ಮುಜರಾಯಿ ಇಲಾಖೆ ದೇವಸ್ಥಾನಗಳ ಗೋಶಾಲೆ ಗೋವುಗಳು ನರಕಯಾತನೆ ಅನುಭವಿಸುತ್ತಿವೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ!
ಮಂದಿರದ ಆವರಣದಲ್ಲಿ ಮುಜರಾಯಿ ಇಲಾಖೆಯ ಕಾಯಂ ಗೋಶಾಲೆಗಳಿವೆ. 200 ಕ್ಕೂ ಅಧಿಕ ಗೋವುಗಳು ಇಲ್ಲಿವೆ, ಭಕ್ತರು ತಂದು ಬಿಡುವ ಹರಕೆ ಜಾನುವಾರಗಳ ಜೊತೆಗೆ, ಕೆಲ ರೈತರೂ ಕೂಡಾ ಆಕಳುಗಳಿಗೆ ಮೇವೂ ಹಾಕಲು ಸಾಧ್ಯವಾಗದವರು ಇಲ್ಲಿ ತಮ್ಮ ಗೋವುಗಳನ್ನ ತಂದು ಬಿಟ್ಟಿದ್ದಾರೆ.
ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದ ಗೋ ಶಾಲೆಯ (goshala) ಗೋವುಗಳು ನರಕಯಾತನೆ ಅನುಭವಿಸುತ್ತಿವೆ. ಭಕ್ತರು ಹರಕೆ ರೂಪದಲ್ಲಿ, ವರ್ಷಕ್ಕೆ ನೂರಾರು ಗೋವುಗಳನ್ನ (cow) ದೇವಸ್ಥಾನಕ್ಕೆ (temple) ಕೊಡುವುದು ಇಲ್ಲಿ ರೂಢಿಯಲ್ಲಿದೆ. ಅಂತಹ ಹಸುಗಳ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಮುಜರಾಯಿ ಇಲಾಖೆಯ ಅಧಿಕಾರಿಗಳದ್ದಾಗಿದ್ದರೂ ಅವರು ಕಂಡುಕಾಣದಂತೆ ಕುಳಿತ್ತಿದ್ದಾರೆ. ಹೀಗಾಗಿ ಹಸುಗಳಿಗೆ ಮೇವು ಆಹಾರವಿಲ್ಲದೆ ರೋಗದಿಂದ ಮೂಕ ಪ್ರಾಣಿಗಳು ಸಾವನಪ್ಪುತ್ತಿವೆ. ಅವ್ಯವಸ್ಥೆ ಆಗರವಾದ ಮುಜರಾಯಿ ಇಲಾಖೆ (muzrai department) ವ್ಯಾಪ್ತಿಯಲ್ಲಿ ಬರುವ ದೇವಸ್ಥಾನದ ಗೋ ಶಾಲೆಗಳು. ಹೌದು ಬೀದರ್ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ದೇವಸ್ಥಾನಗಳು ಬರುತ್ತವೆ. ಈ ಪೈಕಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿರುವ ಸುಪ್ರಸಿದ್ಧ ಮೈಲಾರ ಮಲ್ಲಣ್ಣ ದೇವಸ್ಥಾನ ಬೀದರ್ (bidar) ತಾಲೂಕಿನ ಹೊನ್ನೀಕೇರಿ ಸಿದ್ಧೇಶ್ವರ ದೇವಸ್ಥಾನ ಹೆಚ್ಚು ಪ್ರಸಿದ್ಧಿಯನ್ನ ಪಡೆದುಕೊಂಡಿವೆ.
ಈ ದೇವಸ್ಥಾನಕ್ಕೆ ಪ್ರತಿ ವರ್ಷ ನೂರಾರು ಸಂಖ್ಯೆಯಲ್ಲಿ ಗೋವುಗಳನ್ನ ಭಕ್ತರು ಹರಕೆ ರೂಪದಲ್ಲಿ ಇಲ್ಲಿಗೆ ತಂದು ಕೊಡುತ್ತಾರೆ. ಇಲ್ಲಿಗೆ ಭಕ್ತರು ಕೊಟ್ಟಿರುವ ಆಕಳು, ಕರುಗಳನ್ನ ಆರೈಕೆ ಮಾಡಬೇಕಾದ ಜವಾಬ್ದಾರಿ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರಿಗಿದೆ. ಆದರೆ ದೇವಸ್ಥಾನಕ್ಕೆ ಪ್ರತಿ ವರ್ಷವೂ ದೇಣಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಹಣ ಬರುತ್ತದೆ. ಆ ಹಣವನ್ನ ಹೇಗೆ ಖರ್ಚು ಮಾಡಬೇಕು ಅನ್ನೋದರಲ್ಲಿಯೇ ಮುಜರಾಯಿ ಇಲಾಖೆಯ ಅಧಿಕಾರಿಗಳು ಇದ್ದಾರೆಯೇ ಹೊರತು ಇಲ್ಲಿನ ದೇವಸ್ಥಾನದಲ್ಲಿರುವ ಗೋ ಶಾಲೆಯ ಗೋವುಗಳಿಗೆ ಮೇವು, ನೀರು, ಹಾಗೂ ಅವುಗಳು ಖಾಯಿಲೆ ಬಿದ್ದರೆ ಚಿಕಿತ್ಸೆ ಕೂಡಾ ಕೊಡಿಸುತ್ತಿಲ್ಲ. ಇನ್ನು ಎರಡೂ ದೇವಸ್ಥಾನದಲ್ಲಿ ಸುಮಾರು 200ಕ್ಕೆ ಹೆಚ್ಚು ಗೋವುಗಳಿದ್ದು ಅವುಗಳನ್ನ ಆರೈಕೆ ಮಾಡದಿರುವುದರಿಂದ ನೂರಾರು ಗೋವುಗಳು ಸಾವನ್ನಪ್ಪಿವೆ. ಆದರೂ ಯಾರೊಬ್ಬರು ಕೂಡಾ ಗೋರಕ್ಷಣೆ ಮಾಡುತ್ತಿಲ್ಲ. ಇಲ್ಲಿನ ಆಕಳುಗಳು ರೋಗದಿಂದ ಬಳಲುತ್ತಾ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೂ ಅವುಗಳಿಗೆ ಸರಿಯಾದ ಚಿಕಿತ್ಸೆ ಕೂಡಾ ಕೊಡಿಸುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಇನ್ನು ಈ ಮಂದಿರದ ಆವರಣದಲ್ಲಿ ಮುಜರಾಯಿ ಇಲಾಖೆಯ ಕಾಯಂ ಗೋಶಾಲೆಗಳಿವೆ. 200 ಕ್ಕೂ ಅಧಿಕ ಗೋವುಗಳು ಇಲ್ಲಿವೆ, ಭಕ್ತರು ತಂದು ಬಿಡುವ ಹರಕೆ ಜಾನುವಾರಗಳ ಜೊತೆಗೆ, ಕೆಲ ರೈತರೂ ಕೂಡಾ ಆಕಳುಗಳಿಗೆ ಮೇವೂ ಹಾಕಲು ಸಾಧ್ಯವಾಗದವರು ಇಲ್ಲಿ ತಮ್ಮ ಗೋವುಗಳನ್ನ ತಂದು ಬಿಟ್ಟಿದ್ದಾರೆ. ಇಲ್ಲಿನ ಆಕಳುಗಳಿಗೆ ಮೇವಿನ ಕೊರತೆಯಿಂದ ಜಾನುವಾರಗಳಿಗೆ ಬಂದಿರುವ ಕಾಯಿಲೆಯಿಂದ ಆಕಳು ಸಾವಿನ ಕದ ತಟ್ಟುತ್ತಿವೆ.
ಗೋವುಗಳ ಸಾವಿಗೆ ಅಧಿಕಾರಿಗಳ ದಿವ್ಯನಿರ್ಲಕ್ಷವೇ ಕಾರಣ ಅನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಸುಮಾರು ದಿನಗಳಿಂದ ಆಕಳುಗಳು, ಕರುಗಳು ಒಂದೊಂದಾಗಿ ಸಾವನ್ನಪ್ಪುತ್ತಿದ್ದರೂ ಸಹಾಯಕ ಆಯಕ್ತರಾಗಲಿ, ತಹಶೀಲ್ದಾರ್ ಆಗಲಿ, ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಬಂದು ಗೋವುಗಳ ಸಾವಿಗೆ ಕಾರಣ ತಿಳಿಯುವ ಮನಸ್ಸು ಮಾತ್ರ ಮಾಡುತ್ತಿಲ್ಲ. ಹೊನ್ನಿಕೇರಿ ದೇವಸ್ಥಾನವೊಂದೇ ಅಲ್ಲ ಬೀದರ್ ಜಿಲ್ಲೆಯ ಮೈಲಾರ ಮಲ್ಲಣ್ಣ ದೇವಸ್ಥಾನ, ಗೋ ಶಾಲೆಯೂ ಕೂಡಾ ಗೋವುಗಳ ಪರಿಸ್ಥಿತಿ ಹೇಳತೀರದಾಗಿದೆ.
Also Read:
ವಿಧಾನಸೌಧದಲ್ಲಿ ಸಿಎಸ್-ಡಿಐಜಿಗೆ 3 ಪುಟಗಳ ದೂರು ಸಲ್ಲಿಸಿ, 15 ನಿಮಿಷ ಮಾತುಕತೆ ನಡೆಸಿದ ರೋಹಿಣಿ ಸಿಂಧೂರಿ ಹೇಳಿದ್ದೇನು?
ಇಲ್ಲಿನ ಗೋವುಗಳ ಸ್ಥಿತಿಯನ್ನ ನೋಡಿದರೆ ಎಂಥವರ ಮನಸ್ಸು ಕೂಡಾ ಮರುಗದೇ ಇರಲಾರದು. ಎಲುಬುಗಳೇ ಕಾಣುವ ದೇಹ, ನೋವಿನಿಂದ ನರಳಾಡುತ್ತಿರುವ ಆಕಳು ಕರುಗಳು. ಇಲ್ಲಿನ ಪರಿಸ್ಥಿತಿಯನ್ನ ಕಂಡ ಭಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಗೋವುಗಳನ್ನ ಹಿಂದೂ ಸಮಾಜದಲ್ಲಿ ದೇವರಂತೆ ಪೂಜೆ ಮಾಡುತ್ತೇವೆ ಅವುಗಳನ್ನ ರಕ್ಷಣೆ ಮಾಡುತ್ತೇವೆ. ಆದರೆ ಅಂತಹ ಗೋವುಗಳ ನರಕಯಾತನೆ ನಮಗೆ ನೋಡಲು ಆಗುತ್ತಿಲ್ಲ. ಆಡಳಿತ ಮಂಡಳಿ ಗೋವುಗಳಿಗೆ ಮೇವು ಹಾಕಬೇಕು, ಕಾಯಿಲೆಯಿಂದ ಬಳಲುತ್ತಿರುವ ಆಕಳುಗಳಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಮೈಲಾರ ಮಲ್ಲಣ್ಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿನ ಭಕ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ವರದಿ: ಸುರೇಶ್ ನಾಯಕ್, ಟಿವಿ9, ಬೀದರ್