ಹಕ್ಕಿ ಜ್ವರ: ಕರ್ನಾಟಕದಾದ್ಯಂತ ಹೈ ಅಲರ್ಟ್, ಗಡಿ ಭಾಗದಲ್ಲಿ ಕೋಳಿ ಉತ್ಪನ್ನ ಸಾಗಾಣಿಕೆಗೆ ನಿಷೇಧ

|

Updated on: Mar 01, 2025 | 12:54 PM

ಇಷ್ಟು ದಿನ ನೆರೆ ರಾಜ್ಯ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಹಕ್ಕಿ ಜ್ವರ ರುದ್ರನರ್ತನ ಆಡಿತ್ತು. ಇದೀಗ ಕರ್ನಾಟಕಕ್ಕೂ ಬರ್ಡ್ ಫ್ಲೂ ಕಾಲಿಟ್ಟಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ ಸೇರಿ ಹಲವೆಡೆ ಕೋಳಿಗಳ ಮಾರಣಹೋಮ ನಡೆಯುತ್ತಿದೆ. ಗಡಿ ಪ್ರದೇಶಗಳಲ್ಲಿ ಕೋಳಿ ಉತ್ಪನ್ನ ಸಾಗಾಣಿಕೆಗೆ ನಿಷೇಧ ಹೇರಲಾಗಿದ್ದು, ಕಟ್ಟೆಚ್ಚರ ಘೋಷಿಸಲಾಗಿದೆ. ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ ಎಂಬ ಮಾಹಿತಿ ಇಲ್ಲಿದೆ.

ಹಕ್ಕಿ ಜ್ವರ: ಕರ್ನಾಟಕದಾದ್ಯಂತ ಹೈ ಅಲರ್ಟ್, ಗಡಿ ಭಾಗದಲ್ಲಿ ಕೋಳಿ ಉತ್ಪನ್ನ ಸಾಗಾಣಿಕೆಗೆ ನಿಷೇಧ
ಚಿಕ್ಕಬಳ್ಳಾಪುರ ವರದಹಳ್ಳಿ ಗ್ರಾಮದ ಕೋಳಿಗಳಲ್ಲಿ ಹಕ್ಕಿಜ್ವರ ದೃಢ: ‘ಟಿವಿ9’ ಪ್ರತಿನಿಧಿ ಭೀಮಪ್ಪ ಪಾಟೀಲ ಸ್ಥಳದಿಂದ ವರದಿ
Follow us on

ಬೆಂಗಳೂರು, ಮಾರ್ಚ್ 1: ಪಶು ಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ವ್ಯಾಪ್ತಿಯಲ್ಲಿರುವ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ ಕೋಳಿ ಫಾರ್ಮ್​​ನಲ್ಲಿ ನಿತ್ಯ ಸಾವಿರಾರು ಕೋಳಿಗಳು ಇರುತ್ತಿದ್ದವು. ಆದರೆ ಈಗ ಹಕ್ಕಿ ಜ್ವರದ ಅಟ್ಟಹಾಸಕ್ಕೆ ಇಡೀ ಕೋಳಿ ಫಾರ್ಮ್​ ಬಣಗುಡುತ್ತಿದೆ. ಫೆಬ್ರವರಿ 21ರಿಂದ ಪೌಲ್ಟ್ರಿ ಫಾರ್ಮ್​ನಲ್ಲಿ ಕೋಳಿಗಳು ಹಂತಹಂತವಾಗಿ ಮೃತಪಡುತ್ತಿದ್ದವು. ಅನುಮಾನ ಬಂದ ಅಧಿಕಾರಿಗಳು ಸತ್ತ ಕೋಳಿಗಳನ್ನು ಪ್ರಯೋಗಾಲಕ್ಕೆ ಕಳುಹಿಸಿದ್ದರು. ಪ್ರಯೋಗಾಲಯ ವರದಿಯಲ್ಲಿ, ಹಕ್ಕಿ ಜ್ವರ ದೃಢಪಟ್ಟಿತ್ತು. ಇದೊಂದೇ ಫಾರ್ಮ್​ನಲ್ಲಿ ಈವರೆಗೆ 2,400 ಕೋಳಿಗಳು ಹಕ್ಕಿಜ್ವರಕ್ಕೆ ತುತ್ತಾಗಿವೆ. ಈ ಪೈಕಿ ಅಧಿಕಾರಿಗಳೇ 1,020 ಕೋಳಿಗಳ ವಧೆ ಮಾಡಿ ಹೂತು ಹಾಕಿದ್ದಾರೆ.

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಹಕ್ಕಿ ಜ್ವರ ಹಬ್ಬಿರುವ ಶಂಕೆ ಶುರುವಾಗಿದೆ. ಅಧಿಕಾರಿಗಳು ಗ್ರಾಮದ ಸುತ್ತ 1 ಕಿ ಲೋ ಮೀಟರ್ ಅಪಾಯಕಾರಿ ವಲಯ ಎಂದು ಗುರುತು ಮಾಡಿದ್ದಾರೆ. ಕೋಳಿ ಫಾರ್ಮ್ ಸುತ್ತ ಸ್ಪ್ರೇ, ಪೌಡರ್ ಸಿಂಪಡಣೆ ಮಾಡಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ

ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ದೃಢಪಟ್ಟಿತ್ತು. ವರದಹಳ್ಳಿ ಎಂಬ ಗ್ರಾಮದಲ್ಲಿ 45 ಕೋಳಿಗಳು ಮೃತಪಟ್ಟಿದ್ದವು. ಈ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲರ್ಟ್ ಆಗಿದೆ. ಇಲಾಖೆಯ ಸಿಬ್ಬಂದಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಹಕ್ಕಿಜ್ವರ ಮನುಷ್ಯರಿಗೆ ಹರಡಿದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಇದನ್ನೂ ಓದಿ
ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ದೃಢ: ಸಾಕು ಕೋಳಿಗಳ ಸಾಮೂಹಿಕ‌ ಹತ್ಯೆ
ನೆರೆ ರಾಜ್ಯಗಳಲ್ಲಿ ಹಕ್ಕಿಜ್ವರ, ರಾಜ್ಯದಲ್ಲಿ ಅಲರ್ಟ್: ಕೋಳಿ ಆಮದು ನಿರ್ಬಂಧ
ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಹೆಚ್ಚಳ; ಬೀದರ್ ಗಡಿಭಾಗದಲ್ಲಿ ಹೈಅಲರ್ಟ್
ಹಕ್ಕಿ ಜ್ವರ ಬಂದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಿವು

ಏತನ್ಮಧ್ಯೆ, ಅಧಿಕಾರಿಗಳ ಸೂಚನೆಗೆ ಮೇರೆಗೆ ಗ್ರಾಮದಲ್ಲಿದ್ದ ಎಲ್ಲಾ ನಾಟಿ ಕೋಳಿಗಳನ್ನು ಹಿಡಿದು ಕೊಲ್ಲಲಾಗಿದೆ. ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಗಡಿ ಭಾಗದಲ್ಲಿ ಕೋಳಿ ಉತ್ಪನ್ನ, ಹಕ್ಕಿ ಸಾಗಾಣಿಕೆಗೆ ನಿಷೇಧ

ಇನ್ನು ಗಡಿ ಜಿಲ್ಲೆ ರಾಯಚೂರಿನಲ್ಲೂ ಹಕ್ಕಿ ಜ್ವರದ ಆತಂಕ ಮನೆ ಮಾಡಿದೆ. ಕೋಳಿ ಉತ್ಪನ್ನ, ಹಕ್ಕಿ ಸಾಗಾಣಿಕೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಗಡಿಭಾಗದ ಚೆಕ್​ಪೋಸ್ಟ್​ಗಳಲ್ಲಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಆದರೆ, ಗಿಲ್ಲೆಸುಗೂರು ಚೆಕ್​ಪೋಸ್ಟ್​ ಖಾಲಿ ಖಾಲಿ ಹೊಡೆಯುತ್ತಿದೆ. ಪೊಲೀಸರು, ಪಶುಸಂಗೋಪನೆ ಅಧಿಕಾರಿಗಳು, ಸಿಬ್ಬಂದಿ ಇಲ್ಲದೇ ಬಿಕೋ ಎನ್ನುತ್ತಿದೆ.

ಇದನ್ನೂ ಓದಿ: ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ

ಇಷ್ಟು ದಿನ ನೆರೆ ರಾಜ್ಯದಲ್ಲಿ ಹಾವಳಿ ಸೃಷ್ಟಿಸಿದ್ದ ಹಕ್ಕಿಜ್ವರ, ರಾಜ್ಯದಲ್ಲೂ ಅಟ್ಟಹಾಸ ಮೆರೆಯುತ್ತಿದೆ. ಒಂದೆಡೆ, ಕೋಳಿಗಳ ಮಾರಣಹೋಮವೇ ನಡೆಯುತ್ತಿದ್ದರೆ, ಮತ್ತೊಂದೆಡೆ ಬರ್ಡ್ ಫ್ಲೂ ಹರಡುವಿಕೆ ತಡೆಗೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ