Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಡಿ’ ಅಧಿಕಾರಿಗಳ ಹೆಸರಿನಲ್ಲಿ ನಕಲಿ‌ ದಾಳಿ ಪ್ರಕರಣ: ಕೇರಳ ಪೊಲೀಸ್ ಅಧಿಕಾರಿಯೇ ದರೋಡೆಯ ಮಾಸ್ಟರ್ ಮೈಂಡ್!

ಕರ್ನಾಟಕ ಕರಾವಳಿಯಲ್ಲಿ ಸಾಲು ಸಾಲು ದರೋಡೆ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿದ್ದವು. ಕೋಟೆಕಾರು ಬ್ಯಾಂಕ್ ದರೋಡೆಕೋರರು ಹೇಗೋ ಮಾಲ್ ಸಮೇತ ಸಿಕ್ಕಿಬಿದ್ದಿದ್ದರು. ಆದರೆ ಜಾರಿ ನಿರ್ದೇಶನಾಲಯ ಹೆಸರಿನಲ್ಲಿ ನಡೆದಿದ್ದ ದರೋಡೆ ಪ್ರಕರಣ ಬಯಲಿಗೆಳೆಯಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ ಕೊನೆಗೂ ಪ್ರಕರಣದ ಮಾಸ್ಟರ್ ಬಂಧನವಾಗಿದೆ. ಆತ ಯಾರು ಎಂಬುದು ಗೊತ್ತಾದರೆ ಶಾಕ್ ಆಗುತ್ತೀರಿ!

‘ಇಡಿ' ಅಧಿಕಾರಿಗಳ ಹೆಸರಿನಲ್ಲಿ ನಕಲಿ‌ ದಾಳಿ ಪ್ರಕರಣ: ಕೇರಳ ಪೊಲೀಸ್ ಅಧಿಕಾರಿಯೇ ದರೋಡೆಯ ಮಾಸ್ಟರ್ ಮೈಂಡ್!
ಬಂಧಿತ ಆರೋಪಿ ಶಫೀರ್‌ ಬಾಬು
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Ganapathi Sharma

Updated on: Feb 17, 2025 | 7:10 AM

ಮಂಗಳೂರು, ಫೆಬ್ರವರಿ 17: ಜನವರಿ 03 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು ಸುಮಾರು 30 ಲಕ್ಷ ರೂ. ನಗದು ದೋಚಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಈ ಪ್ರಕರಣದ ಮಾಸ್ಟರ್ ಮೈಂಡ್ ಕೇರಳದ ಪೊಲೀಸ್ ಅಧಿಕಾರಿ ಎಂಬುದು ಗೊತ್ತಾಗಿದೆ. ತನಿಖಾ ತಂಡವು ಈಗಾಗಲೇ ಕೇರಳದ ಕೊಲ್ಲಂ ನಿವಾಸಿಗಳಾದ ಅನಿಲ್‌ ಫರ್ನಾಂಡಿಸ್‌ (49), ಸಚ್ಚಿನ್‌ ಟಿ ಎಸ್‌ (29) ಹಾಗೂ ಶಬಿನ್‌ ಎಸ್‌ (27) ಎಂಬವರನ್ನು ಬಂಧಿಸಿತ್ತು. ಬಳಿಕ ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳಿಯ ಆರೋಪಿ ಕೊಳ್ನಾಡು ಬಂಟ್ವಾಳ ನಿವಾಸಿ ಸಿರಾಜುದ್ದೀನ್‌ (37) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆತ ನೀಡಿದ ಮಾಹಿತಿಯ ಅಧಾರದಲ್ಲಿ ಬಂಟ್ವಾಳ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ (38) ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್‌ ಅನ್ಸಾರ್‌ (27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.‌

ದರೋಡೆ ಕೃತ್ಯಕ್ಕೆ ಮೂಲ ಸೂತ್ರದಾರನಾದ ಕೇರಳದ ಶಫೀರ್‌ ಬಾಬು (48) ಎಂಬಾತನನ್ನು ಬಂಧಿಸಿದ್ದಾರೆ. ಶಫೀರ್ ಬಾಬು ಕೇರಳದ ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್‌ ಠಾಣೆ ಸಹಾಯಕ ಪೊಲೀಸ್‌ ಉಪ ನಿರೀಕ್ಷಕನಾಗಿದ್ದಾನೆ.

ಪೊಲೀಸರು ಹೇಳಿದ್ದೇನು?

ನಮ್ಮ ಪರಿಣಿತ ಪೊಲೀಸರ ನಾಲ್ಕು ತಂಡಗಳು ಕೇರಳದ ಕೊಲ್ಲಂ ಸೇರಿ ವಿವಿಧ ಕಡೆ ಸತತ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದೆ. ಕೇರಳ‌ ಪೊಲೀಸ್ ಅಧಿಕಾರಿ ಈ ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಅರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕರಾವಳಿ ಭದ್ರತೆಗೆ ಗಂಭೀರ ಅಪಾಯ ತಂದಿಟ್ಟ ಸರ್ಕಾರದ ಹೊಸ ಆದೇಶ: ಡ್ರಗ್ಸ್ ಪೂರೈಕೆ, ಭಯೋತ್ಪಾದನೆಗೆ ಮುಕ್ತ ಅವಕಾಶದ ಆತಂಕ

ಇಡಿ ಹೆಸರಿನಲ್ಲಿ ನಡೆದಿದ್ದ ನಕಲಿ ದಾಳಿ ವೇಳೆ ದೋಚಿದ್ದ 30 ಲಕ್ಷ ರೂಪಾಯಿ ನಗದಿನ ಹೆಚ್ಚಿನ ಪಾಲು ಪೊಲೀಸ್ ಅಧಿಕಾರಿಯಾದ ಎಎಸ್ಐ ಶಫೀರ್ ಬಾಬುಗೆ ಹೋಗಿದೆ. ಆದರೆ, ಆತನ ಬಳಿ ಪೊಲೀಸರಿಗೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ. ಎಲ್ಲಾ ಹಣವನ್ನು ಸಾಲ ತೀರಿಸಿದ್ದಾಗಿ ಆತ ಪೊಲೀಸರ ಬಳಿ ಹೇಳಿದ್ದಾನಂತೆ. ಇನ್ನು ಸಿಂಗಾರಿ ಬೀಡಿ ಮಾಲೀಕ ಸುಲೈಮನ್ ಹಾಜಿ ಜೊತೆ ಕೆಲಸ ಮಾಡುತ್ತಿದ್ದವರೇ ನೀಡಿದ ಮಾಹಿತಿ ಮೇರೆಗೆ ಈ ನಕಲಿ‌ ದಾಳಿ ಮಾಡಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.‌ ತನಿಖೆ ಇನ್ನು ಕೂಡ ಮುಂದುವರೆದಿದ್ದು ಇನ್ನಷ್ಟು ವಿಚಾಗಳು ಬಯಲಾಗಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ