ಅಪಾಯದ ಅಂಚಿನಲ್ಲಿ ಪಾರಂಪರಿಕ ವಾಟರ್ ಕರೆಜ್; ಅರ್ಧಕ್ಕೆ ನಿಂತ ಭೂ ಕಾಲುವೆ ಕಾಮಗಾರಿ ಆರಂಭಿಸುವಂತೆ ಜನರ ಮನವಿ
ಐತಿಹಾಸಿಕ ಭೂ ಕಾಲುವೆಯ ಅಕ್ಕಪಕ್ಕದಲ್ಲಿ 20 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಷೇಧವಿದ್ದರು ಅಲ್ಲಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಜೊತೆಗೆ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಬೀದರ್: ಹದಿನೈದನೆಯ ಶತಮಾನದಲ್ಲಿ ಬಹುಮನಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಭೂ ಕಾಲುವೆ ಎಂದರೆ ವಾಟರ್ ಕರೇಜ್. ಆರು ಶತಮಾನಗಳ ಹಿಂದೆ ಬಹಮನಿ ಸುಲ್ತಾನರು ಈ ಜಲಮಾರ್ಗವನ್ನು ಕುಡಿಯುವ ನೀರಿಗಾಗಿ ಬಳಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ಈ ಜಲಮಾರ್ಗ ಸ್ಚಚ್ಚಗೊಳಿಸಿ ಲಕ್ಷಾಂತರ ರೂಪಾಯಿ ಹಣ ವ್ಯಯಮಾಡಲಾಗಿತ್ತು. ಆದರೀಗ ಭೂ ಮಾಫೀಯಾದಿಂದ ವಿಶ್ವ ಪಾರಂಪರಿಕ ತಾಣ ಅಪಾಯದಂಚಿಗೆ ಬಂದಿದೆ.
ಹದಿನೈದನೆ ಶತಮಾನದ ಬಹುಮನಿ ಸುಲ್ತಾನರ ಕಾಲದಲ್ಲಿ ಬೀದರ್ ನಗರದಲ್ಲಿ ನಿರ್ಮಿಸಲಾಗಿದ್ದ ಭೂ ಕಾಲುವೆಗೆ ಈಗ ಅಪಾಯ ಬಂದೊದಗಿದೆ. ಐತಿಹಾಸಿಕ ಭೂ ಕಾಲುವೆಯ ಅಕ್ಕಪಕ್ಕದಲ್ಲಿ 20 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಷೇಧವಿದ್ದರು ಅಲ್ಲಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಜೊತೆಗೆ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅಲ್ಲದೆ 20 ಟನ್, 40 ಟನ್ ಮರಳು ತುಂಬಿದ ಲಾರಿಗಳು ಭೂ ಕಾಲುವೆಯ ಸುತ್ತಮುತ್ತಲೂ ಓಡಾಡುತ್ತಿದ್ದುದ್ದರ ಪರಿಣಾಮವಾಗಿ ವಿಶ್ವ ಪಾರಂಪರಿ ಐತಿಹಾಸಿಕ ವಾಟರ್ ಕರೇಜ್ ಅಪಾಯದ ಅಂಚಿಗೆ ಬಂದಿದೆ.
ಬಾರಿ ಪ್ರಮಾಣದ ವಾಹನಗಳು ಇದರ ಮೇಲೆ ಓಡಾಡುತ್ತಿದ್ದುದ್ದರ ಪರಿಣಾಮವಾಗಿ ಭೂ ಕಾಲುವೆಯ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು, ಸ್ಮಾರಕ ಪ್ರೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಹಿಂದೆ ಅನುರಾಗ್ ತಿವಾರಿ ಬೀದರ್ ಜಿಲ್ಲಾಧಿಕಾರಿಯಾಗಿ ಬಂದ ನಂತರ ಭೂ ಕಾಲುವೆಯ ಅಭಿವೃದ್ಧಿಗೆ 3 ಕೋಟಿ ರೂಪಾಯಿ ಖರ್ಚುಮಾಡಿ ಐತಿಹಾಸಿಕ ವಾಟರ್ ಕರೇಜ್ ಹೂಳು ತೆಗೆಸಿ ಅಲ್ಲಿಂದ ನೀರು ಬರುವಂತೆ ಮಾಡಿದ್ದರು. ಇದಾದ ನಂತರ ದೇಶ ವಿದೇಶದಿಂದ ಇಲ್ಲಿನ ಭೂ ಕಾಲುವೆಯನ್ನು ನೋಡಲು ಜನರು ಕೂಡಾ ಬರುತ್ತಿದ್ದರು. ಆದರೆ ಈಗ ಈ ಭೂ ಕಾಲುವೆಯ ಸುತ್ತಮುತ್ತಲೂ ದೊಡ್ಡ ದೊಡ್ಡ ಮನೆಗಳು ನಿರ್ಮಾಣವಾಗುತ್ತಿದ್ದು, ಐತಿಹಾಸಿ ಪುರಾತನ ಭೂ ಕಾಲುವೆಯೂ ಅಪಾಯದ ಅಂಚಿಗೆ ಬಂದು ನಿಂತಿದ್ದು ಸ್ಮಾರಕ ಪ್ರೀಯರ ಬೇಸರಕ್ಕೆ ಕಾರಣವಾಗಿದೆ.
ಸುರಂಗ ಮಾರ್ಗದಿಂದ ಪತ್ತೆಯಾದ ವಾಟರ್ ಕರೇಜ್ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅಂದರೆ 14 ನೇಯ ಶತಮಾನದ ವಾಟರ್ ಕರೇಜ್ ಕಳೆದ 6 ವರ್ಷದ ಹಿಂದೆ ಪತ್ತೆಯಾಗಿತ್ತು. ಇಲ್ಲಿ ಪತ್ತೆಯಾದ ಸುರಂಗ ಮಾರ್ಗ ಏನಿರಬಹುದೆಂದು ಇತಿಹಾಸಕಾರಿಂದ ಪರೀಶಿಲನೆ ನಡೆಸಿದಾಗ ಬೆಳಕಿಗೆ ಬಂದಿದ್ದೇ ಈ ವಾಟರ್ ಕರೇಜ್. ಬಹುಮನಿ ಸುಸ್ತಾನರ ಕಾಲದಲ್ಲಿ ಬೀದರ್ ಜನರಿಗೆ ನೀರು ಪೂರೈಕೆ ಮಾಡುವ ಸಲುವಾಗಿ ವಿಶಿಷ್ಟ ತಂತ್ರಜ್ಞಾನವನ್ನು ಬಳಿಸಿ ನೀರಿನ ಝರಿಗಳು, ಅಂತರಜಲದ ಮೂಲಗಳನ್ನು ಸುರಂಗದೊಳಗೆ ಹರಿಸಿ ಸುರಂಗದೊಳಗೆ ನೀರು ಬರುವಂತೆ ಮಾಡಲಾಗಿತ್ತು.
ಕಳೆದ 15ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಬಹುಮನಿ ಸುಲ್ತಾನರ ಕಾಲದಲ್ಲಿ(1387-1518) ಅವಧಿಯಲ್ಲಿ ಬೀದರ್ನ ನೌಬಾದ್ ಬಳಿ ಸುರಂಗ ಮಾರ್ಗ ನಿರ್ಮಿಸಲಾಗಿತ್ತು. ಬರೋಬ್ಬರಿ 10 ಕಿಲೋ ಮೀಟರ್ ಉದ್ದವಿರುವ ಈ ಸುರಂಗ ಮಾರ್ಗ ಕಾಲಾಂತರದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ಅಷ್ಟೆ ಅಲ್ಲದೆ ಸುರಂಗ ಮಾರ್ಗ ಮಧ್ಯೆ ಮಣ್ಣು ತುಂಬಿಕೊಂಡು ಮುಚ್ಚಲ್ಪಟ್ಟಿತ್ತು. ಯಾವುದೇ ಮೋಟರ್ ಇಲ್ಲದೆ. ವಿದ್ಯುತ್ ಇಲ್ಲದೆ ಬೀದರ್ ನಗರದ ಕೋಟೆಯವರೆಗೆ ಸರಾಗವಾಗಿ ಸುರಂಗ ಮಾರ್ಗದ ಮುಖಾಂತರ ನೀರನ್ನು ಅಂದು ಹರಿಸಲಾಗುತ್ತಿತ್ತು, ಅದು ನಿರಂತರವಾಗಿ. ಆದರೆ ಇದರ ಬಗ್ಗೆ ಕಾಲಾಂತರದಲ್ಲಿ ಮಾಹಿತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹಾಳಾಗಿದೆ.
ಈ ಕರೇಜ್ ಬಗ್ಗೆ ಜನರು ಮರೆತಿದ್ದರು ಅದನ್ನು ಬೆಳಕಿಗೆ ತಂದವರೆ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಪಿ.ಸಿ. ಜಾಫರ್ ಹಾಗೂ ದಿವಂಗತ ಅನುರಾಗ್ ತಿವಾರಿ. ಇಂದಿಗೂ ವಿಶ್ವದ 38 ದೇಶದಲ್ಲಿ ಈ ಕರೇಜ್ ವ್ಯವಸ್ಥೆ ಜಾರಿಯಲ್ಲಿದೆ. ವಿಶೇಷವಾಗಿ ಇರಾನ್ ದೇಶದಲ್ಲಿ ಸಾವಿರಾರು ಕರೇಜ್(ಸುರಂಗಮಾರ್ಗ)ಗಳಿವೆ. ಅಲ್ಲಿ ನೀರಿನ ಮೂಲ ಇಂದಿಗೂ ಕರೇಜ್ ಆಗಿದೆ. ಭಾರತದಲ್ಲಿ ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಪರ್ಶಿಯಾದಿಂದ ತಂತ್ರಜ್ಞರನ್ನು ಕರೆಸಿ ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ ಇಂತಹ ಅಪರೂಪದ ವಾಟರ್ ಕರೇಜ್ ಕರ್ನಾಟದ ಬೀದರ್ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ.
ಈ ಕರೇಜ್ ಮರುಜೀವ ಪಡೆದರೆ ಪ್ರವಾಸಿಗರನ್ನು ಕೈಬಿಸಿ ಕರೆಯುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ ಪ್ರವಾಸ್ಯೋಧ್ಯಮ ಅಭಿವೃದ್ಧಿಗೆ ಇದು ಆಶಾಕಿರಣವಾಗಲಿದೆ. ಅಷ್ಟೆ ಅಲ್ಲದೆ ದೇಶ ವಿದೇಶದಿಂದ ಪ್ರವಾಸಿಗರನ್ನು ಸೆಳೆಯುವುದರಲ್ಲು ತನ್ನದೆಯಾದ ಮಹತ್ತರ ಪಾತ್ರ ವಹಿಸಲಿದೆ ಎನ್ನುವುದು ಪರಿಸರವಾದಿಗಳ ಮಾತು.
ಜಿಲ್ಲಾಡಳಿತದ ಪ್ರಯತ್ನದಿಂದಾಗಿ ಇತಿಹಾಸದ ಕಾಲಗರ್ಭದಲ್ಲಿ ಮುಚ್ಚಿಹೋಗಿದ್ದ ಈ ಕರೇಜ್ಗೆ ಮರುಜೀವ ನೀಡುವ ಕೆಲಸವನ್ನು ಅನುರಾಗ್ ತಿವಾರಿ ಮಾಡಿದ್ದರು. ಆದರೇ ಈಗ ಕರೇಜ್ ಮಣ್ಣು ತೆಗೆಯುವ ಕೆಲಸ ಸಂಪೂರ್ಣವಾಗಿ ನಿಂತು ಹೋಗಿದೆ. ಜತೆಗೆ ಭೂ ಮಾಫಿಯಾ ಕೂಡಾ ಈಗ ಹೆಚ್ಚಾಗಿದೆ. ಅಲ್ಲಲ್ಲಿ ಮನೆ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ. ಇದು ಐತಿಹಾಸಿಕ ವಾಟರ್ ಕರೇಜ್ಗೆ ಅಪಾಯ ತಂದೊಡ್ಡುವುದರಲ್ಲಿ ಅನುಮಾನವೇ ಇಲ್ಲ.
3 ಕಿಲೋಮೀಟರ್ ಜಲಮಾರ್ಗದಲ್ಲಿರುವ ಮಣ್ಣು ಸ್ವಚ್ಛ ಮಾಡಿದ್ದರಿಂದ ಈಗ ಅಲ್ಲಿ ನೀರು ಹರಿಯುತ್ತಿದೆ. ಹತ್ತಾರು ಬಾವಿಯಲ್ಲಿ ನೀರು ತುಂಬಿಕೊಂಡಿದೆ ಆದರೇ ಇನ್ನೂಳಿದ ಕರೇಜ್ನಲ್ಲಿರುವ ಮಣ್ಣು ತೆಗೆದು ಉತ್ತಮ ಪ್ರವಾಸಿ ತಾಣಮಾಡಬೇಕು ಎನ್ನುವುದು ಇಲ್ಲಿನ ಜನರ ಆಶಯವಾಗಿದೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ: 200 ವರ್ಷದ ಪುರಾತನ ಮನೆ; ಪ್ರವಾಹ ಬಂದರೂ ತನ್ನ ಅಂದ ಕಳೆದುಕೊಳ್ಳದ ನಿವಾಸದಲ್ಲಿ ಬರೋಬ್ಬರಿ 25 ಕೋಣೆಗಳಿವೆ
ಬಾಗಲಕೋಟೆ: ಹಿಂದಿ ಸಿನಿಮಾ ಗುರು ಚಿತ್ರೀಕರಣ ನಡೆದಿದ್ದ ಐತಿಹಾಸಿಕ ಕೆರೆಗೆ ಸಿಗಲಿದೆ ಮತ್ತಷ್ಟು ಮೆರುಗು