ಐತಿಹಾಸಿಕ ಗಾಯಮುಖ ಗುಪ್ತಲಿಂಗ ದೇವಸ್ಥಾನದಲ್ಲಿ ಮೊದಲ ಬಾರಿಗೆ ಮಿನಿ ಜಲಪಾತ ಸೃಷ್ಟಿ: ದೇವಾಲಯಕ್ಕೆ ಪ್ರವಾಸಿಗರ ದಂಡು

ಮಳೆಯಿಂದಾಗಿ ಶಿವಲಿಂಗದ ಪಕ್ಕದಲ್ಲಿಯೇ ಮಿನಿ ಜೋಗ ಜಲಪಾತವೊಂದು ಸೃಷ್ಟಿಯಾಗಿದ್ದು ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ಐವತ್ತು ಅಡಿ ಎತ್ತರದಿಂದ ಬೀಳುವ ನೀರಿನಲ್ಲಿ ಮಿಂದೆದ್ದು, ಫೋಟೋ ಕ್ಲಿಕ್ಕಿಸಿಕೊಂಡು ಜನ ಖಷಿ ಪಡುತ್ತಿದ್ದಾರೆ.

ಐತಿಹಾಸಿಕ ಗಾಯಮುಖ ಗುಪ್ತಲಿಂಗ ದೇವಸ್ಥಾನದಲ್ಲಿ ಮೊದಲ ಬಾರಿಗೆ ಮಿನಿ ಜಲಪಾತ ಸೃಷ್ಟಿ: ದೇವಾಲಯಕ್ಕೆ ಪ್ರವಾಸಿಗರ ದಂಡು
ಗಾಯಮುಖ ಗುಪ್ತಲಿಂಗ ದೇವಸ್ಥಾನ
Edited By: ಆಯೇಷಾ ಬಾನು

Updated on: Sep 15, 2022 | 12:18 PM

ಬೀದರ್: ಐತಿಹಾಸಿಕ ಗಾಯಮುಖ ಗುಪ್ತಲಿಂಗ ದೇವಸ್ಥಾನ ತನ್ನದೆಯಾದ ಇತಿಹಾಸ ಹೊಂದಿದೆ. ಕಾಡಿನ ಅಂಚಿನಲ್ಲಿರುವ ಈ ದೇವಸ್ಥಾನ ಹತ್ತಾರು ಪವಾಡಗಳಿಗೂ ಸಾಕ್ಷಿಯಾಗಿದೆ. ಎಂಥಹ ಬೇಸಿಗೆಯಲ್ಲಿಯೂ ನಂದಿಯ ಬಾಯಿಂದ ನೀರು ಬೀಳುವುದು ಇಲ್ಲಿ ನಿಂತಿಲ್ಲ. ಈಗ ಮಳೆಯಿಂದಾಗಿ ಶಿವಲಿಂಗದ ಪಕ್ಕದಲ್ಲಿಯೇ ಮಿನಿ ಜೋಗ ಜಲಪಾತವೊಂದು ಸೃಷ್ಟಿಯಾಗಿದ್ದು ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ಐವತ್ತು ಅಡಿ ಎತ್ತರದಿಂದ ಬೀಳುವ ನೀರಿನಲ್ಲಿ ಮಿಂದೆದ್ದು, ಫೋಟೋ ಕ್ಲಿಕ್ಕಿಸಿಕೊಂಡು ಜನ ಖಷಿ ಪಡುತ್ತಿದ್ದಾರೆ.

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಬಳಿಯ ಬೆಟ್ಟದಲ್ಲಿ ಸುಕ್ಷೇತ್ರ ಗಾಯಮುಖ ಗುಪ್ತಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯ ಐದಾರು ಶತಮಾನದಷ್ಟೂ ಪುರಾತನವಾಗಿದ್ದು ಈ ಗುಪ್ತಲಿಂಗವಿರುವ ಬೆಟ್ಟ ಹಲವಾರು ವಿಸ್ಮಯಗಳನ್ನೊಳಗೊಂಡಿದೆ. ಪಕ್ಕದ ಆಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ಇನ್ನೂ ಗುಪ್ತಲಿಂಗ ದೇವಸ್ಥಾನದ ಸುತ್ತಮುತ್ತ ಸಾಕಷ್ಟೂ ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದ್ದು ದೇವಸ್ಥಾನದಲ್ಲಿ ನೀರಿನ ಝರಿ ಇದುವರೆಗೂ ಬತ್ತಿರುವ ಉದಾಹರಣೆಗಳೇ ಇಲ್ಲ. ಜಿಲ್ಲೆಯಲ್ಲಿ ಈ ವರ್ಷ ಮಳೆ ಉತ್ತಮವಾಗಿದ್ದು ಗಾಯಮುಖಿ ದೇವಸ್ಥಾನದ ಗುಪ್ತಲಿಂಗದ ಕೂಗಳೆತೆಯಲ್ಲಿಯೇ ಮಿನಿ ಜಲಪಾತವೊಂದು ಸೃಷ್ಟಿಯಾಗಿದೆ. ಇಲ್ಲಿಗೆ ಬರುವ ಭಕ್ತರು ಈ ಜಲಪಾತವನ್ನ ನೋಡಿ ಖುಷಿ ಪಡುತ್ತಿದ್ದಾರೆ. ಅಷ್ಟೇ ಅಲ್ಲದೆ ಐವತ್ತು ಅಡಿ ಎತ್ತರದಿಂದ ಬೀಳುವ ನೀರಿನಲ್ಲಿ ಸ್ನಾನ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೋಟೋ ತೆಗೆಸಿಕೊಂಡು ಖಷಿ ಪಡುತ್ತಿದ್ದಾರೆ. ಇನ್ನೂ ಈ ಮಿನಿ ಜಲಪಾತ ಇದೆ ಮೊದಲ ಸಲ ಇಲ್ಲಿಂದ ನೀರು ಬರುತ್ತಿದೆ. ಇದರಿಂದಾಗಿ ಇಲ್ಲಿಗೆ ಬರುವ ಭಕ್ತರಿಗೂ ಕೂಡ ಇದು ಸಹಜವಾಗಿಯೇ ಖುಷಿ ಕೊಡುತ್ತಿದೆ.

ದೇವಸ್ಥಾನದ ಇತಿಹಾಸ

ಈ ದೇವಸ್ಥಾನದ ಬಗ್ಗೆ ಹೇಳೋದಾದರೆ ಈ ದೇವಸ್ಥಾನ ಹತ್ತಾರು ಅಚ್ಚರಿಗಳನ್ನ ಒಳಗೊಂಡಿದೆ. ಬೇಸಿಗೆ ಬಂದರೆ ಸಾಕು ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತದೆ. ಬಾವಿ, ಬೋರ್ ವೆಲ್ ನಲ್ಲಿಯೂ ನೀರು ಖಾಲಿಯಾಗಿ ಜನ, ಪ್ರಾಣೀ ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುತ್ತವೆ. ಆದರೇ ಆ ದೇವಸ್ಥಾನದ ಬೆಟ್ಟದಲ್ಲಿ ಮಾತ್ರ ನೀರಿನ ಸೇಲೆ ನಿರಂತರವಾಗಿದ್ದು ಶತಮಾನಗಳಿಂದ ಎಂದೂ ಕೂಡಾ ಬೆಟ್ಟದಿಂದ ನೀರು ಬರುವುದು ನಿಂತಿಲ್ಲ. ಯಾವ ಭಾಗದಿಂದ ನೀರು ಹರಿದು ಬರುತ್ತದೆಂಬುವುದು ಮಾತ್ರ ಇಲ್ಲಿ ನಿಗೂಢವಾಗಿದೆ.

ಗುಹೆಯಲ್ಲಿರುವ ಶಿವಲಿಂಗದ ಮೂಲಕವೂ ನೀರು ಹರಿದು ಬರುವುದು ಕೂಡ ಇಲ್ಲಿನ ವಿಶೇಷವಾಗಿದೆ. ಇಲ್ಲಿನ ನೀರಿನ ಝರಿ ದಿನದ 24 ಗಂಟೆಯೂ ನೀರು ಧುಮ್ಮಿಕ್ಕುತ್ತದೆ. ಇಲ್ಲಿ ಬೆಟ್ಟದ ಅಂಚಿನಿಂದ ಬರುವ ನೀರು ನಂದಿ ಬಾಯಿಯಿಂದ ಕಿರು ಕಲ್ಯಾಣಿಗೆ ಬಂದು ಬೀಳುತ್ತದೆ. ನೀರಿನ ಹರಿವು ಸದಾ ಒಂದೇ ಸಮನಾಗಿರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇರದ ಕಾಲದಲ್ಲಿ ಹೆಚ್ಚಿನವರು ವಾಹನಗಳಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಇಲ್ಲಿಗೆ ಬಂದು ನೀರು ತುಂಬಿಕೊಂಡು ಹೋಗುತ್ತಿದ್ದರು ಎಂದು ಇಂದಿನ ಕಾಲದ ಹಿರಿಯರು ಹೇಳುತ್ತಾರೆ. ಆದರೀಗ ಮನೆ ಮನೆಗೆ ನೀರು ಬರುತ್ತಿರುವುದರಿಂದ ದೇವಸ್ಥಾನದಿಂದ ನೀರು ತೆಗೆಕೊಂಡು ಹೋಗುವುದು ಈಗ ನಿಂತಿದೆ. ದೇವಸ್ಥಾನಕ್ಕೆ ಬರುವವರು, ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ.

Gayamukh Guptalinga temple (2)

ಪ್ರಾಣಿ ಪಕ್ಷಿಗಳ ನೀರಿನ ದಾಹ ಕೂಡ ಈ ಸ್ಥಳ ತಣಿಸುತ್ತಿದೆ. ಇಲ್ಲಿಗೆ ಬರುವ ಭಕ್ತರು ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ ಜೊತೆಗೆ ನೀರನ್ನ ಔಷಧಿ ರೂಪದಲ್ಲಿಯೂ ಪ್ರತಿನಿತ್ಯ ಕುಡಿಯುವುದರಿಂದ ದೇಹದಲ್ಲಿರುವ ಖಾಲಿಗಳು ವಾಸಿಯಾಗುತ್ತದೆ. ಜೊತೆಗೆ ಇಲ್ಲಿನ ನೀರು ಚರ್ಮರೋಗದ ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆಂಬ ಭಾವನೆ ಇಲ್ಲಿಗೆ ಬರುವ ಭಕ್ತರದ್ದು. ಇಲ್ಲಿನ ನೀರನ್ನು ಕುಡಿದರೆ ಮತ್ತು ಸ್ನಾನ ಮಾಡಿದರೆ ರೋಗ ವಾಸಿಯಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಇನ್ನೂ ಬೆಸಿಗೆ, ಮಳೆಗಾಲ, ಚಳಿಗಾಲ ಯಾವುದೆ ಋತುವಿನಲ್ಲಿಯೂ ಇಲ್ಲಿಗೆ ಬಂದರೆ ಸಾಕು ಇಲ್ಲಿ ನೀರು ನಿರಂತರವಾಗಿ ಹರಯುತ್ತಲೇ ಇರುತ್ತದೆ. ಹೀಗಾಗಿ ಈ ದೇವಾಲಯ ಭಕ್ತರನ್ನ ಸೆಳೆಯುತ್ತಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗುಪ್ತಲಿಂಗನ ದರ್ಶನ ಪಡೆಯಲು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇಲ್ಲಿನ ಐತಿಹಾಸಿಕ ದೇಸ್ಥಾನದ ನೀರು ಇಲ್ಲಿನ ಭಕ್ತರನ್ನ ಸೆಳೆಯುತ್ತಿರುವುದರ ಜೊತೆಗೆ ಭಕ್ತರ ಅನೇಕ ರೋಗಗಳನ್ನ ರಾಮಬಾಣದಂತೆ ಕೆಲಸ ಮಾಡುತ್ತಿದೆ ಎಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಿದ್ದಾರೆ.

ವರದಿ: ಸುರೇಶ್ ನಾಯಕ್, ಟಿವಿ9 ಬೀದರ್

Published On - 12:18 pm, Thu, 15 September 22

Follow Us