AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಗಗನಕ್ಕೇರಿದ ಸಿಮೆಂಟ್, ಸ್ಟೀಲ್ ದರ; ಅರ್ಧಕ್ಕೆ ನಿಂತ ನಿರ್ಮಾಣ ಹಂತದಲ್ಲಿದ್ದ ಮನೆಯ ಕಾಮಗಾರಿ

ಕಳೆದ 8-10 ದಿನಗಳಲ್ಲಿ ಪ್ರತಿ ಚೀಲದ ಸಿಮೆಂಟ್ ದರ 50-100 ರೂಪಾಯಿ ಹೆಚ್ಚಳವಾಗಿದೆ. ಹೀಗೆ ದಿಢೀರ್ ಎಂದು ಸಿಮೆಂಟ್ ದರ ಹೆಚ್ಚಳವಾಗಿರುವುದು ಮನೆ ನಿರ್ಮಾಣ ಮಾಡುತ್ತಿರುವವರಿಗೆ ದೊಡ್ಡ ಹೊಡೆತ ಬಿದ್ದಿದೆ. ಸಿಮೆಂಟ್ ಮಾತ್ರವಲ್ಲ ಸ್ಟಿಲ್ ದರದಲ್ಲೂ ಏರಿಕೆಯಾಗಿದೆ.

ಬಳ್ಳಾರಿ: ಗಗನಕ್ಕೇರಿದ ಸಿಮೆಂಟ್, ಸ್ಟೀಲ್ ದರ; ಅರ್ಧಕ್ಕೆ ನಿಂತ ನಿರ್ಮಾಣ ಹಂತದಲ್ಲಿದ್ದ ಮನೆಯ ಕಾಮಗಾರಿ
ಮನೆ ನಿರ್ಮಾಣ
TV9 Web
| Updated By: preethi shettigar|

Updated on: Oct 25, 2021 | 8:08 AM

Share

ಬಳ್ಳಾರಿ: ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಕನಸು ಇರುತ್ತದೆ. ಇದಕ್ಕಾಗಿ ಸಾಲ ಮಾಡಿಯಾದರೂ ಹೊಸದಾದ ಮನೆಯೊಂದು ನಿರ್ಮಾಣ ಮಾಡಿಕೊಳ್ಳುತ್ತಾರೆ. ಹೀಗೆ ಕನಸು ಕಂಡು ಮನೆ ನಿರ್ಮಾಣ ಮಾಡಿಕೊಳ್ಳಲು ಮುಂದಾದದವರಿಗೆ ಈಗ ಆತಂಕವೊಂದು ಎದುರಾಗಿದೆ. ಇದಕ್ಕೆ ಕಾರಣ ದಿನೇ ದಿನೇ ಸಿಮೆಂಟ್ ಹಾಗೂ ಸ್ಟೀಲ್ ದರ ಗಗನಕ್ಕೇರುತ್ತಿರುವುದೇ ಆಗಿದೆ.

ಪೆಟ್ರೋಲ್, ಡಿಸೇಲ್ ಆಯ್ತು. ಗೃಹ ಬಳಕೆಯ ವಸ್ತುಗಳ ದರವೂ ಹೆಚ್ಚಳವಾಯ್ತು. ಇದೀಗ ಸಿಮೆಂಟ್, ಸ್ಟೀಲ್ ದರದಲ್ಲೂ ಭಾರೀ ಹೆಚ್ಚಳವಾಗಿದೆ. ಹೌದು ದಿನದಿಂದ ದಿನಕ್ಕೆ ಡಿಸೇಲ್, ಪೆಟ್ರೋಲ್ ದರ ಹೆಚ್ಚಳವಾಗುತ್ತಿದೆ. ಮನೆಗೆ ಬೇಕಾದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರು ಮತ್ತಷ್ಟು ಸಮಸ್ಯೆಗೆ ಗುರಿಯಾಗುವಂತಾಗಿದೆ.

ಮನೆ ನಿರ್ಮಾಣ ಮಾಡಲು ಮುಂದಾಗಿರುವವರಿಗೆ ಸಿಮೆಂಟ್ ದರ ದಿಢೀರ್ ಹೆಚ್ಚಳವಾಗಿರುವುದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಏಕೆಂದರೆ ಪ್ರತಿಯೊಬ್ಬರು ಮನೆ ನಿರ್ಮಾಣ ಮಾಡಲು ಯೋಜನೆ ರೂಪಿಸುವಾಗ ಇಂತಿಷ್ಟು ಬಜೆಟ್​ನಲ್ಲಿ ಮನೆ ಪೂರ್ಣಗೊಳಿಸಬೇಕು ಎಂದು ಯೋಚನೆ ಮಾಡಿರುತ್ತಾರೆ. ಅದರಂತೆ ಮನೆ ನಿರ್ಮಾಣದ ಕೆಲಸವೂ ಆರಂಭಿಸಿದ್ದಾರೆ. ಆದರೆ ಈಗ ಕಳೆದ 8-10 ದಿನಗಳಲ್ಲಿ ಪ್ರತಿ ಚೀಲದ ಸಿಮೆಂಟ್ ದರ 50-100 ರೂಪಾಯಿ ಹೆಚ್ಚಳವಾಗಿದೆ. ಹೀಗೆ ದಿಢೀರ್ ಎಂದು ಸಿಮೆಂಟ್ ದರ ಹೆಚ್ಚಳವಾಗಿರುವುದು ಮನೆ ನಿರ್ಮಾಣ ಮಾಡುತ್ತಿರುವವರಿಗೆ ದೊಡ್ಡ ಹೊಡೆತ ಬಿದ್ದಿದೆ. ಸಿಮೆಂಟ್ ಮಾತ್ರವಲ್ಲ ಸ್ಟೀಲ್ ದರದಲ್ಲೂ ಏರಿಕೆಯಾಗಿದೆ. ಪ್ರತಿ ಕೆಜಿ ಸ್ಟೀಲ್​ಗೆ 8-9 ರೂ. ಹೆಚ್ಚಳವಾಗಿದೆ. ಇದು ಮನೆ ನಿರ್ಮಾಣ ಮಾಡಿಕೊಳ್ಳುತ್ತಿರುವವರಿಗೆ ಸಂಕಷ್ಟ ತಂದೊಡ್ಡಿದೆ.

8 ರಿಂದ 10 ದಿನಗಳಲ್ಲಿ ಸಿಮೆಂಟ್ ದರದಲ್ಲಿ ಭಾರಿ ಏರಿಕೆಯಾಗಿದೆ. ದಾಲ್ಮೀಯಾ ಸಿಮೆಂಟ್ ಒಂದು ಚೀಲದ ದರ 420 ರೂ. ಗಳಿತ್ತು. ಆದರೆ ಈಗ 480 ರೂ. ಆಗಿದೆ. ಎಸಿಸಿ ಸಿಮೆಂಟ್ ದರ 425 ದಿಂದ 490 ರೂ. ಹೆಚ್ಚಳವಾಗಿದೆ. 410 ರೂ. ಗಳಿದ್ದ ಜುಮಾರಿ ಸಿಮೆಂಟ್ ದರ 470 ರೂ ಆಗಿದೆ. ಭಾರತಿ ಸಿಮೆಂಟ್ ದರ 420 ರೂ. ಗಳಿತ್ತು. ಈಗ 490 ರೂ. ಗಳಾಗಿದೆ. ಇನ್ನೂ 430 ರೂ. ಗಳಿದ್ದ ಅಲ್ಟ್ರಾಟೆಕ್ ಸಿಮೆಂಟ್ ದರ ಕೂಡ 490 ರೂ. ದಾಟಿದೆ. ಎ ಬಿ ಸಿ ಯಾವುದೇ ಗ್ರೇಡ್ ಸಿಮೆಂಟ್ ಆಗಲೀ 50 ರೂ. ಗಳಿಂದ 100 ರೂ. ರವರೆಗೆ ಪ್ರತಿ ಚೀಲದ ಸಿಮೆಂಟ್ ದರ ಹೆಚ್ಚಳವಾಗಿದೆ. ಇನ್ನೂ ಡಿಸೇಲ್, ಪೆಟ್ರೋಲ್ ದರದ ಹೆಚ್ಚಳ ಬಳಿಕ ಮರಳು, ಕಂಕರ್ ದರ ಕೂಡ ಅಧಿಕವಾಗಿದೆ. ಹೀಗಾಗಿ ದರ ಕಡಿಮೆಯಾಗುವವರೆಗೂ ಮನೆ ನಿರ್ಮಾಣ ಮಾಡುತ್ತಿರುವುದನ್ನೇ ಅರ್ಧಕ್ಕೆ ನಿಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದು ಮನೆ ನಿರ್ಮಾಣ ಮಾಡುತ್ತಿರುವ ಸಿದ್ದಪ್ಪ ಹೇಳಿದ್ದಾರೆ.

ಸಿಮೆಂಟ್, ಸ್ಟೀಲ್ ಸೇರಿದಂತೆ ಹಲವು ವಸ್ತುಗಳ ದರ ದಿಢೀರ್ ಎಂದು ಹೆಚ್ಚಳವಾಗಿದೆ. ಹೀಗಾಗಿ ಮನೆ ನಿರ್ಮಾಣದ ಬಜೆಟ್ ಕೂಡ ಹೆಚ್ಚಾಗುತ್ತಿದೆ. ಇದು ಮನೆ ನಿರ್ಮಾಣ ಮಾಡಲು ಮುಂದಾಗಿರುವವರಿಗೆ ದೊಡ್ಡ ಹೊರೆಯಾಗುತ್ತಿದೆ. ಬೆಲೆ ಏರಿಕೆಯಿಂದ ಹೈರಾಣು ಆಗಿರುವ ಜನರಿಗೆ ಈಗ ಸಿಮೆಂಟ್, ಸ್ಟೀಲ್ ದರ ಕೂಡ ಗಗನಕ್ಕೇರಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ವರದಿ: ಬಸವರಾಜ ಹರನಹಳ್ಳಿ

ಇದನ್ನೂ ಓದಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಉಬ್ಬು ಚಿತ್ರ; ಜನರ ಜಾಗೃತಿಗಾಗಿ ವಿಶಿಷ್ಟ ಪ್ರಯೋಗ

Tomato Price: ಟೊಮೆಟೊ ದರ 100 ರೂ. ಸಮೀಪ; ಬೆಲೆ ಏರಿಕೆಗೆ ಕಾರಣಗಳು ಏನೆಲ್ಲಾ ಗೊತ್ತಾ?