ತಮ್ಮ ಕುಟುಂಬದ ವಿರುದ್ಧ ಸಿಎ ಸೈಟ್ ಹಂಚಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 27, 2024 | 4:10 PM

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿವೇಶನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿತ್ತಿವೆ. ಸಿಎಂ ವಿರುದ್ಧ ಮುಡಾ ಹಗರಣ ಬೆನ್ನಲ್ಲೇ ಈಗ ಖರ್ಗೆ ಕುಟುಂಬಕ್ಕೆ ಭೂಮಿ ಹಂಚಿಕೆ ಮಾಡಿರುವುದನ್ನು ಬಿಜೆಪಿ-ಜೆಡಿಎಸ್​​ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿವೆ. ಇನ್ನು ಇದೀಗ ಸ್ವತಃ ಸಚಿವ ಪ್ರಿಯಾಂಕ್ ಖರ್ಗೆ ಅವರೆ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಕುಟುಂಬದ ವಿರುದ್ಧ ಸಿಎ ಸೈಟ್ ಹಂಚಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ
ಪ್ರೀಯಾಂಕ್ ಖರ್ಗೆ
Follow us on

ಬೆಂಗಳೂರು, (ಆಗಸ್ಟ್ 27): ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿವೇಶನವನ್ನು ಅಕ್ರಮವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್​ ಆರೋಪಿಸುತ್ತಿವೆ. ಇನ್ನು ಈ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಐದು ಎಕರೆ ಮಂಜೂರು ವಿಚಾರಕ್ಕೆ ಸ್ವತಃ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಇದು ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಕ್ಕೆ ಪಡೆದಿಲ್ಲ. ಇದು ಸಿಎ ಜಮೀನು. ಎಂಬಿ ಪಾಟೀಲ್ ಅವರು ಇದರ ಬಗ್ಗೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ವು, 43 ಸಂಸ್ಥೆಗಳು ಮಾತ್ರ ಆಯ್ಕೆ ಆಗಿವೆ. ಇದರಲ್ಲಿ ಯಾವುದೇ ಪ್ರಭಾವ ಬೀರಿಲ್ಲ. ಬಿಜೆಪಿಯವರಿಗೆ ಕನಿಷ್ಟ ಜ್ಞಾನ ಇಲ್ಲ ಎಂದು ತಿರುಗೇಟು ನೀಡಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಿಎ ಸೈಟನ್ನು ಹರಾಜು ಹಾಕಲು ಹಾಗಲ್ಲ, ಅದನ್ನು ಖರಿದಿಯೇ ಮಾಡಬೇಕು. ಬಿಜೆಪಿಯವರು ಎಷ್ಟು ಜನ ಸಿಎ ನಿವೇಶನ ಪಡೆದಿಲ್ಲ ಕೇಳಿ. ಈ ಟ್ರಸ್ಟ್ ಮೂರು ದಶಕದಿಂದ ಚಾಲ್ತಿಯಲ್ಲಿದೆ, ಹಳೆಯ ಟ್ರಸ್ಟ್. ಶಿಕ್ಷಣ, ಸಮಾಜ ಸೇವೆ ಕೆಲಸ ಮಾಡಿಕೊಂಡು ಬರುತ್ತಿರುವ ಟ್ರಸ್ಟ್. ಯುವ ಸಮೂಹಕ್ಕೆ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯೋದು ತಪ್ಪಾ? ಇದಕ್ಕೆ ಜಮೀನು ಖಾಸಗಿಯವರು ಕೊಡಬೇಕು ಅಥವಾ ಸರ್ಕಾರದಿಂದ ಖರೀದಿ ಮಾಡಬೇಕು. ನಾವು ಸರ್ಕಾರದಿಂದ ಖರೀದಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದಿರು.

ಇದನ್ನೂ ಓದಿ: ಖರ್ಗೆ ಕುಟುಂಬದ ಟ್ರಸ್ಟ್​ಗೆ ಸಿಎ ಸೈಟ್ ಮಂಜೂರು ವಿವಾದಕ್ಕೆ ಸ್ಪಷ್ಟನೆ ನೀಡಿದ ಸಿಎಂ

ಬಿಜೆಪಿಯವರು ಪ್ರೇರಣಾ ಟ್ರಸ್ಟ್ ಅಕ್ರಮದ ಬಗ್ಗೆ ಮಾತಾಡಲಿ, ರಾಷ್ಟ್ರೋತ್ಥಾನ ಸಂಸ್ಥೆಗೆ ಭೂಮಿ‌ ಕೊಟ್ಟಿದ್ದಾರಲ್ಲ ಅದನ್ನು ಮಾತಾಡಲಿ. ಈ ವಿಚಾರದಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಟ್ಟು ರಾಜಕೀಯ ಮಾಡುತ್ತಿದ್ದಾರೆ.ಆಯಕಟ್ಟಿನ ಜಾಗದಲ್ಲಿ ನಾನಿದೀನಿ, ಅದಕ್ಕೆ ತಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಕಾನೂನು ಪ್ರಕಾರ ಜಮೀನು ತಗೋಬಾರದಾ? ನಮಗೆ ಅರ್ಹತೆ ಇಲ್ಲವಾ? ರಿಯಾಯತಿ ಕೇಳಿದೀವಿ, ಕುರ್ಚಿ ದುರ್ಬಳಕೆ ಮಾಡಿದ್ರೆ ಹೇಳಲಿ, ಅಂಥದ್ದೇನಾದ್ರೂ ಇದೆಯಾ? ಛಲವಾದಿಗೆ ಇಂಗ್ಲೀಷೂ ಬರಲ್ಲ, ಕಾನೂನು ಗೊತ್ತಿಲ್ಲ, ಸಿಎ ನಿವೇಶನಗಳ ಬಗ್ಗೆ ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.

ನಮ್ಮಣ್ಣ ರಾಹುಲ್ ಖರ್ಗೆಯವರ ಬಗ್ಗೆ ಛಲವಾದಿಯವರಿಗೆ ಏನು ಗೊತ್ತಿದೆ? ಅವರಿಗೆ ಯುವಿಯಲ್ಲಿ ಟಾಪ್ ಬಂದವರು. ಐಐಎಸ್‌ಸಿಯಲ್ಲಿ ಕೆಲಸ ಮಾಡಿದವರು ರಾಹುಲ್ ಖರ್ಗೆ. ಅವರು ರಾಜಕೀಯದಲ್ಲಿ ಇಲ್ಲ, ಅವರ ಬಗ್ಗೆ ಮಾತಾಡೋದನ್ನು ನಿಲ್ಲಿಸಿ. ಸಿಎ ಜಮೀನು ಖರೀದಿಸುವುದು ತಪ್ಪು ಎಂದು ಎಲ್ಲಿದೆ ನಿಯಮ? ಎಷ್ಟು ಜನ ಬಿಜೆಪಿಯವರು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ತೆರೆದಿಲ್ಲ? ಅವರೆಲ್ಲ ಡಾಕ್ಟರ್, ಇಂಜಿನಿಯರ್ ಆಗಿದ್ದಾರಾ? ನಾವೇನು ಲೂಟಿ ಹೊಡೆಯಲು ಮಾಡಿದ್ದೀವಾ? ಎಂದು ಪ್ರಶ್ನಿಸಿದರು.

ಮುಡಾ ವಿಚಾರ ಬಂತು ಅಂತ ಈಗ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಬರುತ್ತಿದೆ. ಸಿಎ ನಿವೇಶನ ಖರೀದಿ ಮಾಡಿದ್ದಕ್ಕೆ ಇಷ್ಟೊಂದು ಹೊಟ್ಟೆಕಿಚ್ಚೇಕೆ..? ನಾವು ನಮ್ಮ ಅರ್ಜಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೀವಿ. ಇಲ್ಲಿ ತಗೊಳ್ಳೋ ಬದಲು ಜವಳಿ ಪಾರ್ಕ್ ನಲ್ಲಿ ತಗೋಳ್ಳೋಕೆ ಆಗುತ್ತಾ? ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Tue, 27 August 24