ನಡೆಯದ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ನಿರ್ಲಕ್ಷ್ಯ: ಇದು ನಿಷ್ಕ್ರಿಯ ಸರ್ಕಾರ ಎಂದ ಈಶ್ವರ ಖಂಡ್ರೆ
ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವರನ್ನೇ ನೇಮಕ ಮಾಡಿಲ್ಲ. ಸರ್ಕಾರ ನಿಷ್ಕ್ರಿಯವಾಗಿರುವುದು ಇದರಿಂದಲೇ ತಿಳಿಯುತ್ತದೆ ಎಂದರು.
ಬೀದರ್: ಕರ್ನಾಟಕದ ಅಧಿಕಾರರೂಢ ಬಿಜೆಪಿ ಸರ್ಕಾರವು ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿದ್ದು, ರಾಜ್ಯದ ಪ್ರಗತಿಯನ್ನು ಮರೆತಿದೆ. ಪ್ರತಿ ಮೂರು ತಿಂಗಳಿಗೆ ಒಂದು ಸಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕು. ಆದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಈವರೆಗೆ ಒಮ್ಮೆಯೂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆದೇ ಇಲ್ಲ ಎಂದು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವರನ್ನೇ ನೇಮಕ ಮಾಡಿಲ್ಲ. ಸರ್ಕಾರ ನಿಷ್ಕ್ರಿಯವಾಗಿರುವುದು ಇದರಿಂದಲೇ ತಿಳಿಯುತ್ತದೆ ಎಂದರು.
ಬಹುಶಃ ಮುಂದಿನ ಚುನಾವಣೆವರೆಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವುದಿಲ್ಲ ಎನಿಸುತ್ತದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ, ಅಧಿಕಾರದ ಬಲ ತೋರಿಸಿದರು. ಆದರೂ ಪರಿಷತ್ ಚುನಾವಣೆಯಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಬಿಜೆಪಿ ಸರಕಾರ ಆಂತರಿಕ ಕಚ್ವಾಟದಲ್ಲಿ ಸಂಪೂರ್ಣವಾಗಿ ರಾಜ್ಯದ ಪ್ರಗತಿಯನ್ನು ಮರೆತಿದೆ. ಬೆಂಗಳೂರು ಉಸ್ತುವಾರಿ ಬೇಕು, ಬೆಳಗಾವಿ ಉಸ್ತುವಾರಿ ಬೇಕು ಎನ್ನುವ ಕಚ್ಚಾಟದಲ್ಲಿಯೇ ಕಾಲ ಕಳೆಯುತ್ತಿದೆ. ಈವರೆಗೂ ಸರ್ಕಾರವು ರಾಜ್ಯಗಳಿಗೆ ಉಸ್ತುವಾರಿ ಸಚಿವರನ್ನೇ ನೇಮಿಸಿಲ್ಲ. ಆಡಳಿತ ನಿಷ್ಕ್ರಿಯಗೊಂಡಿದೆ ಎಂದು ಆರೋಪ ಮಾಡಿದರು.
ಮುಂದಿನ ವಿಧಾನಸಭೆ ಚುನಾವಣೆಯವರೆಗೂ ಉಸ್ತುವಾರಿ ಸಚಿವರ ನೇಮಕ ಮಾಡುವುದಿಲ್ಲ ಎನಿಸುತ್ತದೆ. ಒಂದು ಕಡೆ ಪ್ರವಾಹ, ಒಂದು ಕಡೆ ಕೊರೊನಾ ಇದೆ. ರೈತರಿಗೆ ಪರಿಹಾರದ ಹಣ ಬಂದಿಲ್ಲ. ಸರ್ಕಾರವೂ ಈ ಕುರಿತು ತಲೆಕೆಡಿಸಿಕೊಂಡಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಸರ್ಕಾರವು ತಕ್ಷಣ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಜನ ಸಿಡಿದೆಳುತ್ತಾರೆ. ಏನಾದರೂ ಅನಾಹುತವಾದರೆ ಅದಕ್ಕೆ ಸರಕಾರವೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು
ಹಿಂದೆ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ಅವಧಿಯಲ್ಲಿ ರಾಜ್ಯದಲ್ಲಿ ನೀರಾವರಿಗಾಗಿ ₹ 51 ಸಾವಿರ ಕೋಟಿ ಖರ್ಚು ಮಾಡಿದ್ದೆವು. ಆದರೆ ಬಿಜೆಪಿ ಸರ್ಕಾರವು ಮೇಕೆದಾಟು ಯೋಜನೆ ಜಾರಿಗೆ ವಿಳಂಬ ಮಾಡುತ್ತಿದೆ. ಬೇಗ ಮೇಕೆದಾಟು ಯೋಜನೆ ಕಾಮಗಾರಿ ಮುಗಿಸಿ ಎಂದು ಎಲ್ಲರೂ ಹೇಳುತ್ತಿದ್ದೇವೆ. ಆದರೂ ವಿಳಂಬಮಾಡಲಾಗುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ಕಾರದಲ್ಲಿ ವರ್ಗಾವಣೆ ಧಂದೆ ಜೋರಾಗಿದೆ. ಎಲ್ಲ ಹಂತಗಳಲ್ಲಿಯೂ ಶೇ 40ರ ಕಮಿಷನ್ ದಂಧೆ ನಡೆಯುತ್ತಿದೆ ಎಂದು ದೂರಿದರು.
ಇದನ್ನೂ ಓದಿ: ನಾನು ಬದುಕಿರುವವರೆಗೂ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡಲು ಬಿಡುವುದಿಲ್ಲ: ಕಾಂಗ್ರೆಸ್ ನಾಯಕ ರಶೆದ್ ಖಾನ್ ಇದನ್ನೂ ಓದಿ: ಆಗ ಸುಮ್ಮನಿದ್ದ ಕಾಂಗ್ರೆಸ್ ನಾಯಕರಿಗೆ ಈಗೇಕೆ ಉತ್ಸಾಹ, ಮೇಕೆದಾಟು ಇವರಿಗೆ ವ್ಯಾಪಾರ: ಕಾಂಗ್ರೆಸ್, ಬಿಜೆಪಿ ವಿರುದ್ಧ ರೇವಣ್ಣ ವಾಗ್ದಾಳಿ