
ಬೆಂಗಳೂರು, ಆಗಸ್ಟ್ 22: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ (Bike taxi services) ಕಾರ್ಯಾಚರಣೆಗೆ ನಿಷೇಧ ವಿಚಾರವಾಗಿ ಉಂಟಾಗಿದ್ದ ಕೆಲ ಗೊಂದಲಗಳಿಗೆ ಇದೀಗ ಕರ್ನಾಟಕ ಹೈಕೋರ್ಟ್ ತೆರೆ ಎಳೆದಿದೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿ ಹೈಕೋರ್ಟ್ (High Court) ಆದೇಶಿಸಿಲ್ಲ ಎಂದು ಸಿಜೆ ವಿಭು ಬಕ್ರು ಮತ್ತು ನ್ಯಾ. ಸಿ.ಎಂ.ಜೋಶಿ ಅವರಿದ್ದ ಪೀಠ ಸ್ಪಷ್ಟನೆ ನೀಡಿದೆ. ಆ ಮೂಲಕ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ ಎನ್ನುವ ಸುದ್ದಿಗೆ ಸ್ಪಷ್ಟನೆ ಸಿಕ್ಕಿದ್ದು, ಬೈಕ್ ಟ್ಯಾಕ್ಸಿ ನಿಷೇಧ ವಿಚಾರ ಇನ್ನೂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿ. ಹೀಗಾಗಿ ಮುಂದೆ ಕೋರ್ಟ್ ಯಾವ ತೀರ್ಪು ನೀಡಲಿದ ಎನ್ನುವುದನ್ನು ಕಾದುನೋಡಬೇಕಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಇಂದು ನಡೆದ ವಿಚಾರಣೆ ನಡೆದಿದ್ದು, ವೇಳೆ ರಾಜ್ಯದಲ್ಲಿ ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡಲಾಗಿದೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಪುನಾರಂಭ
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿಲ್ಲ. ಬೈಕ್ ಟ್ಯಾಕ್ಸಿ ಪ್ರಸ್ತಾವನೆ ಬಗ್ಗೆ ಸರ್ಕಾರ ಪರಿಶೀಲಿಸುತ್ತಿರುವ ಹಿನ್ನೆಲೆ ಬೈಕ್ ಟ್ಯಾಕ್ಸಿ ಮಾಲೀಕರು, ಚಾಲಕರ ಮೇಲೆ ಕ್ರಮ ಬೇಡವೆಂದು ಹೇಳಿದ್ದೆವು. ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳ ಬಗ್ಗೆ ನಾವು ಹೇಳಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇನ್ನು ಬೈಕ್ ಟ್ಯಾಕ್ಸಿ ಚಾಲಕರ ಪರವಾಗಿ ವಕೀಲ ಗಿರೀಶ್ ಕುಮಾರ್ ಹಾಜರಾಗಿ ವಾದ ಮಂಡಿಸಿದ್ದು, ಸರ್ಕಾರ ಅಪ್ಲಿಕೇಶನ್ ವಿರುದ್ಧ ಕ್ರಮಕೈಗೊಳ್ಳಬಹುದು. ಅಪ್ಲಿಕೇಶನ್ ಆಧರಿಸಿ ಸೇವೆ ನೀಡುವ ಟ್ಯಾಕ್ಸಿಗಳ ಮೇಲೆ ಅಲ್ಲ. ಬೈಕ್ ಟ್ಯಾಕ್ಸಿ ಸೀಜ್ ಮಾಡಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಉಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಜೂನ್ 15 ರವರೆಗೆ ವಿಸ್ತರಿಸಿದ ಹೈಕೋರ್ಟ್
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಈ ಆರೋಪ ಸರಿಯಲ್ಲ. ನಾವು ಅವರನ್ನು ಬಂಧಿಸುವುದಿಲ್ಲ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಹೈಕೋರ್ಟ್ ವ್ಯಕ್ತಿಗಳಿಗೆ ತೊಂದರೆ ಕೊಡಬೇಡಿ ಎಂದು ಹೇಳಿತು. ಬೈಕ್ ಟ್ಯಾಕ್ಸಿ ಬಗ್ಗೆ ನಿಲುವು ತಿಳಿಸುವಂತೆ ಸೂಚಿಸಿರುವ ಹೈಕೋರ್ಟ್, 4 ವಾರಗಳ ಕಾಲಾವಕಾಶ ನೀಡಿ ಸೆ.22ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:46 pm, Fri, 22 August 25