ರೋಹಿತ್, ಮಣಿಪುರ ಮೂಲದ ಚೇಸಾನ್, ಮಣಿಪುರ ಮೂಲಕ ಮೊಹ್ಮದ್ ಅನಾಸ್, ಬೀದರ್ ಮೂಲದ ಬಸೀರುದ್ದೀನ್ ಎಂದು ಎಸ್ಪಿ ಪ್ರದೀಪ್ ಗುಂಟೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೀದರ್ ಜಿಲ್ಲೆಯ ಶೇ 60 ರಷ್ಟು ಸರ್ಕಾರಿ ಶಾಲೆಗಳಲ್ಲಿ ಇಲ್ಲ ಶೌಚಾಲಯ: ಶೌಚಕ್ಕಾಗಿ ಮನೆಗೆ ಹೋಗುವ ವಿದ್ಯಾರ್ಥಿನಿಯರು
ಬಂಧಿತರ ವಿರುದ್ಧ ಬಿಎನ್ಎಸ್ ಕಾಯ್ದೆ 2023 ರ ಕಲಂ 7, ಕೋಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟೆ ತಿಳಿಸಿದ್ದಾರೆ.
ಬೇರೆ ರಾಜ್ಯದವರು ಕರ್ನಾಟಕದಲ್ಲಿ ಬಂದು ಕಲಬೆರಕೆ ಗುಟ್ಕಾ ತಯಾರಿಸಿ, ಕೋಟಿ ಕೋಟಿ ರೂ. ಗಳಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಇನ್ನಾದರೂ ಪೊಲೀಸರು ಇಂತಹ ಖದೀಮರು ಚಿಗುರದಂತೆ ನೋಡಿಕೊಳ್ಳಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 am, Mon, 1 September 25



