ಬೀದರ್​: ಆಲಿಕಲ್ಲು ಮಳೆಯಿಂದ ಮಾವಿನ ಬೆಳೆ ಸಂಪೂರ್ಣ ನಾಶ; ಸಹಾಯದ ನಿರೀಕ್ಷೆಯಲ್ಲಿ ರೈತ

ಆಲಿಕಲ್ಲು ಮಳೆಯಿಂದಾಗಿ ಹಣ್ಣುಗಳ ರಾಜಾ ಮಾವು ಬೆಳೆಸಿದ ರೈತರು ಕಂಗಾಲಾಗಿದ್ದಾರೆ. ಮಾವು ಚೆನ್ನಾಗಿ ಬಿಟ್ಟಿದ್ದರೂ, ಮಾವಿನ ಕಾಯಿಗೆ ಆಲಿಕಲ್ಲು ತಾಗಿದ್ದರಿಂದ ಕೆಟ್ಟು ಹೋಗಿವೆ. ಇದರಿಂದಾಗಿ ಮಾವಿನ ಗಿಡ ಪೋಷಣೆ ಮಾಡಿದ ಹಣ ಕೂಡ ರೈತರಿಗೆ ಬಂದಿಲ್ಲ. ಮಾವಿನ ಫಸಲು ಚೆನ್ನಾಗಿದ್ದರೂ, ಆಲಿಕಲ್ಲು ಮಳೆಯಿಂದಾಗಿ ಕಾಯಿಗಳು ಕೆಟ್ಟು ಹೋಗಿದ್ದು ಮಾವು ಬೆಳೆಗಾರರನ್ನ ಸಂಕಷಟಕ್ಕೆ ತಳ್ಳಿವೆ. 

ಬೀದರ್​: ಆಲಿಕಲ್ಲು ಮಳೆಯಿಂದ ಮಾವಿನ ಬೆಳೆ ಸಂಪೂರ್ಣ ನಾಶ; ಸಹಾಯದ ನಿರೀಕ್ಷೆಯಲ್ಲಿ ರೈತ
ಮಾವಿನ ಬೆಳೆ ಬೆಳೆದು ಕಂಗಾಲಾದ ರೈತ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 16, 2023 | 6:53 AM

ಬೀದರ್​: ಜಿಲ್ಲೆಯು ಮಾವು ಬೆಳೆಯಲು, ಭೂಮಿ ಹಾಗೂ ಹವಾಮಾನ ಉತ್ತಮ ಎಂದು ಗುರುತಿಸಲಾಗಿದೆ. ಹತ್ತಾರು ವರ್ಷಗಳಿಂದ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ರೈತರು ಕಬ್ಬು, ತರಕಾರಿ ಇತರೆ ಬೆಳೆಯನ್ನ ಬೆಳೆಯುತ್ತಿದ್ದರು. ಆದರೆ, ನೀರಿನ ಕೊರತೆ ಹಿನ್ನೆಲೆಯಲ್ಲಿ ಆರೇಳು ವರ್ಷದಿಂದ ಕೆಲವು ಬೆಳೆಗಳನ್ನ ಬದಿಗೊತ್ತಿ ಜಿಲ್ಲೆಯಲ್ಲಿ ಮಾವು ಬೆಳೆ(Mango Crop)ಯಲು ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಈ ವರ್ಷ ಜಿಲ್ಲೆಯಲ್ಲಿ 2100 ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ದೀರ್ಘಾವಧಿ ಮಾವು ಬೆಳೆಯುತ್ತಿದ್ದಾರೆ. ಇನ್ನು ಕಳೆದ ಮೂರು ವರ್ಷದಿಂದ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಾವು ಬೆಳೆ ಬಂದಿರಲಿಲ್ಲ. ಆದರೆ, ಈ ವರ್ಷ ಒಂದು ಗಿಡಕ್ಕೆ ನೂರಾರು ಖಾಯಿಗಳು ಬಿಟ್ಟಿದ್ದು ಮಾವಿನ ಕಾಯಿ ಹೆಚ್ಚಾಗಿ ಗಿಡಗಳು ಬಾಗಿದ್ದವು. ಇದರಿಂದ ಮಾವು ಬೆಳೆಗಾರರು ಖುಷಿಯಾಗಿದ್ದರು. ಆದರೆ ಎರಡು ವಾರದ ಹಿಂದೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಆಲಿಕಲ್ಲು ಮಾವಿನ ಕಾಯಿಗೆ ತಾಗಿದ್ದರಿಂದ ಕೆಲವು ಮಾವುಗಳು ಉದುರಿದರೆ, ಇನ್ನೂ ಕೆಲವು ಮಾವುಗಳು ಆಲಿಕಲ್ಲು ಬಿದ್ದ ಜಾಗದಲ್ಲಿಯೇ ಕೊಳೆತುಹೋಗಿವೆ. ಇದರಿಂದಾಗಿ ಬಂಪರ್ ಮಾವು ಬೆಳೆ ನಿರಿಕ್ಷೇಯಲ್ಲಿದ್ದ ಮಾವು ಬೆಳೆದ ರೈತರಿಗೆ ನಷ್ಟವಾಗಿದ್ದು, ಮಾವಿನ ಗಿಡ ಪೋಷಣೆ ಮಾಡಿದ ಹಣವು ಕೂಡ ಬರುತ್ತಿಲ್ಲ ಎಂದು ಮಾವಿನ ತೋಟವನ್ನ ಲೀಸ್​ಗೆ ಪಡೆದವರು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಅತ್ಯಧಿಕ ರುಚಿಯಿರುವ ಮಾವುಗಳಾದ ಬೇನಿಶಾ, ಮಲ್ಲಿಕಾ, ಮಲಗೋಬಾ, ರಸಪುರಿ, ನೀಲಂ, ತೋತಾಪುರಿ ಹಾಗೂ ಇತರ ಜಾತಿಯ ಮಾವುಗಳನ್ನು ಹೆಚ್ಚಾಗಿ ಬೆಳೆಸಿದ್ದಾರೆ. ಈ ಬಾರಿ ಉತ್ತಮ ಫಸಲು ಬಂದಿದೆ ಎಂಬುವ ಖುಷಿಯಲ್ಲಿದ್ದ ಮಾವು ಬೆಳೆಗಾರರು, ತಮ್ಮ ತೋಟಗಳನ್ನು ನೆರೆಯ ತೆಲಂಗಾಣ ಮಾರಾಟಗಾರರಿಗೆ ನೀಡಿದ್ದರು. ಮಾರಾಟಗಾರರು ಕೂಡ ಮಾವಿನ ಕಾಯಿಗೆ ಒಳ್ಳೆ ಬೆಲೆ ಸಿಗುತ್ತದೆ, ಜೊತೆಗೆ ಇನ್ನೊಂದು ಕಡೆ ರೈತರಿಗೂ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ಆಲಿಕಲ್ಲು ಮಳೆಗೆ ಮಾವಿನ ಫ‌ಸಲು ಸಂಪೂರ್ಣವಾಗಿ ಹಾಳಾಗಿದೆ. ಹೀಗಾಗಿ ಮುಂಗಡ ಹಣವನ್ನು ವಾಪಸ್ಸು ಕೇಳುವ ದುಸ್ಥಿತಿ ಬಂದೆರಗಿದೆ. ರೋಗ ಬಾಧೆಯ ನಡುವೆಯೂ ಮಾವು ರೈತರ ಬದುಕಿಗೆ ನೆರವಾಗುತ್ತದೆ ಎಂಬ ಭ್ರಮೆಯಲ್ಲಿ ಸಾಲ ಸೋಲ ಮಾಡಿ, ರೋಗ ಬಾಧೆ ತಡೆಗೆ ಔಷಧ ಸಿಂಪಡಿಸಿ ಸಕಾಲಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮಳೆಯಿಂದ ಹೆಚ್ಚಿನ ತೊಂದರೆ ಅನುಭವಿಸುವಂತ್ತಾಗಿದೆ.

ಇದನ್ನೂ ಓದಿ:ರಾಮನಗರ: ಮಾವು ಬೆಳೆಯಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್​; ನಿರೀಕ್ಷಿತ ಬೆಲೆ ಸಿಗದೇ ರೈತ ಕಂಗಾಲು

ಬೆಳೆಗೆ ಅಕಾಲಿಕ ಮಳೆ ರೈತರ ಆಸೆಗೆ ತಣ್ಣೀರೆರಚಿದ್ದುಯ, ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಚುನಾವಣೆ ಇರುವುದರಿಂದಾಗಿ ರೈತರು ತಮಗಾದ ನಷ್ಟವನ್ನ ಯಾರಿಗೆ ಹೇಳಬೇಕು ಅನ್ನೋದರಲ್ಲಿ ಗೊಂದಲದಲ್ಲಿದ್ದಾರೆ. ಆದರೆ ಈಗ ಕಾಂಗ್ರೆಸ್​ ಸರಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದು, ಸಂಪುಟ ರಚನೆಯಾದ ಬಳಿಕವಾದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಬೆಳೆ ನಷ್ಟದ ಸಮೀಕ್ಷೆ ನಡೆಸಿ ಮಾವು ಬೆಳೆಗಾರರ ನಷ್ಟ ಪರಿಹಾರ ಘೋಷಿಸಿದರೆ, ಒಂದಿಷ್ಟು ಅನುಕೂಲವಾಗುತ್ತದೆ ಎಂದು ರೈತರು ಸರ್ಕಾರಕ್ಕೆ ಕೋರಿದ್ದಾರೆ.

ರೈತರ ನಷ್ಟಕ್ಕೆ ಸರಕಾರ ಕೂಡ ಸ್ಪಂದಿಸಬೇಕಿದೆ

ರೈತರ ನಷ್ಟಕ್ಕೆ ಸರಕಾರ ಕೂಡ ಸ್ಪಂದಿಸಬೇಕಿದೆ. ಯಾಕೆಂದರೆ, ಕಳೆದ ವರ್ಷ ಕೂಡ ಬೀದರ್ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ ಬಿದ್ದು ಕೋಟ್ಯಾಂತರ ರೂ ಬೆಳೆ ನಾಶವಾಗಿತ್ತು. ಆಗ ಕೂಡ ಮಳೆ ಮತ್ತು ಬಿರುಗಾಳಿ ರೈತನ ಬಾಳಲ್ಲಿ ಆಟವಾಡಿತ್ತು. ಇನ್ನೂ ನಷ್ಟ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿತ್ತು. ಜೊತೆಗೆ ಇನ್ನೂ ಕೂಡ ಆ ನಷ್ಟದ ಪರಿಹಾರ ಬಹುಭಾಗ ರೈತರಿಗೆ ಸಿಕ್ಕಿಲ್ಲ. ಇದೀಗ ಗಾಯದ ಮೇಲೆ ಬರೆ ಎಳದಂತಾಗಿದ್ದು, ಈ ಬಾರಿ ಕೂಡ ರೈತರು ಮಾವು ಜೊತೆಗೆ ಇನ್ನೀತರ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ದೇಶದ ಬೆನ್ನೆಲುಬಾದ ರೈತನಿಗೆ ದು:ಖದ ದಿನಗಳು ಮಾಯವಾಗೋದಿಲ್ಲವೇನೋ ಅನ್ನಿಸುತ್ತಿದೆ. ಸರಕಾರ ಸೂಕ್ತ ಸಂಧರ್ಭದಲ್ಲಿ ಪರಿಹಾರ ನೀಡಿ ರೈತನ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಾಗಿದೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ