ಮಂಗಳೂರು: ವಿದ್ಯಾರ್ಥಿ ದಿಗಂತ್ ನಾಪತ್ತೆ, ವಿಹೆಚ್ಪಿ ಪ್ರತಿಭಟನೆ, ಗಾಂಜಾ ವ್ಯಸನಿಗಳ ಕೈವಾಡ ಶಂಕೆ
ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದು, ಐದು ದಿನಗಳಾದರೂ ಪತ್ತೆಯಾಗಿಲ್ಲ. ಪೊಲೀಸರ ನಿಷ್ಕ್ರಿಯತೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ರೈಲ್ವೇ ಹಳಿಯಲ್ಲಿ ಚಪ್ಪಲಿ ಮತ್ತು ಮೊಬೈಲ್ ಪತ್ತೆಯಾಗಿದೆ. ಪೊಲೀಸರು ಮೂರು ತನಿಖಾ ತಂಡಗಳನ್ನು ರಚಿಸಿದ್ದಾರೆ. ಗಾಂಜಾ ವ್ಯಸನಿಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಮಂಗಳೂರು, ಮಾರ್ಚ್ 01: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwala) ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ಐದು ದಿನ ಕಳೆದರೂ ಇನ್ನೂವರೆಗೂ ಆತನ ಸುಳಿವು ಸಿಕ್ಕಿಲ್ಲ. ನಾಪತ್ತೆಯಾದ ವಿದ್ಯಾರ್ಥಿ ದಿಗಂತ್ನನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ ಎಂದು ಆರೋಪ ಕೇಳಿಬಂದಿದೆ.
ದಿಗಂತ್ ಮಂಗಳೂರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಮಂಗಳವಾರ (ಫೆ.25) ರಂದು ರಾತ್ರಿ 7 ಗಂಟೆ ಸುಮಾರಿಗೆ ಫರಂಗಿಪೇಟೆ ಅಂಜನೇಯ ವ್ಯಾಯಮ ಶಾಲೆಗೆ ಹೋಗಿ ಬರುವುದಾಗಿ ದಿಗಂತ್ ಮನೆಯಲ್ಲಿ ಹೇಳಿ ಹೋಗಿದ್ದರು. ಆದರೆ, ಎಷ್ಟೊತ್ತಾದರೂ ದಿಗಂತ್ ಮನೆಗೆ ಬಾರದಿದ್ದಾಗ ಗಾಭರಿಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ, ರೈಲ್ವೆ ಹಳಿಯಲ್ಲಿ ದಿಗಂತ್ರ ಚಪ್ಪಲಿ ಹಾಗೂ ಮೊಬೈಲ್ ದೊರಕಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡು ಬಂದಿತ್ತು. ಅಲ್ಲದೇ, ದಿಗಂತ್ ನಾಪತ್ತೆಯಾದ ದಿನ ಸಂಜೆ ಅಂಜನೇಯ ವ್ಯಾಯಾಮ ಶಾಲೆ ಬಳಿ ಅನುಮಾನಾಸ್ಪದವಾಗಿ ಕ್ವಾಲೀಸ್ ಕಾರೊಂದು ಓಡಾಡಿತ್ತು.
ತನಿಖೆಗೆ ಮೂರು ವಿಶೇಷ ತಂಡ ರಚನೆ
ವಿದ್ಯಾರ್ಥಿ ದಿಗಂತ್ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್, ಪುತ್ತೂರು ಟ್ರಾಫಿಕ್ ಎಸ್.ಐ.ಉದಯರವಿ ಹಾಗೂ ಬಂಟ್ವಾಳ ನಗರ ಠಾಣಾ ಎಸ್ಐ ದುರ್ಗಪ್ಪ ನೇತೃತ್ವದಲ್ಲಿ ತಂಡಗಳು ತನಿಖೆ ನಡೆಸುತ್ತಿವೆ.
ಇನ್ನು, ದಿಗಂತ್ ನಾಪತ್ತೆಯಾದ ಸುದ್ದಿ ತಿಳಿದು ಆಕ್ರೋಶಗೊಂಡಿದ್ದ ವಿಶ್ವಹಿಂದೂ ಪರಿಷತ್ ಸ್ಥಳೀಯ ಮುಖಂಡರು ಶನಿವಾರದೊಳಗೆ ಆತನನ್ನು ಪತ್ತೆ ಮಾಡಬೇಕು ಎಂದು ಪೊಲೀಸರಿಗೆ ಗಡುವು ನೀಡಿದ್ದರು. ಆದರೆ, ಪೊಲೀಸರು ಇನ್ನೂವರೆಗೂ ಪತ್ತೆ ಮಾಡದ ಹಿನ್ನೆಲೆಯಲ್ಲಿ ಇಂದು (ಮಾ.01) ಹಿಂದೂಪರ ಸಂಘಟನೆಗಳು ಫರಂಗಿಪೇಟೆ ಬಂದ್ಗೆ ಕರೆ ನೀಡಿವೆ. ಬಂದ್ಗೆ ಕರೆ ಹಿನ್ನೆಲೆಯಲ್ಲಿ ಫರಂಗಿಪೇಟೆಯಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ ಜಂಕ್ಷನ್ನಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನೆಯಲ್ಲಿ ಎಂಎಲ್ಸಿ ಕಿಶೋರ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದರು. ಬಂದ್ ಮತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ದಿಗಂತ್ ನಾಪತ್ತೆ ಹಿಂದೆ ಗಾಂಜಾ ವಾಸನೆ?
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮಾತನಾಡಿ, ಈ ಪ್ರಕರಣದ ತನಿಖೆಯನ್ನು ಚುರುಕಾಗಿ ಮಾಡುತ್ತಿದ್ದೇವೆ. ಪೊಲೀಸ್ ತಂಡ ರಚನೆ ಮಾಡಿ ತನಿಖೆಯ ಜವಬ್ದಾರಿ ನೀಡಲಾಗಿದೆ. ಹುಡಗನನ್ನು ಆದಷ್ಟು ಬೇಗ ಪತ್ತೆ ಮಾಡುವ ಭರವಸೆ ಇದೆ. ಹುಡುಗನ ಕಾಲೇಜು, ಸ್ನೇಹಿತರು ಎಲ್ಲ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ. ಸದ್ಯಕ್ಕೆ ಸುಳಿವುಗಳು ಸಿಕ್ಕಿಲ್ಲ. ಆತನ ದೈನಂದಿಕ ಚಟುವಟಿಕೆ ಏನಾಯಿತು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.
25 ನೇ ತಾರೀಖು ಕಾಲೇಜಿಗೆ ಹೋಗಿ ಹಾಲ್ ಟಿಕೆಟ್ ತಂದಿದ್ದಾನೆ. ಆ ದಿನ ಸಂಜೆ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೋದವನು ಮನೆಗೆ ಬಂದಿಲ್ಲ ಎಂದು ದೂರು ನೀಡಿದ್ದಾರೆ. ತನಿಖೆ ಮಾಡಿದಾಗ ಆತ ಆ ದಿನ ದೇವಸ್ಥಾನಕ್ಕೂ ಹೋಗಿಲ್ಲ ಎಂದು ತಿಳಿದುಬಂದಿದೆ. ತನಿಖೆ ಶುರು ಮಾಡಿದ್ದೇವೆ ಆದಷ್ಟು ಬೇಗ ಪತ್ತೆ ಮಾಡುತ್ತೇವೆ. ಗಾಂಜಾ ವ್ಯಸನಿಗಳ ಕೃತ್ಯದ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ.ಕುಟುಂಬ ಸದಸ್ಯರು, ಸಾರ್ವಜನಿಕರು ನೀಡುವ ಎಲ್ಲಾ ಮಾಹಿತಿಯನ್ನು ಗಂಭೀರವಾಗಿ ತಗೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದ ಮಾಸ್ಟರ್ ಮೈಂಡ್ಗಳಿಬ್ಬರ ಬಂಧನ
ರೈಲ್ವೆ ಹಳಿಯಲ್ಲಿ ಸಿಕ್ಕಿರುವ ಚಪ್ಪಲ್ ಅನ್ನು ಎಫ್.ಎಸ್.ಎಲ್ಗೆ ಕಳುಹಿಸಿದ್ದೇವೆ. ಚಪ್ಪಲ್ನಲ್ಲಿರುವ ರಕ್ತದ ಕಲೆಯ ಬಗ್ಗೆ ಪರೀಕ್ಷಾ ವರದಿ ಬರಲಿದೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿ ದಿಗಂತ್ ನಾಪತ್ತೆ ಹಿಂದೆ ಗಾಂಜಾ ವ್ಯಸನಿಗಳ ತಂಡದ ಕೈವಾಡ ಇರಬಹುದು ಎಂದು ವಿಹೆಚ್ಪಿ ಅನುಮಾನ ವ್ಯಕ್ತಪಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Sat, 1 March 25