
ಬೀದರ್, (ಮಾರ್ಚ್ 05): ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಗೆ ( basavakalyana police station) ಸಾವಿರಾರು ಮುಸ್ಲಿಮರು (Muslim) ಮುತ್ತಿಗೆ ಯತ್ನಿಸಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಶಿಕ್ಷಕರ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾರ್ಚ್ 3ರಂದು ಸಹಸ್ರಾರು ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ವೇಳೆ ಕೆಲವರು ಪೊಲೀಸ್ ವ್ಯಾನ್ ಮೇಲೆ ಕಲ್ಲು ತೂರಿದ್ದರು. ಇದರಿಂದ ಭಾರೀ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಘಟನೆ ಸಂಬಂಧ ಪೊಲೀಸರು, 49 ಜನರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ಈ ಪೈಕಿ 20 ಜನರನ್ನ ಬಂಧಿಸಿದ್ದಾರೆ.
ಇನ್ನು ಈ ಬಗ್ಗೆ ಬೀದರ್ ನಲ್ಲಿ ಎಸ್ಪಿ ಪ್ರದೀಪ್ ಗುಂಟೆ ಪ್ರತಿಕ್ರಿಯಿಸಿದ್ದು, ಮಾರ್ಚ 3 ರಂದು ವಾಕಿಂಗ್ ಮಾಡುತ್ತಿದ್ದಾಗ ಯುವಕರು ರಸ್ತೆ ಬದಿ ನಿಂತುಕೊಂಡ ಅಸಭ್ಯ ವರ್ತನೆ ಮಾಡಿದ್ದಾರೆ. ಅಲ್ಲದೇ 6 ಜನ ಅನ್ಯಕೋಮಿನ ಯುವಕರು ಇಬ್ಬರನ್ನು ಥಳಿಸಿದ್ದಾರೆ. ಅವರಿಗೆ ಬುದ್ದಿ ಹೇಳಲು ಹೋದ ಇಬ್ಬರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದವರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಬಂದು ಕಂಪ್ಲೀಟ್ ಕೊಟ್ಟಿದ್ದಾರೆ.ಅವರ ಕಂಪ್ಲೀಟ್ ಕೊಟ್ಟ ನಂತರ ಹಲ್ಲೆ ಮಾಡಿದ 6 ಯುವಕರನ್ನ ಬಂಧಿಸಲು ಹೋಗುತ್ತಿದ್ದಾಗ ಒಂದು ಸಮುದಾಯಕ್ಕೆ ಸೇರಿದ ಜನರ ನಮ್ಮ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಮ್ಮ ವಾಹನವನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಸಿಸಿಟಿವಿ ಆಧಾರದ ಮೇಲೆ 49 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಕಿ 22 ಜನರನ್ನ ಬಂಧಿಸಿದ್ದೇವೆ. ಇದ್ಯಾವುದು ಕೋಮ ಗಲಭೆ ಅಲ್ಲ. ಹಿಂಸೆಗೆ ಸಪೋರ್ಟ್ ಮಾಡುವ ರೀತಿ ಪೋಸ್ಟ್ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾರ್ಚ್ 3ರಂದು ಸಂಜೆ ಮುಸ್ಲಿಂ ಸಮುದಾಯದ ಶಿಕ್ಷಕರಾದ ಸೈಯದ್ ಇಮ್ರಾನ್ ಮತ್ತು ಮಹ್ಮದ್ ಆರೀಫ್ ವಾಯು ವಿಹಾರಕ್ಕೆ ತೆರಳಿದ್ದರು. ಈ ವೇಳೆ ಆರು ಜನ ಅಪರಿಚಿತ ಹಿಂದೂ ಯುವಕರು ಶಿಕ್ಷರಿಬ್ಬರ ಮೇಲೆ ಹಲ್ಲೆ ಮಾಡಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಮುಸ್ಲಿಂ ಶಿಕ್ಷಕ ಸೈಯದ್ ಇಮ್ರಾನ್ ಪ್ರಕರಣ ದಾಖಲಿಸಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರುತ್ತಿದ್ದಂತೆಯೇ ಸಾವಿರಾರು ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಹಲ್ಲೆಕೋರರನ್ನ ಬಂಧಿಸಬೇಕು ಜೊತೆಗೆ ಬಂಧಿತರನ್ನ ನಮ್ಮ ವಶಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಅಲ್ಲದೇ ಪೊಲೀಸ್ ಠಾಣೆ ಮುತ್ತಿಗೆಗೆ ಯತ್ನ ನಡೆಸಿದ್ದರು. ಪರಿಸ್ಥಿತಿ ಕೈ ಮೀರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಪೊಲೀಸರು, ಆರೋಪಿಗಳನ್ನ ಬಂಧಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ. ನೀವು ಇಲ್ಲಿಂದ ತೆರಳಿ ಎಂದು ಸಿಪಿಐ ಅಲಿಸಾಬ್ ಮನವಿ ಮಾಡಿದ್ದರು. ಎಷ್ಟೇ ಮನವಿ ಮಾಡಿದರೂ ಸಹ ಸ್ಥಳದಿಂದ ಹೋಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಉದ್ರಿಕ್ತರ ಗುಂಪು ಚದುರಿಸಿದ್ದಾರೆ. ಈ ವೇಳೆ ಉದ್ರಿಕ್ತರ ಗುಂಪು ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿದ್ದಲ್ಲದೇ ಕಲ್ಲು ತೂರಾಟ ಮಾಡಿ ಪೊಲೀಸ್ ವಾಹನಗಳಿಗೆ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಎಎಸ್‌ಐ ಮುಕ್ತಾರ್ ಪಟೇಲ್ ಎಂಬುವವರಿಗೆ ಗಾಯಗೊಂಡಿದ್ದಾರೆ.
ಉದ್ರಿಕ್ತ ಗುಂಪಿನ 49 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಕರ ಮೇಲಿನ ಹಲ್ಲೆ ಕುರಿತಂತೆ ಐವರು, ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪದಡಿ ಸುಮಾರು 21 ಜನರನ್ನ ಬಂಧಿಸಿದ್ದಾರೆ. ಅಲ್ಲದೇ, ಘಟನೆಯ ದಿನ ವಿಡಿಯೋದಲ್ಲ ಸೆರೆಯಾಗಿರುವವರನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.